ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2019 ರ ಜನವರಿ 27 ರಂದು ತಮಿಳುನಾಡಿನ ಮಧುರೈಗೆ ಭೇಟಿ ನೀಡಲಿದ್ದಾರೆ. ಮಧುರೈಯಲ್ಲಿ ಎ.ಐ.ಐ.ಎಂ.ಎಸ್.ಗೆ ಪ್ರಧಾನಮಂತ್ರಿ ಅವರು ಶಿಲಾನ್ಯಾಸ ಮಾಡಲಿರುವುದರಿಂದ ಮತ್ತು ಅದೇ ದಿನ ಮೂರು ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ಮೇಲ್ದರ್ಜೆಗೇರಿಸುವ ಯೋಜನೆಗಳ ಅಂಗವಾಗಿ ಮಧುರೈ ರಾಜಾಜಿ ವೈದ್ಯಕೀಯ ಕಾಲೇಜು , ತಂಜಾವೂರು ವೈದ್ಯಕೀಯ ಕಾಲೇಜು, ಮತ್ತು ತಿರುನೆಲ್ವೇಲಿ ವೈದ್ಯಕೀಯ ಕಾಲೇಜುಗಳ ಸೂಪರ್ ಸ್ಪೆಷಾಲಿಟಿ ಬ್ಲಾಕ್ ಗಳನ್ನು ಉದ್ಘಾಟಿಸಲಿರುವುದರಿಂದ ಅವರ ಈ ಭೇಟಿ ಮಧುರೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಆರೋಗ್ಯ ರಕ್ಷಣಾ ಸವಲತ್ತು ಮತ್ತು ಸೇವೆಗಳನ್ನು ಒದಗಿಸಲು ಉತ್ತೇಜನ ಕೊಡಲಿರುವುದರಿಂದಾಗಿ ಮಹತ್ವದ ಭೇಟಿಯಾಗಿದೆ. ಈ ಸಂದರ್ಭ ಪ್ರಧಾನಮಂತ್ರಿ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವರು.
ಎ.ಐ.ಐ.ಎಂ.ಎಸ್. ಮಧುರೈ
ಪ್ರಧಾನಮಂತ್ರಿ ಅವರು ಎ.ಐ.ಐ.ಎಂ.ಎಸ್. ಮಧುರೈಗೆ ಶಿಲಾನ್ಯಾಸವನ್ನು ಸಂಕೇತಿಸುವ ಅಂಗವಾಗಿ ನಾಮಫಲಕ ಅನಾವರಣ ಮಾಡುವರು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಮಧುರೈಯ ಥೋಪ್ಪುರದಲ್ಲಿ ಎ.ಐ.ಐ.ಎಂ.ಎಸ್. ಸ್ಥಾಪನೆಗೆ 17-12-2018 ರಂದು ಅನುಮೋದನೆ ನೀಡಿತ್ತು. ತಮಿಳುನಾಡಿಗೆ ಎ.ಐ.ಐ.ಎಂ.ಎಸ್. ಅನ್ನು 2015-16 ರ ಕೇಂದ್ರ ಬಜೆಟ್ಟಿನಲ್ಲಿ ಘೋಷಿಸಲಾಗಿತ್ತು. ಹೊಸ ಎ.ಐ.ಐ.ಎಂ.ಎಸ್. ನ ನಿರ್ಮಾಣ, ಕಾರ್ಯಾಚರಣೆ, ಮತ್ತು ನಿರ್ವಹಣೆಗಾಗಿ ತಗಲುವ 1264 ಕೋ.ರೂ.ಗಳನ್ನು ಪೂರ್ಣವಾಗಿ ಕೇಂದ್ರ ಸರಕಾರದಿಂದ ಭರಿಸಲು ಬಜೆಟ್ಟಿನಲ್ಲಿ ಅನುದಾನಕ್ಕೆ ಮಂಜೂರಾತಿ ನೀಡಲಾಗಿತ್ತು. ಇದು 45 ತಿಂಗಳಲ್ಲಿ, 2022 ರ ಸೆಪ್ಟೆಂಬರ್ ತಿಂಗಳೊಳಗೆ ಪೂರ್ಣಗೊಳ್ಳಲಿದೆ.
