ಹೊಸ ವಿಮಾನ ನಿಲ್ದಾಣ ಮತ್ತು ಸೆಲಾ ಸುರಂಗ ನಿರ್ಮಾಣಕ್ಕೆ ಇಟಾನಗರದಲ್ಲಿ ಶಿಲಾನ್ಯಾಸ ಮಾಡಲಿದ್ದಾರೆ ಪ್ರಧಾನಮಂತ್ರಿ
ಡಿ.ಡಿ. ಅರುಣ ಪ್ರಭಾ ವಾಹಿನಿ ಉದ್ಘಾಟನೆ ಮತ್ತು ಈಶಾನ್ಯ ಅನಿಲ ಜಾಲಕ್ಕೆ ಗುವಾಹಟಿಯಲ್ಲಿ ಶಿಲಾನ್ಯಾಸ ನೆರವೇರಿಸಲಿದ್ದಾರೆ ಪ್ರಧಾನಮಂತ್ರಿ
ತ್ರಿಪುರಾದಲ್ಲಿ ಗರ್ಜಿ-ಬೆಲೋನಿಯ ರೈಲ್ವೇ ಮಾರ್ಗವನ್ನು ಪ್ರಧಾನಮಂತ್ರಿ ಉದ್ಘಾಟಿಸುವರು.
ಪ್ರಧಾನಮಂತ್ರಿ ಅವರು ವಿವಿಧ ಅಭಿವೃದ್ದಿ ಯೋಜನೆಗಳನ್ನು ಅನಾವರಣ ಮಾಡುವರು.
ಪ್ರಧಾನಮಂತ್ರಿ ಅವರು ನಾಳೆ ಗುವಾಹಟಿ, ಇಟಾನಗರ ಮತ್ತು ಅಗರ್ತಾಲಾಗಳಿಗೆ ಭೇಟಿ ನೀಡುವರು. ಅವರು ಇಟಾನಗರದಲ್ಲಿ ಹೊಸದಾಗಿ ನಿರ್ಮಾಣಗೊಳ್ಳುವ ವಿಮಾನ ನಿಲ್ದಾಣಕ್ಕೆ , ಸೆಲಾ ಸುರಂಗ ಮತ್ತು ಈಶಾನ್ಯ ಅನಿಲ ಜಾಲಕ್ಕೆ ಶಂಕುಸ್ಥಾಪನೆ ನೆರವೇರಿಸುವರು. ಅವರು ಡಿ.ಡಿ. ಅರುಣ ಪ್ರಭ ವಾಹಿನಿ ಮತ್ತು ಗರ್ಜಿ –ಬೆಲೋನಿಯಾ ರೈಲ್ವೇ ಮಾರ್ಗವನ್ನು ಉದ್ಘಾಟಿಸುವರು. ಅವರು ಮೂರು ರಾಜ್ಯಗಳಲ್ಲಿ ಇತರ ಹಲವಾರು ಅಭಿವೃದ್ದಿ ಯೋಜನೆಗಳನ್ನು ಅನಾವರಣಗೊಳಿಸುವರು.
ಅರುಣಾಚಲ ಪ್ರದೇಶದಲ್ಲಿ ಪ್ರಧಾನಮಂತ್ರಿ:
ಪ್ರಧಾನಮಂತ್ರಿ ಅವರು ನಾಳೆ ಬೆಳಿಗ್ಗೆ ಗುವಾಹಟಿಯಿಂದ ಇಟಾನಗರಕ್ಕೆ ತಲುಪುವರು. ಅವರು ಇಟಾನಗರದ ಐ.ಜಿ. ಪಾರ್ಕಿನಲ್ಲಿ ಸರಣಿ ಅಭಿವೃದ್ದಿ ಯೋಜನೆಗಳನ್ನು ಅನಾವರಣ ಮಾಡುವರು.
