ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2017ರ ಅಕ್ಟೋಬರ್ 7 ಮತ್ತು 8ರಂದು ಗುಜರಾತ್ ಗೆ ಭೇಟಿ ನೀಡಲಿದ್ದಾರೆ.
ಪ್ರಧಾನಮಂತ್ರಿಯವರು ಅಕ್ಟೋಬರ್ 7ರಂದು ಬೆಳಗ್ಗೆ ಪ್ರಧಾನಿಯವರು ದ್ವಾರಕಾಧೀಶ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ದ್ವಾರಕಾದಲ್ಲಿ ಅವರು ಓಕಾ ಮತ್ತು ಬೆಯಟ್ ದ್ವಾರಕ ಸೇತುವೆಗೆ; ಮತ್ತು ಇತರ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಲ್ಲಿ ಅವರು ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ದ್ವಾರಕಾದಿಂದ ಪ್ರಧಾನಮಂತ್ರಿಯವರು, ಸುರೇಂದ್ರ ನಗರ್ ಜಿಲ್ಲೆಯ ಚೋಟೀಲಾ ಗೆ ಆಗಮಿಸಲಿದ್ದಾರೆ. ಅವರು ಅಲ್ಲಿ ರಾಜಕೋಟ್ ಹಸಿರು ವಲಯ ವಿಮಾನ ನಿಲ್ದಾಣಕ್ಕೆ; ಅಹ್ಮದಾಬಾದ್ – ರಾಜಕೋಟ್ ರಾಷ್ಟ್ರೀಯ ಹೆದ್ದಾರಿಯ ಷಟ್ ಪಥ ರಸ್ತೆಗೆ; ಮತ್ತು ರಾಜಕೋಟ್ – ಮೊರ್ಬಿ ರಾಜ್ಯ ಹೆದ್ದಾರಿಯಲ್ಲಿ ಚತುಷ್ಪಥ ಹೆದ್ದಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಂಪೂರ್ಣ ಸ್ವಯಂ ಚಾಲಿತ ಹಾಲು ಸಂಸ್ಕರಣೆ ಮತ್ತು ಪ್ಯಾಕಿಂಗ್ ಘಟಕವನ್ನು ಮತ್ತು ಸುರೇಂದ್ರನಗರ್ ನ ಜೋರಾವಾರ್ ನಗರ್ ಮತ್ತು ರತನ್ ಪುರ್ ಪ್ರದೇಶದ ಕುಡಿಯುವ ನೀರು ಪೂರೈಕೆ ಕೊಳವೆ ಮಾರ್ಗವನ್ನು ಅವರು ಲೋಕಾರ್ಪಣೆ ಮಾಡಲಿದ್ದಾರೆ. ನಂತರ ಅವರು ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ನಂತರ ಪ್ರಧಾನಮಂತ್ರಿಯವರು ಗಾಂಧಿನಗರಕ್ಕೆ ತೆರಳಲಿದ್ದಾರೆ. ಅವರು ಗಾಂಧಿನಗರದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಐಐಟಿ ಕಟ್ಟಡವನ್ನು ಲೋಕಾರ್ಪಣೆ ಮಾಡಲಿದ್ದಾರೆ ಮತ್ತು ಪ್ರಧಾನಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ (ಪಿಎಂಜಿಡಿಐಎಸ್ಎಚ್ಎ)ಗೆ ಚಾಲನೆ ನೀಡಲಿದ್ದಾರೆ. ಗ್ರಾಮೀಣ ಪ್ರದೇಶದ ಜನರಲ್ಲಿ ಡಿಜಿಟಲ್ ಸಾಕ್ಷರತೆಯನ್ನು ಮೂಡಿಸುವ ಗುರಿಯನ್ನು ಹೊಂದಿದೆ. ಇದು ಮಾಹಿತಿ, ಜ್ಞಾನ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳಿಗೆ ಸಂಪರ್ಕ ಒದಗಿಸುತ್ತದೆ. ಇದು ಹಣ ಪೂರಣ ಮತ್ತು ಡಿಜಿಟಲ್ ಪಾವತಿಯ ಮೂಲಕ ಜೀವನೋಪಾಯಕ್ಕೂ ಮಾರ್ಗಗಳನ್ನು ಕಲ್ಪಿಸಲಿದೆ. ಅಲ್ಲಿ ಪ್ರಧಾನಮಂತ್ರಿಯವರು ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.
