ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2019ರ ಫೆಬ್ರವರಿ 12ರಂದು ಹರಿಯಾಣದ ಕುರುಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಸ್ವಚ್ಛ ಶಕ್ತಿ 2019ರಲ್ಲಿ ಭಾಗಿಯಾಗಲಿದ್ದಾರೆ. ಹರಿಯಾಣದಲ್ಲಿ ಅವರು ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಉದ್ಘಾಟನೆ ಮಾಡಲಿದ್ದಾರೆ.
ಸ್ವಚ್ಛಶಕ್ತಿ -2019
ಪ್ರಧಾನಮಂತ್ರಿಯವರು ಸ್ವಚ್ಛ ಶಕ್ತಿ 2019ರಲ್ಲಿ ಭಾಗಿಯಾಗಲಿದ್ದಾರೆ ಮತ್ತು ಸ್ವಚ್ಛ ಶಕ್ತಿ 2019ರ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಕುರುಕ್ಷೇತ್ರದಲ್ಲಿ ಅವರು ಸ್ವಚ್ಛ ಸುಂದರ ಶೌಚಾಲಯ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿ, ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಸ್ವಚ್ಛ ಶಕ್ತಿ 2019 ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ದೇಶಾದ್ಯಂತದ ಮಹಿಳಾ ಪಂಚರು ಮತ್ತು ಸರಪಂಚರು ಭಾಗವಹಿಸಲಿದ್ದಾರೆ. ಈ ವರ್ಷ 15 ಸಾವಿರ ಮಹಿಳೆಯರು ಸ್ವಚ್ಛ ಶಕ್ತಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಈ ಕಾರ್ಯಕ್ರಮವು ಮಹಿಳೆಯರ ಸಬಲೀಕರಣದ ಗುರಿಯನ್ನು ಹೊಂದಿದೆ.
ಸ್ವಚ್ಛ ಶಕ್ತಿಯ ಪ್ರಥಮ ಆವೃತ್ತಿಗೆ ಗುಜರಾತ್ ನ ಗಾಂಧಿನಗರದಲ್ಲಿ ಪ್ರಧಾನಮಂತ್ರಿಯವರು ಅಂತಾರಾಷ್ಟ್ರೀಯ ಮಹಿಳಾ ದಿನದಂದು ಚಾಲನೆ ನೀಡಿದ್ದರು. ಸ್ವಚ್ಛ ಶಕ್ತಿ 2018ರ ಕಾರ್ಯಕ್ರಮ ಉತ್ತರ ಪ್ರದೇಶದ ಲಖನೌನಲ್ಲಿ ಜರುಗಿತ್ತು. ಈಗ ಮೂರನೇ ಆವೃತ್ತಿಯು ಮಹಿಳೆಯರ ಸಬಲೀಕರಣಕ್ಕಾಗಿ ಹರಿಯಾಣದ ಕುರುಕ್ಷೇತ್ರದಲ್ಲಿ ಉದ್ಘಾಟನೆಯಾಗಲಿದೆ.
ಅಭಿವೃದ್ಧಿ ಯೋಜನೆಗಳು
ಝಜ್ಜರ್, ಭಾದ್ಶಾ, ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ ದೇಶಕ್ಕೆ ಸಮರ್ಪಣೆ
ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯು ಸುಸಜ್ಜಿತ ತೃತೀಯ ಹಂತದ ಕ್ಯಾನ್ಸರ್ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆಯಾಗಿದ್ದು, ಝಜ್ಜರ್ ನ ಏಮ್ಸ್ ಆವರಣದಲ್ಲಿ ನಿರ್ಮಾಣವಾಗಿದೆ. 700 ಹಾಸಿಗೆಗಳ ಆಸ್ಪತ್ರೆಯಲ್ಲಿ ಸರ್ಜಿಕಲ್ ಆಂಕೋಲಜಿ, ರೇಡಿಯೇಷನ್ ಆಂಕೋಲಜಿ, ಮೆಡಿಕಲ್ ಆಂಕೋಲಜಿ, ಅರೆವಳಿಕೆ, ಉಪಶಮನ ಆರೈಕೆ ಮತ್ತು ಪರಮಾಣು ಔಷಧದಂಥ ವಿವಿಧ ಸೌಲಭ್ಯಗಳನ್ನು ಒಳಗೊಂಡಿದೆ, ಜೊತೆಗೆ ವೈದ್ಯರಿಗೆ ಮತ್ತು ರೋಗಿಗಳ ಸಹಾಯಕ್ಕೆ ಬರುವವರಿಗೆ ಹಾಸ್ಟೆಲ್ ಕೊಠಡಿಗಳೂ ಇವೆ. ಎನ್.ಸಿ.ಐ ದೇಶದಲ್ಲಿ ಕ್ಯಾನ್ಸರ್ ಗೆ ಸಂಬಂಧಿಸಿದ ಎಲ್ಲ ಚಿಕಿತ್ಸೆಯ ನೋಡಲ್ ಸಂಸ್ಥೆಯಾಗಿದೆ ಮತ್ತು ದೇಶದಲ್ಲಿರುವ ಪ್ರಾದೇಶಿಕ ಕ್ಯಾನ್ಸರ್ ಸಂಸ್ಥೆಗಳು ಹಾಗೂ ಇತರ ಕ್ಯಾನ್ಸರ್ ಸಂಸ್ಥೆಗಳೊಂದಿಗೆ ಸಂಪರ್ಕವನ್ನು ಹೊಂದಿದೆ. ದೇಶದ ಪ್ರಧಾನ ಕ್ಯಾನ್ಸರ್ ಸಂಸ್ಥೆಯಾಗಿರುವ ಝಜ್ಜರ್ ನ ಎನ್.ಸಿ.ಐ, ಮಾಲಿಕ್ಯುಲರ್ ಜೀವಶಾಸ್ತ್ರ, ಜೀನೋಮಿಕ್ಸ್, ಪ್ರೊಟಿಯೊಮಿಕ್ಸ್, ಕ್ಯಾನ್ಸರ್ ಎಪಿಡೆಮಿಯಾಲಜಿ, ವಿಕಿರಣ ಜೀವಶಾಸ್ತ್ರ ಮತ್ತು ಕ್ಯಾನ್ಸರ್ ಲಸಿಕೆಗಳಲ್ಲಿನ ಮೂಲಭೂತ ಮತ್ತು ಆನ್ವಯಿಕ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಆದ್ಯತೆಯ ಪ್ರದೇಶಗಳನ್ನು ಗುರುತಿಸುವ ಹೊಣೆ ನಿಭಾಯಿಸಲಿದೆ.