ಹೊಲ್ಲೊಂಗಿಯಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಧಾನ ಮಂತ್ರಿ ಅವರು ಶಿಲಾನ್ಯಾಸ ಮಾಡುವರು. ಈಗ ಇಟಾನಗರಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಅಸ್ಸಾಂನ ಲಿಲಾಬಾರಿಯಲ್ಲಿರುವ ವಿಮಾನನಿಲ್ದಾಣ. ಇದು 80 ಕಿಲೋ ಮೀಟರ್ ದೂರದಲ್ಲಿದೆ. ಹೊಲ್ಲೊಂಗಿಯ ವಿಮಾನ ನಿಲ್ದಾಣ ನಿರ್ಮಾಣದೊಂದಿಗೆ ಈ ದೂರ ನಾಲ್ಕನೇ ಒಂದಂಶಕ್ಕೆ ಇಳಿಯಲಿದೆ. ಈ ವಲಯಕ್ಕೆ ಉತ್ತಮ ಸಂಪರ್ಕ ಒದಗಿಸುವುದಲ್ಲದೆ , ರಾಜ್ಯದ ಪ್ರವಾಸೋದ್ಯಮಕ್ಕೂ ಈ ವಿಮಾನ ನಿಲ್ದಾಣ ಸಹಕಾರಿಯಾಗಲಿದೆ. ವಿಮಾನ ನಿಲ್ದಾಣವು ಈ ಭಾಗದ ಆರ್ಥಿಕ ಅಭಿವೃದ್ದಿಗೆ ಉತ್ತೇಜನ ನೀಡಲಿದೆ ಮತ್ತು ಅದು ರಾಷ್ಟ್ರಕ್ಕೆ ವ್ಯೂಹಾತ್ಮಕವಾಗಿ ಮಹತ್ವದ್ದಾಗಿದೆ. ಈ ವಿಮಾನ ನಿಲ್ದಾಣವು ವಿವಿಧ ಸಹ್ಯ ಅಂಶಗಳಾದ ಸಂಪರ್ಕ ರಸ್ತೆಯುದ್ದಕ್ಕೂ ಹಸಿರು ಪಟ್ಟಿಯನ್ನು ಹೊಂದಿರಲಿದ್ದು, ಇದು ಶಬ್ದ ಮಾಲಿನ್ಯ ತಡೆ ವ್ಯವಸ್ಥೆಯಾಗಿ ಕಾರ್ಯ ನಿರ್ವಹಿಸುತ್ತದೆ. ಮಳೆ ನೀರು ಕೊಯಿಲು, ಇಂಧನ ದಕ್ಷ ಸಲಕರಣೆಗಳ ಬಳಕೆ ಮತ್ತಿತರ ಸಹ್ಯ ವ್ಯವಸ್ಥೆಗಳನ್ನು ಇದು ಒಳಗೊಂಡಿರುತ್ತದೆ.
ಪ್ರಧಾನ ಮಂತ್ರಿ ಅವರು ಅರುಣಾಚಲ ಪ್ರದೇಶದಲ್ಲಿ ಸೆಲಾ ಸುರಂಗಕ್ಕೆ ಅಡಿಗಲ್ಲು ಹಾಕುವರು. ಇದು ನಾಗರಿಕರಿಗೆ ಮತ್ತು ಭದ್ರತಾ ಪಡೆಗಳಿಗೆ ವರ್ಷದುದ್ದಕ್ಕೂ ತವಾಂಗ್ ಕಣಿವೆಗೆ ಸಂಪರ್ಕ ಒದಗಿಸುವ ಸರ್ವಋತು ಸಂಪರ್ಕ ವ್ಯವಸ್ಥೆಯಾಗಿರುತ್ತದೆ. ಸುರಂಗವು ತವಾಂಗ್ ತಲುಪುವ ಪ್ರಯಾಣದ ಅವಧಿಯನ್ನು ಒಂದು ಗಂಟೆಯಷ್ಟು ಕಡಿಮೆ ಮಾಡುತ್ತದೆ ಮತ್ತು ಈ ವಲಯದಲ್ಲಿ ಪ್ರವಾಸೋದ್ಯಮ ಹಾಗು ಆ ಸಂಬಂಧಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಒದಗಿಸುತ್ತದೆ.
