ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2018ರ ಮೇ 19ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ದಿನವಿಡೀ ಭೇಟಿ ನೀಡಲಿದ್ದಾರೆ.
ಪ್ರಧಾನಿಯವರು, ಲೆಹ್ ನಲ್ಲಿ 19ನೇ ಕುಶುಕ್ ಬಕುಲ ರಿಂಪೋಚೆ ಜನ್ಮ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಇದೇ ಸಮಾರಂಭದಲ್ಲಿ ಅವರು, ಜೋಜಿಲಾ ಸುರಂಗದ ಕಾಮಗಾರಿಯ ಆರಂಭದ ಅಂಗವಾಗಿ ಫಲಕ ಅನಾವರಣ ಮಾಡಲಿದ್ದಾರೆ.
14 ಕಿ.ಮೀ. ಉದ್ದದ ಜೋಜಿಲಾ ಸುರಂಗವು ಭಾರತದ ಅತಿ ಉದ್ದನೆಯ ರಸ್ತೆ ಸುರಂಗವಾಗಿದೆ ಮತ್ತು ಏಷ್ಯಾದ ಅತಿ ಉದ್ದದ ದ್ವಿಮುಖ ಸುರಂಗವಾಗಿದೆ. ಪ್ರಧಾನಮಂತ್ರಿ ಅವರ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ, ಶ್ರೀನಗರ – ಲೆಹ್ ವಿಭಾಗದ ರಾ.ಹೆ -1ಎಯಲ್ಲಿ ಬಾಲ್ತಾಲ್ ಮತ್ತು ಮಿನಾಮಾರ್ಗ್ ನಡುವಿನ ಈ ಸುರಂಗವನ್ನು 6800 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿ, ಕಾರ್ಯಾಚರಣೆಗೊಳಿಸಿ ಮತ್ತು ನಿರ್ವಹಣೆ ಮಾಡಲು ಈ ವರ್ಷದ ಆರಂಭದಲ್ಲಿ ಅನುಮೋದನೆ ನೀಡಿತ್ತು. ಈ ಸುರಂಗದ ನಿರ್ಮಾಣದಿಂದ ಶ್ರೀನಗರ, ಕಾರ್ಗಿಲ್ ಮತ್ತು ಲೆಹ್ ನಡುವೆ ಸರ್ವ ಋತು ಸಂಪರ್ಕ ಸಾಧ್ಯವಾಗಲಿದೆ. ಇದು ಜೋಜಿಲಾವನ್ನು ದಾಟಲು ಪ್ರಸ್ತುತ ತಗುಲುವ ಮೂರೂವರೆ ಗಂಟೆಗಳ ಪ್ರಯಾಣದ ಅವಧಿಯನ್ನು ಕೇವಲ 15 ನಿಮಿಷಕ್ಕೆ ಇಳಿಸಲಿದೆ. ಇದು ವಲಯಗಳ ಸರ್ವಾಂಗೀಣ ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ, ಸಾಂಸ್ಕೃತಿಕ ಏಕತೆಗೆ ಇಂಬು ನೀಡುತ್ತದೆ. ಇದು ಅಪಾರ ವ್ಯೂಹಾತ್ಮಕ ಮಹತ್ವವನ್ನೂ ಹೊಂದಿದೆ.
ಪ್ರಧಾನಮಂತ್ರಿ ಅವರು ಶ್ರೀನಗರದಲ್ಲಿನ ಶೇರ್ – ಇ- ಕಾಶ್ಮೀರ್ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರ (ಎಸ್.ಕೆ.ಐ.ಸಿ.ಸಿ.)ಯಲ್ಲಿ 330 ಮೆ.ವ್ಯಾ. ಕಿಶನ್ ಗಂಗಾ ಜಲ ವಿದ್ಯುತ್ ಕೇಂದ್ರವನ್ನೂ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅವರು ಶ್ರೀನಗರ ವರ್ತುಲ ರಸ್ತೆಗೆ ಶಿಲಾನ್ಯಾಸವನ್ನೂ ನೆರವೇರಿಸಲಿದ್ದಾರೆ.
ಜಮ್ಮುವಿನ ಜನರಲ್ ಜೋರಾವಾರ್ ಸಿಂಗ್ ಸಭಾಂಗಣದಲ್ಲಿ ಪ್ರಧಾನಮಂತ್ರಿಯವರು, ಪಕುಲ್ ದುಲ್ ವಿದ್ಯುತ್ ಯೋಜನೆ ಮತ್ತು ಜಮ್ಮು ವರ್ತುಲ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅವರು ಶ್ರೀ ಮಾತಾ ವೈಷ್ಣೋದೇವಿ ದೇವಾಲಯ ಮಂಡಳಿಯ ಮೆಟೀರಿಯಲ್ ರೋಪ್ ವೇ ಮತ್ತು ತಾರಾಕೋಟೆ ಮಾರ್ಗವನ್ನೂ ಉದ್ಘಾಟಿಸಲಿದ್ದಾರೆ. ತಾರಾಕೋಟ್ ಮಾರ್ಗವು ಯಾತ್ರಿಕರಿಗೆ ದೇವಾಲಯಕ್ಕೆ ಭೇಟಿ ನೀಡಲು ಅನುಕೂಲ ಕಲ್ಪಿಸಲಿದೆ.
ಶ್ರೀನಗರ ಮತ್ತು ಜಮ್ಮುವಿನ ವರ್ತುಲ ರಸ್ತೆಗಳು ಈ ನಗರಗಳ ಸಂಚಾರದ ಒತ್ತಡವನ್ನು ನಿವಾರಿಸಲಿವೆ ಮತ್ತು ರಸ್ತೆ ಸಂಚಾರವನ್ನು ಸುರಕ್ಷಿತ, ವೇಗ ಮತ್ತು ಹೆಚ್ಚು ಸುಗಮಗೊಳಿಸಲಿವೆ ಮತ್ತು ಇವು ಹೆಚ್ಚು ಪರಿಸರ ಸ್ನೇಹಿಯಾಗಿವೆ.
ಪ್ರಧಾನಮಂತ್ರಿಯವರು, ಜಮ್ಮುವಿನ ಶೇರ್ ಇ ಕಾಶ್ಮೀರ್ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲೂ ಭಾಗಿಯಾಗಲಿದ್ದಾರೆ.