ಫರೀದಾಬಾದ್ ಇ.ಎಸ್.ಐ.ಸಿ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಉದ್ಘಾಟನೆ
ಇದು ಉತ್ತರ ಭಾರತದ ಪ್ರಥಮ ಇ.ಎಸ್.ಐ.ಸಿ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಾಗಿದೆ. 510 ಹಾಸಿಗೆಗಳ ಆಸ್ಪತ್ರೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಡಿಯಲ್ಲಿನ ಇ.ಎಸ್.ಐ.ಸಿ. ವಿಮೆ ಹೊಂದಿರುವವರಿಗೆ ಮತ್ತು ಅವರ ಫಲಾನುಭವಿಗಳಿಗೆ ಅದರಲ್ಲೂ ಕಾರ್ಮಿಕರಿಗೆ ಮತ್ತು ಅವರ ಅವಲಂಬಿತರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ.
ಪಂಚಕುಲದಲ್ಲಿ ರಾಷ್ಟ್ರೀಯ ಆಯುರ್ವೇದ ಸಂಸ್ಥೆಗೆ ಶಿಲಾನ್ಯಾಸ
ಪಂಚಕುಲದ ರಾಷ್ಟ್ರೀಯ ಆಯುರ್ವೇದ ಸಂಸ್ಥೆಯನ್ನು ಪಂಚಕುಲದ ಶ್ರೀ ಮಾತಾ ಮಾನಸ ದೇವಿ ದೇವಾಲಯ ಸಂಕೀರ್ಣದಲ್ಲಿ ಸ್ಥಾಪಿಸಲಾಗುತ್ತಿದೆ. ಇದು ಆಯುರ್ವೇದ ಚಿಕಿತ್ಸೆ, ಶಿಕ್ಷಣ ಮತ್ತು ಸಂಶೋಧನೆಗೆ ರಾಷ್ಟ್ರಮಟ್ಟದ ಸಂಸ್ಥೆಯಾಗಿದೆ. ಇದು ಪೂರ್ಣಗೊಂಡ ತರುವಾಯ ಇದು ಹರಿಯಾಣ ಮತ್ತು ಸುತ್ತಮುತ್ತಲ ರಾಜ್ಯಗಳ ಜನರಿಗೆ ತುಂಬಾ ಪ್ರಯೋಜನವಾಗಲಿದೆ.
ಕುರುಕ್ಷೇತ್ರದಲ್ಲಿ ಶ್ರೀಕೃಷ್ಣ ಆಯುಷ್ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ
ಶ್ರೀ ಕೃಷ್ಣ ಆಯುಷ್ ವಿಶ್ವವಿದ್ಯಾನಿಲಯವು, ಹರಿಯಾಣದಲ್ಲಿ ಮತ್ತು ಭಾರತದಲ್ಲಿಯೇ ಭಾರತೀಯ ವೈದ್ಯ ಪದ್ಧತಿಯ ಪ್ರಥಮ ವಿಶ್ವವಿದ್ಯಾನಿಲಯವಾಗಿದೆ.
ಪಾಣಿಪಟ್ ಕದನದ ವಸ್ತುಸಂಗ್ರಹಾಲಯಕ್ಕೆ ಪಾಣಿಪಟ್ ನಲ್ಲಿ ಶಂಕುಸ್ಥಾಪನೆ
ಪಾಣಿಪಟ್ ನ ವಿವಿಧ ಯುದ್ಧಗಳ ವೀರರಿಗೆ ಈ ವಸ್ತುಸಂಗ್ರಹಾಲಯ ಗೌರವ ನೀಡಲಿದೆ. ಇದು ರಾಷ್ಟ್ರ ನಿರ್ಮಾಣಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ ಭಾರತದ ನಾಯಕರನ್ನು ಗೌರವಿಸುವ ಕೇಂದ್ರ ಸರ್ಕಾರದ ಉಪಕ್ರಮಕ್ಕೆ ಅನುಗುಣವಾಗಿದೆ.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಲ್ ಗೆ ಶಂಕುಸ್ಥಾಪನೆ
ಪ್ರಧಾನಮಂತ್ರಿಯವರು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಲ್ ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಈ ಎಲ್ಲ ಉಪಕ್ರಮಗಳೂ ಹರಿಯಾಣದ ಶಿಕ್ಷಣ, ಆರೋಗ್ಯ ಮತ್ತು ಸಂಸ್ಕೃತಿಗೆ ಚೈತನ್ಯ ನೀಡಲಿವೆ ಎಂದು ನಿರೀಕ್ಷಿಸಲಾಗಿದೆ.