ಅರುಣಾಚಲ ಪ್ರದೇಶಕ್ಕೆ ವಿಶೇಷವಾಗಿ ಮೀಸಲಾದ ಡಿ.ಡಿ. ವಾಹಿನಿ-ಡಿ.ಡಿ. ಅರುಣ ಪ್ರಭಾ ವನ್ನು ಪ್ರಧಾನ ಮಂತ್ರಿ ಅವರು ಇಟಾನಗರದ ಐ.ಜಿ.ಪಾರ್ಕಿನಲ್ಲಿ ಕಾರ್ಯಾರಂಭಗೊಳಿಸುವರು. ಈ ವಾಹಿನಿಯು ದೂರದರ್ಶನ ನಿರ್ವಹಿಸುತ್ತಿರುವ 24 ನೇ ವಾಹಿನಿಯಾಗಿರುತ್ತದೆ. ಅರುಣಾಚಲ ಪ್ರದೇಶದ 110 ಮೆ.ವಾ. ಪಾರೇ ಜಲವಿದ್ಯುತ್ ಸ್ಥಾವರವನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸುವರು. ಎನ್.ಇ.ಇ. ಪಿ.ಸಿ.ಒ. ಸಂಸ್ಥೆ ಈ ಯೋಜನೆಯನ್ನು ಅನುಷ್ಟಾನ ಮಾಡಿದ್ದು, ದಿಕ್ರಾಂಗ್ (ಬ್ರಹ್ಮಪುತ್ರಾದ ಉಪನದಿ) ನದಿಯ ಜಲವಿದ್ಯುತ್ ಸಾಮರ್ಥ್ಯವನ್ನು ಅದು ಬಳಸಿಕೊಳ್ಳಲಿದೆ. ಮತ್ತು ಈಶಾನ್ಯ ರಾಜ್ಯಗಳಿಗೆ ಕಡಿಮೆ ಖರ್ಚಿನ ಜಲವಿದ್ಯುತ್ತನ್ನು ಒದಗಿಸುವ ಮೂಲಕ ಈ ಭಾಗದಲ್ಲಿ ವಿದ್ಯುತ್ ಲಭ್ಯತೆಯನ್ನು ಹೆಚ್ಚಿಸಲಿದೆ.
ಅರುಣಾಚಲ ಪ್ರದೇಶದ ಜೋಟೆಯಲ್ಲಿ ಭಾರತದ ಚಲನಚಿತ್ರ ಮತ್ತು ಟೆಲಿವಿಶನ್ ಸಂಸ್ಥೆಯ ಖಾಯಂ ಕ್ಯಾಂಪಸ್ಸಿಗೆ ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಶಿಲಾನ್ಯಾಸ ಮಾಡುವರು. ಇದು ಈಶಾನ್ಯ ರಾಜ್ಯಗಳ ಚಲನಚಿತ್ರ ವಿದ್ಯಾರ್ಥಿಗಳ ಆವಶ್ಯಕತೆಯನ್ನು ಈಡೇರಿಸಲಿದೆ. ಅರುಣಾಚಲ ಪ್ರದೇಶದ ಮೇಲ್ದರ್ಜೆಗೇರಿಸಿದ ತೇಜು ವಿಮಾನ ನಿಲ್ದಾಣವನ್ನು ಅವರು ಉದ್ಘಾಟಿಸುವರು. ಈ ವಿಮಾನ ನಿಲ್ದಾಣವನ್ನು ಉನ್ನತೀಕರಿಸಲಾಗಿದ್ದು, ಉಡಾನ್ ಯೋಜನೆ ಅಡಿಯಲ್ಲಿ ವಾಣಿಜ್ಯಿಕ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಹೊಸ ಟರ್ಮಿನಲ್ ನಿರ್ಮಿಸಲಾಗಿದೆ.
ಅರುಣಾಚಲ ಪ್ರದೇಶದಲ್ಲಿ 50 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಪ್ರಧಾನಮಂತ್ರಿ ಅವರು ಉದ್ಘಾಟಿಸುವರು. ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯನ್ನು ಖಚಿತಗೊಳಿಸುವಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಆಯುಷ್ಮಾನ್ ಭಾರತ ಯೋಜನೆಯ ಪ್ರಮುಖ ಘಟಕಾಂಶಗಳಾಗಿವೆ. ಪ್ರಧಾನಮಂತ್ರಿ ಅವರು ಇದೇ ಸಂದರ್ಭದಲ್ಲಿ ಸೌಭಾಗ್ಯ ಯೋಜನೆ ಅಡಿಯಲ್ಲಿ ಅರುಣಾಚಲ ಪ್ರದೇಶದ 100% ಮನೆಗಳ ವಿದ್ಯುದ್ದೀಕರಣವನ್ನು ಘೋಷಿಸುವರು.
