ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಗೆ ಸೆಪ್ಟೆಂಬರ್ 22 ಮತ್ತು 23ರಂದು ಭೇಟಿ ನೀಡಲಿದ್ದಾರೆ.
ಈ ಭೇಟಿ ಅವಧಿಯಲ್ಲಿ ಪ್ರಧಾನಮಂತ್ರಿಯವರು ಮೂಲಸೌಕರ್ಯ, ರೈಲ್ವೆ, ಜವಳಿ, ಹಣಪೂರಣ, ಪರಿಸರ ಮತ್ತು ನೈರ್ಮಲ್ಯ, ಪಶು ಸಂಗೋಪನೆ, ಸಂಸ್ಕೃತಿ ಮತ್ತು ಧಾರ್ಮಿಕ ಹೀಗೆ ವೈವಿಧ್ಯಮಯ ವಿಷಯಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಧಾನಮಂತ್ರಿಯವರು ಬಡಾ ಲಾಲ್ ಪುರದಲ್ಲಿ ದೀನ್ ದಯಾಳ್ ಹಸ್ತಕಲಾ ಸಂಕುಲ – ಕರಕುಶಲ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡುವ ಕೇಂದ್ರವನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಸಂಕುಲದಲ್ಲಿನ ಸೌಲಭ್ಯಗಳನ್ನು ಅವರು ಕೆಲ ಕಾಲ ವೀಕ್ಷಿಸಲಿದ್ದಾರೆ. ಶ್ರೀ ನರೇಂದ್ರ ಮೋದಿ ಅವರು, ಮಹಾಮನ ಎಕ್ಸ್ ಪ್ರೆಸ್ ಗೆ ವಿಡಿಯೋ ಸಂಪರ್ಕದ ಮೂಲಕ ಹಸಿರು ನಿಶಾನೆ ತೋರಿಸಲಿದ್ದಾರೆ. ಈ ರೈಲು ವಾರಾಣಸಿಯನ್ನು ಗುಜರಾತ್ ನ ವಡೋದರ ಮತ್ತು ಸೂರತ್ ನೊಂದಿಗೆ ಸಂಪರ್ಕಿಸಲಿದೆ.
ಇದೇ ಸ್ಥಳದಲ್ಲಿ, ಪ್ರಧಾನಮಂತ್ರಿಯವರು, ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸಮರ್ಪಣೆ ಮತ್ತು ಆರಂಭಕ್ಕೆ ಅಥವಾ ಶಿಲಾನ್ಯಾಸಕ್ಕಾಗಿ ಫಲಕ ಅನಾವರಣ ಮಾಡಲಿದ್ದಾರೆ. ಉತ್ಕರ್ಷ್ ಬ್ಯಾಂಕ್ ಸೇವೆಯನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ, ಮತ್ತು ಬ್ಯಾಂಕ್ ನ ಪ್ರಧಾನಕಚೇರಿಯ ಕಟ್ಟಡದ ಶಂಕುಸ್ಥಾಪನೆಯ ಅಂಗವಾಗಿ ಫಲಕವನ್ನು ಅನಾವರಣ ಮಾಡಲಿದ್ದಾರೆ. ಉತ್ಕರ್ಷ್ ಬ್ಯಾಂಕ್ ಮೈಕ್ರೋ – ಹಣಕಾಸಿನಲ್ಲಿ ಪರಿಣತಿಯನ್ನು ಹೊಂದಿದೆ.
ಪ್ರಧಾನಮಂತ್ರಿಯವರು ವಿಡಿಯೋ ಸಂಪರ್ಕದ ಮೂಲಕ ವಾರಾಣಸಿಯ ಜನತೆಗಾಗಿ ಜಲ ಆಂಬ್ಯುಲೆನ್ಸ್ ಸೇವೆ ಮತ್ತು ಜಲ ಶವ ವಾಹನ ಸೇವೆಯನ್ನೂ ಸಮರ್ಪಣೆ ಮಾಡಲಿದ್ದಾರೆ.
ಸೆಪ್ಟೆಂಬರ್ 22ರ ಸಂಜೆ, ಪ್ರಧಾನಮಂತ್ರಿಯವರು ವಾರಾಣಸಿಯ ಐತಿಹಾಸಿಕ ತುಳಸಿ ಮಾನಸ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಅವರು ಅಲ್ಲಿ “ರಾಮಾಯಣ’ ಕುರಿತ ಅಂಚೆ ಚೀಟಿ ಬಿಡುಗಡೆ ಮಾಡಲಿದ್ದಾರೆ. ಬಳಿಕ ಅವರು ನಗರದ ದುರ್ಗಾ ಮಾತಾ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.
ಸೆಪ್ಟೆಂಬರ್ 23ರಂದು ಶಹಾನ್ಶಾಪುರ್ ಗ್ರಾಮದಲ್ಲಿ ಪ್ರಧಾನಮಂತ್ರಿಯವರು, ನೈರ್ಮಲ್ಯ ಸಂಬಂಧಿತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಪಶುಧನ್ ಆರೋಗ್ಯ ಮೇಳದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಪ್ರಧಾನಮಂತ್ರಿಯವರು ಪ್ರಧಾನಮಂತ್ರಿ ವಸತಿ ಯೋಜನೆ (ಗ್ರಾಮೀಣ ಮತ್ತು ನಗರ) ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಿದ್ದಾರೆ ಮತ್ತು ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.