ಅಕ್ಟೋಬರ್ 8ರ ಬೆಳಗ್ಗೆ ಪ್ರಧಾನಮಂತ್ರಿಯವರು ವಿದ್ಯಾನಗರಕ್ಕೆ ಆಗಮಿಸಲಿದ್ದಾರೆ. ಪ್ರಧಾನಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಬಳಿಕ ಈ ಪಟ್ಟಣಕ್ಕೆ ಇದು ಮೋದಿಯವರ ಪ್ರಥಮ ಭೇಟಿಯಾಗಿದೆ. ಇಲ್ಲಿ ಅವರು ಹತ್ಕೇಶ್ವರ ದೇವಾಲಯಕ್ಕೆ ಭೇಟಿ ನೀಡುವರು. ಸಾರ್ವಜನಿಕ ಸಭೆಯಲ್ಲಿ ಪ್ರಧಾನಿಯವರು, ಸಂಪೂರ್ಣ ಪ್ರತಿರಕ್ಷಣ ಕಾರ್ಯಕ್ರಮದ ಅಂಗವಾಗಿ ಇಂಧ್ರಧನುಷ್ ತ್ವರಿತ ಅಭಿಯಾನ ಉದ್ಘಾಟಿಸುವರು. ಇದು ನಗರ ಪ್ರದೇಶ ಮತ್ತು ಕಡಿಮೆ ಪ್ರತಿರಕ್ಷಣೆ ಇರುವ ಪ್ರದೇಶಗಳತ್ತ ಹೆಚ್ಚಿನ ಗಮನ ಹರಿಸಲಿದೆ. ಪ್ರಧಾನಮಂತ್ರಿಯವರು ಐಎಂಟಿಇಸಿಎಚ್ಓ ಉದ್ಘಾಟನೆ ಅಂಗವಾಗಿ ಇ-ಟ್ಯಾಬ್ಲೆಟ್ ಗಳನ್ನು ಆರೋಗ್ಯ ಕಾರ್ಯಕರ್ತರಿಗೆ ವಿತರಿಸುವರು. ಐಎಂಟಿಇಸಿಎಚ್ಓ ಭಾರತದ ಸಂಪನ್ಮೂಲ ಕೊರತೆಯ ಪ್ರದೇಶಗಳಲ್ಲಿ ಬಾಣಂತಿ, ನವಜಾತ ಮತ್ತು ಮಕ್ಕಳ ಆರೋಗ್ಯದ ಮೇಲೆ ನಿರಂತರ ನಿಗಾ, ಬೆಂಬಲ ಮತ್ತು ಪ್ರೇರಣೆಯ ಮೂಲಕ ಆಶಾ ಕಾರ್ಯಕರ್ತೆಯರ ಕಾರ್ಯನಿರ್ವಹಣೆಯನ್ನು ಸುಧಾರಿಸುವ ಒಂದು ನಾವಿನ್ಯಪೂರ್ಣ ಮೊಬೈಲ್ ಆನ್ವಯಿಕವಾಗಿದೆ. ಐಎಂಟಿಇಸಿಎಚ್ಓ ಅಂದರೆ ಇನೋವೇಟಿವ್ ಮೊಬೈಲ್ ಫೋನ್ ಟೆಕ್ನಾಲಜಿ ಫಾರ್ ಕಮ್ಯೂನಿಟಿ ಹೆಲ್ತ್ ಆಪರೇಷನ್ ಎಂಬುದಾಗಿದೆ. ಗುಜರಾತಿ ಭಾಷೆಯಲ್ಲಿ ಟೆಕೋ ಎಂದರೆ ಬೆಂಬಲ ಎಂದೂ ಅರ್ಥವಿದೆ. ಹೀಗಾಗಿ ಐಎಂಟೆಕೋ ಎಂದರೆ ನನ್ನ ಬೆಂಬಲ ಎಂಬ ಅರ್ಥ ಬರುತ್ತದೆ. ಪ್ರಧಾನಮಂತ್ರಿಯವರು ಇಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡುವರು.
ಅಂದೇ ಮಧ್ಯಾಹ್ನ ಪ್ರಧಾನಮಂತ್ರಿಯವರು, ಬರೂಚ್ ಗೆ ಆಗಮಿಸುವರು. ಅಲ್ಲಿ ಅವರು ನರ್ಮದಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುವ ಭದ್ಭೂತ್ ಅಣೆಗೆ ಶಂಕುಸ್ಥಾಪನೆ ನೆರವೇರಿಸುವರು. ಉದ್ನಾ (ಸೂರತ್, ಗುಜರಾತ್) ಮತ್ತು ಜೈನಗರ್ (ಬಿಹಾರ) ನಡುವೆ ಅಂತ್ಯೋದಯ ಎಕ್ಸ್ ಪ್ರೆಸ್ ಗೆ ಅವರು ಹಸಿರು ನಿಶಾನೆ ತೋರುವರು. ಗುಜರಾತ್ ನರ್ಮದಾ ರಸಗೊಬ್ಬರ ನಿಗಮದ ವಿವಿಧ ಘಟಕಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಅಂಗವಾಗಿ ಪ್ರಧಾನಿ ಫಲಕ ಅನಾವರಣ ಮಾಡುವರು. ಅಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುವರು.
ಅಕ್ಟೋಬರ್ 8ರಂದು ರಾತ್ರಿ ಪ್ರಧಾನಮಂತ್ರಿಯವರು ದೆಹಲಿಗೆ ವಾಪಸಾಗುವರು.