ಅಸ್ಸಾಂನಲ್ಲಿ ಪ್ರಧಾನಮಂತ್ರಿ
ಇಟಾನಗರದಿಂದ ಪ್ರಧಾನಮಂತ್ರಿ ಅವರು ಗುವಾಹಟಿಗೆ ಮರಳುವರು. ಇಲ್ಲಿ ಅವರು ಈಶಾನ್ಯ ಅನಿಲ ಜಾಲಕ್ಕೆ ಶಿಲಾನ್ಯಾಸ ಮಾಡುವರು. ಇದು ಈ ಭೂಭಾಗ ವಲಯದಲ್ಲಿ ಅಡೆ ತಡೆ ಇಲ್ಲದೆ ನೈಸರ್ಗಿಕ ಅನಿಲ ಪೂರೈಕೆಯನ್ನು ಖಾತ್ರಿಗೊಳಿಸುವುದಲ್ಲದೆ, ಕೈಗಾರಿಕಾ ಬೆಳವಣಿಗೆಗೂ ಉತೇಜನ ನೀಡಲಿದೆ. ಈ ಜಾಲ ನಿರ್ಮಾಣವು ಇಡೀಯ ಈಶಾನ್ಯ ಭಾಗಕ್ಕೆ ಕಡಿಮೆ ದರದಲ್ಲಿ ಮತ್ತು ಉತ್ತಮ ಗುಣಮಟ್ಟದ ಅನಿಲವನ್ನು ಪೂರೈಸುವುದಕ್ಕೆ ಸಂಬಂಧಿಸಿದ ಯೋಜನೆಯ ಭಾಗವಾಗಿದೆ. ಅವರು ಕಾಮರೂಪ, ಕಚೇರ್, ಹೈಲಕಂಡಿ ಮತ್ತು ಕರೀಂಗಂಜ್ ಜಿಲ್ಲೆಗಳಲ್ಲಿ ನಗರ ಅನಿಲ ವಿತರಣಾ ಜಾಲಗಳಿಗೆ ಶಿಲಾನ್ಯಾಸ ಮಾಡಲಿದ್ದಾರೆ. ನಗರ ಅನಿಲ ವಿತರಣಾ ಜಾಲವು ಮನೆಗಳಿಗೆ, ಉದ್ಯಮಗಳಿಗೆ, ವಾಣಿಜ್ಯ ಸಂಸ್ಥೆಗಳಿಗೆ ಸ್ವಚ್ಚ ಇಂಧನವನ್ನು (ಪಿ.ಎನ್.ಜಿ.) ಖಾತ್ರಿಪಡಿಸುತ್ತದೆ.
ಪ್ರಧಾನಮಂತ್ರಿ ಅವರು ಅಸ್ಸಾಂನ ಟಿನ್ಸುಕಿಯಾದಲ್ಲಿ ಹೊಲ್ಲೊಂಗ್ ಮಾಡ್ಯುಲಾರ್ ಅನಿಲ ಸಂಸ್ಕರಣಾ ಸ್ಥಾವರವನ್ನು ಉದ್ಘಾಟಿಸುವರು. ಈ ಸೌಲಭ್ಯ ಉದ್ಘಾಟನೆಯಾದ ಬಳಿಕ ಅಸ್ಸಾಂನಲ್ಲಿ ಉತ್ಪಾದನೆಯಾಗುವ ಒಟ್ಟು ಅನಿಲದಲ್ಲಿ 15 % ನ್ನು ಈ ಸೌಲಭ್ಯವು ವಿತರಣೆ ಮಾಡುತ್ತದೆ. ಪ್ರಧಾನಮಂತ್ರಿ ಅವರು ಉತ್ತರ ಗುವಾಹಟಿಯಲ್ಲಿ ಹಡಗು ಮೇಲಣ ಎಲ್.ಪಿ.ಜಿ. ಸಾಮರ್ಥ್ಯ ಕ್ರೋಢೀಕರಣ ದಾಸ್ತಾನು ವ್ಯವಸ್ಥೆಯನ್ನು ಉದ್ಘಾಟಿಸುವರು. ನುಮಾಲಿಘರ್ ನಲ್ಲಿ ಎನ್.ಆರ್.ಎಲ್. ಜೈವಿಕ ಶುದ್ದೀಕರಣಾಗಾರ ಮತ್ತು ಬಿಹಾರ, ಪಶ್ಚಿಮ ಬಂಗಾಳ , ಸಿಕ್ಕಿಂ ಮತ್ತು ಅಸ್ಸಾಂ ಮೂಲಕ ಹಾದುಹೋಗುವ ಬರೌನಿ-ಗುವಾಹಟಿ ನಡುವಣ 729 ಕಿಲೋ ಮೀಟರ್ ಉದ್ದದ ಅನಿಲ ಕೊಳವೆ ಮಾರ್ಗಕ್ಕೆ ಇದೇ ಸಂದರ್ಭ ಅವರು ಶಿಲಾನ್ಯಾಸ ನೆರವೇರಿಸುವರು.
