ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಡಿಸೆಂಬರ್ 21ರಂದು ಪ್ರಯಾಗ್ ರಾಜ್ ಗೆ ಭೇಟಿ ನೀಡಲಿದ್ದಾರೆ ಮತ್ತು ಮಧ್ಯಾಹ್ನ ಸುಮಾರು 1 ಗಂಟೆಗೆ ಅಂದಾಜು 2 ಲಕ್ಷ ಮಹಿಳೆಯರು ಭಾಗವಹಿಸಲಿರುವ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪ್ರಧಾನಮಂತ್ರಿಯವರ ದೂರದೃಷ್ಟಿಯಂತೆ ಮಹಿಳೆಯರನ್ನು ಸಬಲೀಕರಣಗೊಳಿಸಲು ವಿಶೇಷವಾಗಿ ತಳಮಟ್ಟದಲ್ಲಿ ಅವರಿಗೆ ತಕ್ಕ ಅಗತ್ಯ ಕೌಶಲ್ಯ, ಪ್ರೊತ್ಸಾಹ ಮತ್ತು ಸಂಪನ್ಮೂಲಗಳನ್ನು ಒದಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಹಿಳೆಯರನ್ನು ಬೆಂಬಲಿಸುವ ಈ ಪ್ರಯತ್ನದಲ್ಲಿ ಪ್ರಧಾನಮಂತ್ರಿ ಅವರು ಸ್ವಸಹಾಯ ಗುಂಪುಗಳು (ಎಸ್ ಎಚ್ ಜಿ)ಗಳ ಸುಮಾರು 16 ಲಕ್ಷ ಮಹಿಳೆಯರಿಗೆ ಅನುಕೂಲವಾಗುವಂತೆ ಸ್ವ ಸಹಾಯ ಗುಂಪು (ಎಸ್ ಎಚ್ ಜಿ )ಗಳ ಬ್ಯಾಂಕ್ ಖಾತೆಗಳಿಗೆ 1000 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಲಿದ್ದಾರೆ. ಈ ವರ್ಗಾವಣೆಯನ್ನು ದೀನ್ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡಿಎವೈ-ಎನ್ ಆರ್ ಎಲ್ ಎಂ) ಅಡಿಯಲ್ಲಿ ಮಾಡಲಾಗುವುದು, ಸುಮಾರು 80 ಸಾವಿರ ಎಸ್ ಎಚ್ ಜಿಗಳಿಗೆ ಪ್ರತಿ ಎಸ್ ಎಚ್ ಜಿಗಳಿಗೆ ತಲಾ 1.10 ಲಕ್ಷ ರೂ. ಸಮುದಾಯ ಹೂಡಿಕೆ ನಿಧಿ (ಸಿಐಎಫ್ ) ಮತ್ತು 60,000 ಎಸ್ ಎಚ್ ಜಿಗಳಿಗೆ ತಲಾ 15,000 ರೂ. ಆವರ್ತ ನಿಧಿಯನ್ನು ಸ್ವೀಕರಿಸಲಿವೆ.
ಅಲ್ಲದೆ, ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು, ವ್ಯವಹಾರಿಕ ಪ್ರತಿನಿಧಿ- ಸಖಿ (ಬಿ.ಸಿ- ಸಖಿ)ಗಳನ್ನು ಉತ್ತೇಜಿಸಲು ಸುಮಾರು 20,000 ಬಿ.ಸಿ-ಸಖಿಗಳಿಗೆ ಮೊದಲ ತಿಂಗಳ ಸ್ಟೈಫಂಡ್ ತಲಾ 4,000 ರೂ.ಗಳನ್ನು ವರ್ಗಾವಣೆ ಮಾಡಲಿದ್ದಾರೆ. ಬಿ.ಸಿ ಸಖಿಯರು ತಳಮಟ್ಟದಲ್ಲಿ ಮನೆ ಬಾಗಿಲಿಗೆ ಹಣಕಾಸು ಸೇವೆಗಳನ್ನು ಪೂರೈಕೆದಾರರಾಗಿ ತಮ್ಮ ಕೆಲಸವನ್ನು ಪ್ರಾರಂಭಿಸಿದಾಗ, ಅವರಿಗೆ 4,000 ರೂ. ನೀಡಲಿದೆ. ಇದರಿಂದ ಅವರು ತಮ್ಮ ಕೆಲಸದಲ್ಲಿನ ಸ್ಥಿರತೆಯನ್ನು ಪಡೆಯುತ್ತಾರೆ ಮತ್ತು ನಂತರ ವಹಿವಾಟುಗಳ ಮೇಲೆ ಕಮೀಷನ್ ಗಳಿಸುತ್ತಾರೆ.
ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿ ಅವರು, ಮುಖ್ಯಮಂತ್ರಿ ಕನ್ಯಾ ಸುಮಂಗಲಾ ಯೋಜನೆಯಡಿ 1ಲಕ್ಷ ರೂ. ಅಧಿಕ ಫಲಾನುಭವಿಗಳಿಗೆ ಸುಮಾರು 20 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಲಿದ್ದಾರೆ. ಈ ಯೋಜನೆಯಡಿ ಹೆಣ್ಣು ಮಕ್ಕಳಿಗೆ ಜೀವನದ ನಾನಾ ಹಂತಗಳಲ್ಲಿ ಷರತ್ತಿನ ನಗದು ವರ್ಗಾವಣೆ ಮಾಡಲಾಗುವುದು. ಪ್ರತಿ ಫಲಾನುಭವಿಗೆ ಒಟ್ಟು 15,000 ರೂ. ವರ್ಗಾವಣೆಯಾಗಲಿದೆ. ಆ ಹಂತಗಳೆಂದರೆ ಜನಿಸಿದಾಗ (2,000 ರೂ.), ಒಂದು ವರ್ಷದ ಲಸಿಕೀಕರಣ ಕಾರ್ಯ ಪೂರ್ಣಗೊಳಿಸಿದಾಗ (1,000 ರೂ.), I ನೇ ತರಗತಿಗೆ ಪ್ರವೇಶವಾದಾಗ (2,000 ರೂ.), VI ನೇ ತರಗತಿ ಪ್ರವೇಶದ ವೇಳೆ (2,000 ರೂ.) ಮತ್ತು IX ನೇ ತರಗತಿ ಪ್ರವೇಶದ ವೇಳೆ (3,000 ರೂ.) ಮತ್ತು X ಅಥವಾ XII ಪಾಸಾದ ಬಳಿಕ ಯಾವುದೇ ಪದವಿ/ ಡಿಪ್ಲೊಮಾ ಕೋರ್ಸ್ ಗಳಿಗೆ ಪ್ರವೇಶದ ವೇಳೆ (5,000 ರೂ.) ವರ್ಗಾವಣೆ ಮಾಡಲಾಗುವುದು.
ಅಲ್ಲದೆ, ಪ್ರಧಾನಮಂತ್ರಿ ಅವರು 202 ಪೂರಕ ಪೌಷ್ಟಿಕಾಂಶ ಉತ್ಪಾದನಾ ಘಟಕಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಘಟಕಗಳಿಗೆ ಸ್ವಸಹಾಯ ಗುಂಪುಗಳು ಆರ್ಥಿಕ ನೆರವು ನೀಡಲಿವೆ ಮತ್ತು ಅವುಗಳನ್ನು ಪ್ರತಿ ಘಟಕಕ್ಕೆ ಸುಮಾರು 1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು. ಈ ಘಟಕಗಳು ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ (ಐಸಿಡಿಎಸ್) ಅಡಿಯಲ್ಲಿ ರಾಜ್ಯದ ಸುಮಾರು 600 ಬ್ಲಾಕ್ ಗಳಲ್ಲಿ ಪೂರಕ ಪೌಷ್ಟಿಕಾಂಶ ಪೂರೈಕೆ ಮಾಡಲಿವೆ.