ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2019 ರ ಸೆಪ್ಟೆಂಬರ್ 7 ರಂದು ಮಹಾರಾಷ್ಟ್ರದ ಮುಂಬಯಿ ಮತ್ತು ಔರಂಗಾಬಾದ್ ಗಳಿಗೆ ಭೇಟಿ ನೀಡುವರು
ಮುಂಬಯಿ
ಮುಂಬಯಿಯಲ್ಲಿ ಪ್ರಧಾನ ಮಂತ್ರಿ ಅವರು ಮೂರು ಮೆಟ್ರೋ ಮಾರ್ಗಗಳಿಗೆ ಶಿಲಾನ್ಯಾಸ ನೆರವೇರಿಸುವರು. ಇವೆಲ್ಲವೂ ಸೇರಿದರೆ ನಗರದ ಮೆಟ್ರೋ ರೈಲ್ವೇ ಜಾಲಕ್ಕೆ 42 ಕಿಲೋ ಮೀಟರಿಗೂ ಅಧಿಕ ಉದ್ದದ ಮಾರ್ಗ ಸೇರ್ಪಡೆಯಾಗಲಿದೆ. ಈ ಮೂರು ಕಾರಿಡಾರುಗಳೆಂದರೆ-9.2 ಕಿಲೋ ಮೀಟರ್ ಉದ್ದದ ಗಾಯಿಮುಖದಿಂದ ಶಿವಾಜಿ ಚೌಕ (ಮಿರಾ ರೋಡ್) ಮೆಟ್ರೋ -10 ಕಾರಿಡಾರ್, 12.7 ಕಿಲೋ ಮೀಟರ್ ಉದ್ದದ ವಡಾಲಾದಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮೆಟ್ರೋ-11 ಕಾರಿಡಾರ್ ಮತ್ತು 20.7 ಕಿಲೋ ಮೀಟರ್ ಉದ್ದದ ಕಲ್ಯಾಣದಿಂದ ತಾಲೋಜಾ-12 ಕಾರಿಡಾರ್.
ಪ್ರಧಾನ ಮಂತ್ರಿ ಅವರು ಅತ್ಯಾಧುನಿಕ ಮೆಟ್ರೋ ಭವನಕ್ಕೆ ಶಿಲಾನ್ಯಾಸ ನೆರವೇರಿಸುವರು; ಈ 32 ಮಹಡಿಗಳ ಕಟ್ಟಡ ಕೇಂದ್ರದಿಂದ ಸುಮಾರು 340 ಕಿಲೋ ಮೀಟರ್ ಉದ್ದದ 14 ಮೆಟ್ರೋ ಮಾರ್ಗಗಳ ಕಾರ್ಯಾಚರಣೆ ಮತ್ತು ನಿಯಂತ್ರಣ ನಡೆಯಲಿದೆ.
ಪ್ರಧಾನ ಮಂತ್ರಿ ಅವರು ಕಾಂದಿವಲಿ ಪೂರ್ವದ ಬಾಂಡೋಂಗ್ರಿ ಮೆಟ್ರೋ ನಿಲ್ದಾಣವನ್ನು ಉದ್ಘಾಟಿಸುವರು.
ಅವರು ಮೇಕ್ ಇನ್ ಇಂಡಿಯಾದಡಿ ನಿರ್ಮಾಣವಾದ ಮೊದಲ ಮೆಟ್ರೋ ಬೋಗಿಯಾಗಿರುವ ಅತ್ಯಾಧುನಿಕ ಮೆಟ್ರೋ ಬೋಗಿಯನ್ನು ಉದ್ಘಾಟಿಸುವರು.
ಮಹಾ ಮುಂಬಯಿ ಮೆಟ್ರೋಗಾಗಿರುವ ಬ್ರಾಂಡ್ ಮುನ್ನೋಟ ದಾಖಲೆ (ವಿಷನ್ ಡಾಕ್ಯುಮೆಂಟ್ ) ಯನ್ನು ಪ್ರಧಾನ ಮಂತ್ರಿ ಅವರು ಬಿಡುಗಡೆ ಮಾಡುವರು.
ಔರಂಗಾಬಾದಿನಲ್ಲಿ ಪ್ರಧಾನ ಮಂತ್ರಿ ಅವರು ಮಹಾರಾಷ್ಟ್ರ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ (ಯು.ಎಂ.ಇ.ಡಿ.) ಆಯೋಜಿಸಿರುವ ರಾಜ್ಯ ಮಟ್ಟದ ಮಹಿಳಾ ಸಕ್ಷಮ ಮೇಳಾವ ಅಥವಾ ಸ್ವಸಹಾಯ ಗುಂಪುಗಳ ಸಶಕ್ತ ಮಹಿಳೆಯರ ಸಮಾವೇಶವನ್ನುದ್ದೇಶಿಸಿ ಮಾತನಾಡುವರು.
2019ರ ಸೆಪ್ಟೆಂಬರ್ 7 ರಂದು ಔರಂಗಬಾದಿನಲ್ಲಿ ಔರಂಗಬಾದ್ ಕೈಗಾರಿಕಾ ನಗರ (ಎ.ಯು.ಆರ್.ಐ.ಸಿ. ನಗರ) ದ ವ್ಯಾಪಾರ ಮತ್ತು ಆಡಳಿತ ಕಟ್ಟಡಗಳನ್ನು ಉದ್ಘಾಟಿಸುವ ಪ್ರಧಾನ ಮಂತ್ರಿ ಅವರು ಡಿ.ಎಂ.ಐ.ಸಿ. ಎ.ಯು.ಆರ್.ಐ.ಸಿ. ನಗರವನ್ನು ರಾಷ್ಟ್ರಕ್ಕೆ ಅರ್ಪಿಸುವರು. ದಿಲ್ಲಿ ಮುಂಬಯಿ ಕೈಗಾರಿಕಾ ಕಾರಿಡಾರ್ (ಡಿ.ಎಂ.ಐ.ಸಿ.) ಯೋಜನೆಯು ಭಾರತ ಸರಕಾರ ಘೋಷಿಸಿದ ಮೊದಲ ಕೈಗಾರಿಕಾ ಕಾರಿಡಾರ್ ಯೋಜನೆಯಾಗಿದೆ. ಡಿ.ಎಂ.ಐ.ಸಿ. ಯೋಜನೆ ಪೂರ್ಣಗೊಂಡಾಗ ಅದು ಸುಮಾರು 1 ಲಕ್ಷ ಕೋಟಿ ರೂ. ಹೂಡಿಕೆಯನ್ನು ತರಲಿದೆ ಮತ್ತು ಸುಮಾರು 10 ಲಕ್ಷ ಜನರಿಗೆ ಉದ್ಯೋಗಾವಕಾಶ ಒದಗಿಸಲಿದೆ.ಈ ಯೋಜನೆಯನ್ನು ಔರಂಗಾಬಾದ್ ಕೈಗಾರಿಕಾ ನಗರ ಅಥವಾ “ಔರಕ್ ಸಿಟಿ” ಎಂದು ಬ್ರಾಂಡ್ ಮಾಡಲಾಗಿದೆ