ಎ.ಐ.ಐ.ಎಂ.ಎಸ್. ಮಧುರೈ 30 ತುರ್ತು/ಟ್ರೂಮಾ ಹಾಸಿಗೆಗಳು, ಐ.ಸಿ.ಯು ಮತ್ತು ಸಂಕೀರ್ಣ ಚಿಕಿತ್ಸಾ ಘಟಕದಲ್ಲಿ 75 ಹಾಸಿಗೆಗಳು, ಸೂಪರ್ ಸ್ಪೆಷಾಲಿಟಿಯಲ್ಲಿ 215 ಹಾಸಿಗೆಗಳು, ಸ್ಪೆಷಾಲಿಟಿಯಲ್ಲಿ 285 ಹಾಸಿಗೆಗಳು, ಶಸ್ತ್ರಚಿಕಿತ್ಸಾ ಮತ್ತು ವೈದ್ಯಕೀಯ ಘಟಕಗಳು, ಆಯುಷ್ ಮತ್ತು ಪ್ರೈವೇಟ್ ವಾರ್ಡ್ ಗಳಲ್ಲಿ 30 ಹಾಸಿಗೆಗಳ ಸಹಿತ 750 ಹಾಸಿಗೆಗಳ ಆಸ್ಪತ್ರೆಯನ್ನು ಒಳಗೊಂಡಿರುತ್ತದೆ. ಇದರ ಜೊತೆಗೆ ಅಲ್ಲಿ ಆಡಳಿತ ಬ್ಲಾಕ್, ಸಭಾಂಗಣ, ರಾತ್ರಿ ತಂಗುದಾಣ, ಅತಿಥಿ ಗೃಹ, ಹಾಸ್ಟೆಲ್ ಗಳು, ಮತ್ತು ನಿವಾಸದ ಸೌಲಭ್ಯಗಳು ಇರುತ್ತವೆ.
ಮಧುರೈ ಎ.ಐ.ಐ.ಎಂ.ಎಸ್. ಅನ್ನು ಸ್ನಾತಕೋತ್ತರ ಮತ್ತು ಉನ್ನತ ಶಿಕ್ಷಣ ಹಾಗು ಸಂಶೋಧನೆಗಾಗಿ ಧೀರ್ಘಾವಧಿ ಆದ್ಯತೆಯಡಿ ಸ್ಥಾಪಿಸಲಾಗುತ್ತಿದೆ. ಇದು 100 ಎಂ.ಬಿ.ಬಿ.ಎಸ್. ಸೀಟುಗಳು; 60 ಬಿ.ಎಸ್.ಸಿ.(ನರ್ಸಿಂಗ್) ಸೀಟುಗಳನ್ನು ಒಳಗೊಂಡಿರುತ್ತದೆ.