ತ್ರಿಪುರಾದಲ್ಲಿ ಪ್ರಧಾನ ಮಂತ್ರಿ
ಪ್ರಧಾನಮಂತ್ರಿ ಅವರ ಪ್ರವಾಸದ ಕೊನೆಯ ಹಂತ ಅಗರ್ತಾಲಾ. ಗಾರ್ಜಿ- ಬೆಲೋನಿಯಾ ರೈಲ್ವೇ ಮಾರ್ಗವನ್ನು ಅವರು ಇಲ್ಲಿಯ ಸ್ವಾಮಿ ವಿವೇಕಾನಂದ ಸ್ವಾಮಿ ಕ್ರೀಡಾಂಗಣದಲ್ಲಿ ನಾಮಫಲಕ ಅನಾವರಣ ಮಾಡುವ ಮೂಲಕ ಉದ್ಘಾಟಿಸುವರು. ಈ ಮಾರ್ಗವು ತ್ರಿಪುರಾವನ್ನು ದಕ್ಷಿಣದ ಮತ್ತು ದಕ್ಷಿಣ ಪೂರ್ವ ಏಶ್ಯಾದ ಮಹಾದ್ವಾರವನ್ನಾಗಿ ರೂಪಿಸಲಿದೆ. ಪ್ರಧಾನ ಮಂತ್ರಿ ಅವರು ನರಸಿಂಘರ್ ನಲ್ಲಿ ತ್ರಿಪುರಾ ತಂತ್ರಜ್ಞಾನ ಸಂಸ್ಥೆಯ ಹೊಸ ಸಂಕೀರ್ಣವನ್ನು ಉದ್ಘಾಟಿಸುವರು.
ಪ್ರಧಾನಮಂತ್ರಿ ಅವರು ಅಗರ್ತಾಲಾದ ಮಹಾರಾಜ ವೀರ ವಿಕ್ರಮ ವಿಮಾನ ನಿಲ್ದಾಣದಲ್ಲಿ ಮಹಾರಾಜ ವೀರ ವಿಕ್ರಮ ಕಿಶೋರ್ ಮಾಣಿಕ್ಯ ಬಹಾದೂರ್ ಅವರ ಪ್ರತಿಮೆಯನ್ನು ಅನಾವರಣ ಮಾಡಲಿದ್ದಾರೆ. ಮಹಾರಾಜ ವೀರ ವಿಕ್ರಮ ಕಿಶೋರ್ ಮಾಣಿಕ್ಯ ಬಹಾದೂರ್ ಅವರನ್ನು ಆಧುನಿಕ ತ್ರಿಪುರಾದ ಜನಕ ಎಂದು ಭಾವಿಸಲಾಗುತ್ತದೆ. ಅವರು ಅಗರ್ತಾಲಾ ನಗರದ ಯೋಜಕರೆಂಬ ಖ್ಯಾತಿಯನ್ನೂ ಪಡೆದಿದ್ದಾರೆ. ರಾಷ್ಟ್ರ ನಿರ್ಮಾಣಕ್ಕೆ ಗಣನೀಯ ಕೊಡುಗೆ ನೀಡಿದ , ಆದರೆ ಮುಂಚೂಣಿಗೆ ಬಾರದಿರುವ ಭಾರತದ ನಾಯಕರನ್ನು ಗೌರವಿಸುವ ಕೇಂದ್ರ ಸರಕಾರದ ನೀತಿಯನ್ವಯ ಈ ಪ್ರತಿಮೆಯನ್ನು ಅನಾವರಣ ಮಾಡಲಾಗುತ್ತಿದೆ.