ಹೊಸ ಎ.ಐ.ಐ.ಎಂ.ಎಸ್. ಗಳ ಸ್ಥಾಪನೆ ಈ ವಲಯದಲ್ಲಿ ಆರೋಗ್ಯ ರಕ್ಷಣಾ ಸೌಲಭ್ಯಗಳು, ಆರೋಗ್ಯ ಶಿಕ್ಷಣ ಮತ್ತು ತರಬೇತಿಗಳಲ್ಲಿ ಪರಿವರ್ತನೆಯನ್ನು ತರಲಿದೆ. ಇದು ಈ ವಲಯದಲ್ಲಿ ಆರೋಗ್ಯ ರಕ್ಷಣಾ ವೃತ್ತಿಪರರ ಕೊರತೆಯನ್ನು ನೀಗಿಸಲಿದೆ. ಎ.ಐ.ಐ.ಎಂ.ಎಸ್. ಗಳ ಸ್ಥಾಪನೆ, ಜನತೆಗೆ ಸೂಪರ್ ಸ್ಪೆಷಾಲಿಟಿ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಒದಗಿಸುವುದಲ್ಲದೆ ವೈದ್ಯರ ದೊಡ್ದ ಸಮೂಹವನ್ನು, ಇತರ ಆರೋಗ್ಯ ಕಾರ್ಯಕರ್ತರ ಸಮೂಹವನ್ನು ಈ ವಲಯದಲ್ಲಿ ನಿರ್ಮಾಣ ಮಾಡುತ್ತದೆ, ಇದು ರಾಷ್ಟ್ರೀಯ ಆರೋಗ್ಯ ಮಿಶ್ಷನ್ (ಎನ್.ಎಚ್.ಎಂ.) ಅಡಿಯಲ್ಲಿ ನಿರ್ಮಾಣವಾಗುವ ಪ್ರಾಥಮಿಕ ಮತ್ತು ಸೆಕೆಂಡರಿ ಮಟ್ಟದ ಸಂಸ್ಥೆಗಳಿಗೆ/ ಸೌಲಭ್ಯಗಳಿಗೆ ಲಭ್ಯವಾಗುತ್ತದೆ.
ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ಮೇಲ್ದರ್ಜೆಗೇರಿಸುವ ಯೋಜನೆಗಳು;
ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ಮೇಲ್ದರ್ಜೆಗೇರಿಸುವ ಯೋಜನೆಗಳ ಅಂಗವಾಗಿ ಕೈಗೆತ್ತಿಕೊಳ್ಳಲಾದ ಮಧುರೈಯ ರಾಜಾಜಿ ವೈದ್ಯಕೀಯ ಕಾಲೇಜಿನ ಸೂಪರ್ ಸ್ಪೆಷಾಲಿಟಿ ಬ್ಲಾಕ್, ತಂಜಾವೂರು ವೈದ್ಯಕೀಯ ಕಾಲೇಜು ಮತ್ತು ತಿರುನೆಲ್ವೇಲಿ ವೈದ್ಯಕೀಯ ಕಾಲೇಜಿನ ಸೂಪರ್ ಸ್ಪೆಷಾಲಿಟಿ ಬ್ಲಾಕ್ ಗಳನ್ನು ಉದ್ಘಾಟಿಸಲಿರುವ ಪ್ರಧಾನ ಮಂತ್ರಿ ಅವರು ಈ ಸಂಬಂಧ ನಾಮಫಲಕಗಳನ್ನು ಅನಾವರಣ ಮಾಡುವರು.
ಸೂಪರ್ ಸ್ಪೆಷಾಲಿಟಿ ಬ್ಲಾಕ್ ಗಳೊಂದಿಗೆ ಮೂರು ವೈದ್ಯಕೀಯ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲು ಒಟ್ಟು ಯೋಜನಾ ವೆಚ್ಚ 450 ಕೋ.ರೂ.ಗಳು. ಮೂರು ಯೋಜನೆಗಳ ತಲಾ ವೆಚ್ಚ 150 ಕೋ.ರೂ.ಗಳು, ಇದರಲ್ಲಿ ಕೇಂದ್ರದ ಪಾಲು 125 ಕೋ.ರೂ.ಗಳು ಮತ್ತು ರಾಜ್ಯದ ಪಾಲು 25 ಕೋ.ರೂ.ಗಳು.
ರಾಜಾಜಿ ವೈದ್ಯಕೀಯ ಕಾಲೇಜು, ಮಧುರೈ, ಇಲ್ಲಿ ಈ ಯೋಜನೆಯಡಿ ನರರೋಗ ಶಸ್ತ್ರ ಚಿಕಿತ್ಸೆ, ನರರೋಗ ಶಾಸ್ತ್ರ, ನೆಫ್ರಾಲಜಿ, ಪ್ಲಾಸ್ಟಿಕ್ ಸರ್ಜರಿ, ಮೂತ್ರ ರೋಗ ಶಾಸ್ತ್ರ, ಮೈಕ್ರೋ ವಾಸ್ಕುಲಾರ್, ಹಾಗು ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಗ್ಯಾಸ್ಟ್ರೋ ಎಂಟರಾಲಜಿ ಸಹಿತ 7 ವಿಭಾಗಗಳೊಂದಿಗೆ (50 ಐ.ಸಿ.ಯು. ಹಾಸಿಗೆಗಳ ಸಹಿತ ) 320 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಬ್ಲಾಕ್ ನಿರ್ಮಾಣ ಸೇರಿದೆ.
ತಿರುನೆಲ್ವೇಲಿ ವೈದ್ಯಕೀಯ ಕಾಲೇಜು, ತಿರುನೆಲ್ವೇಲಿ, ಇಲ್ಲಿ ಈ ಯೋಜನೆಯಡಿ ಹೃದ್ರೋಗ ಶಾಸ್ತ್ರ, ಹೃದಯ ಶಸ್ತ್ರ ಚಿಕಿತ್ಸೆ (ಸಿ.ಟಿ.ವಿ.ಎಸ್.) , ನರ ರೋಗ ಶಾಸ್ತ್ರ , ಮೂತ್ರ ರೋಗ ಶಾಸ್ತ್ರ, ನೆಫ್ರಾಲಜಿ, ಅಂಗ ಪುನಾರಚನಾ ಶಸ್ತ್ರಚಿಕಿತ್ಸೆ, ವೈದ್ಯಕೀಯ ಗ್ಯಾಸ್ಟ್ರೋಎಂಟರಾಲಜಿ ಮತ್ತು ಗ್ಯಾಸ್ಟ್ರೋ ಎಂಟರಾಲಜಿ ಶಸ್ತ್ರ ಚಿಕಿತ್ಸೆ ಸಹಿತ 8 ವಿಭಾಗಗಳನ್ನು ಒಳಗೊಂಡು ಒಟ್ಟು 330 ಹಾಸಿಗೆಗಳ (50 ಐ.ಸಿ.ಯು. ಹಾಸಿಗೆಗಳ ಸಹಿತ) ಆಸ್ಪತ್ರೆ ಹಾಗು 7 ಶಸ್ತ್ರಚಿಕಿತ್ಸಾ ಕೊಠಡಿಗಳ ನಿರ್ಮಾಣ ಒಳಗೊಂಡಿದೆ.
ಈ ಯೋಜನೆಗಳನ್ನು ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನಾ ಅಂಗವಾಗಿ ಕೈಗೆತ್ತಿಕೊಳ್ಳಲಾಗಿದ್ದು, ಇದರಡಿ ದೇಶಾದ್ಯಂತ 20 ಎ.ಐ.ಐ.ಎಂ.ಎಸ್. ಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದ್ದು, ಇದರಲ್ಲಿ 6 ನ್ನು ಈಗಾಗಲೇ ಸ್ಥಾಪಿಸಲಾಗಿದೆ ಮತ್ತು ದೇಶಾದ್ಯಂತ 73 ವೈದ್ಯಕೀಯ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ. ಹೊಸ ಎ.ಐ.ಐ.ಎಂ.ಎಸ್. ಮತ್ತು ತಮಿಳುನಾಡಿನಲ್ಲಿ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮೂರು ಸೂಪರ್ ಸ್ಪೆಷಾಲಿಟಿ ಬ್ಲಾಕುಗಳು ಆರೋಗ್ಯ ಪೂರ್ಣ ಭಾರತದತ್ತ ಸರಕಾರದ ಬದ್ದತೆಯನ್ನು ಪ್ರತಿಫಲಿಸುತ್ತದೆ, ಮತ್ತು ಇದು ಮಧುರೈ ಹಾಗು ಸುತ್ತಮುತ್ತಲಿನ ಜನರ ಆರೋಗ್ಯ ಸಂಬಂಧಿ ಆವಶ್ಯಕತೆಗಳನ್ನು ಈಡೇರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ನಿರೀಕ್ಷೆ ಇದೆ.