ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನಾಳೆ – 2017ರ ಅಕ್ಟೋಬರ್ 22ರಂದು ಗುಜರಾತ್ ಗೆ ಭೇಟಿ ನೀಡಲಿದ್ದಾರೆ. ಘೋಗಾದಲ್ಲಿ ಸಾರ್ವಜನಿಕ ಸಭೆಯಲ್ಲಿ, ಪ್ರಧಾನಮಂತ್ರಿ ಅವರು ರೋ ರೋ (ರೋಲ್ ಆನ್ ರೋಲ್ ಆಫ್) ಘೋಗಾ ಮತ್ತು ದಹೇಜ್ ನಡುವಿನ ದೋಣಿ ಸೇವೆಯ ಮೊದಲ ಹಂತವನ್ನು ಉದ್ಘಾಟಿಸಲಿದ್ದಾರೆ.
ಈ ದೋಣಿ ಸೇವೆ ಸೌರಾಷ್ಟ್ರದ ಘೋಗಾ ಮತ್ತು ದಕ್ಷಿಣ ಗುಜರಾತ್ ನ ದಹೇಜ್ ನಡುವಿನ ಪ್ರಯಾಣದ ಅವಧಿಯನ್ನು ಏಳು ಅಥವಾ ಎಂಟು ಗಂಟೆಗಳಿಂದ ಕೇವಲ ಒಂದು ಗಂಟೆಗೆ ತಗ್ಗಿಸಲಿದೆ. ಇದು ಸಂಪೂರ್ಣ ಕಾರ್ಯಾಚರಣೆ ಆರಂಭಿಸಿದ ತರುವಾಯ, ವಾಹನಗಳ ಸಂಚಾರಕ್ಕೂ ಅವಕಾಶ ಕಲ್ಪಿಸಲಿದೆ. ಭಾನುವಾರ ಪ್ರಧಾನಮಂತ್ರಿಯವರು ಪ್ರಯಾಣಿಕರ ಓಡಾಟಕ್ಕೆ ಮೀಸಲಾದ ಮೊದಲ ಹಂತಕ್ಕೆ ಚಾಲನೆ ನೀಡಲಿದ್ದಾರೆ. ಘೋಗಾದಿಂದ ದಹೇಜ್ ವರೆಗೆ ಈ ಸೇವೆಯ ಮೊದಲ ಪ್ರಯಾಣದಲ್ಲಿ ಪ್ರಧಾನಿಯವರು ತಾವೂ ಸಂಚರಿಸಲಿದ್ದಾರೆ. ದೋಣಿ ಯಾನ ಬಳಿಕ ದಹೇಜ್ ನಲ್ಲಿ ಪ್ರಧಾನಿಯವರು ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಘೋಗಾದಲ್ಲಿಯೂ ಸಾರ್ವಜನಿಕ ಸಭೆಯಲ್ಲಿ ಪ್ರಧಾನಮಂತ್ರಿಯವರು ಶ್ರೀ ಭಾವ್ ನಗರ್ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ ಸರ್ವೋತ್ತಮ ಪಶು ಆಹಾರ ಘಟಕವನ್ನು ಉದ್ಘಾಟಿಸಲಿದ್ದಾರೆ.
ದಹೇಜ್ ನಿಂದ ಪ್ರಧಾನಿಯವರು ವಡೋದರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ಸಾರ್ವಜನಿಕ ಸಭೆಯಲ್ಲಿ, ವಡೋದರಾ ನಗರದ ಕಮಾಂಡ್ ನಿಯಂತ್ರಣ ಕೇಂದ್ರ; ವಗೋಡಿಯಾ ಪ್ರಾದೇಶಿಕ ನೀರು ಪೂರೈಕೆ ಯೋಜನೆ; ಮತ್ತು ಬ್ಯಾಂಕ್ ಆಫ್ ಬರೋಡದ ಕೇಂದ್ರ ಕಚೇರಿ ಕಟ್ಟಡವನ್ನು ವಡೋದರದಲ್ಲಿ ದೇಶಕ್ಕೆ ಸಮರ್ಪಿಸಲಿದ್ದಾರೆ.
ಪ್ರಧಾನಮಂತ್ರಿ ವಸತಿ ಯೋಜನೆ ( ಗ್ರಾಮೀಣ ಮತ್ತು ನಗರ)ಯ ಫಲಾನುಭವಿಗಳಿಗೆ ಪ್ರಧಾನಿಯವರು ಮನೆಯ ಕೀಲಿಕೈಗಳನ್ನು ಹಸ್ತಾಂತರಿಸಲಿದ್ದಾರೆ. ಸಮಗ್ರ ಸಾರಿಗೆ ತಾಣ, ಪ್ರಾದೇಶಿಕ ಜಲ ಪೂರೈಕೆ ಯೋಜನೆ, ವಸತಿ ಯೋಜನೆ ಮತ್ತು ಮೇಲ್ಸೇತುವೆ ಸೇರಿದಂತೆ ಹಲವು ಅಭಿವೃದ್ಧಿ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮುಂದ್ರಾ -ದೆಹಲಿ ಪೆಟ್ರೋಲಿಯಂ ಉತ್ಪನ್ನ ಕೊಳವೆ ಮಾರ್ಗದ ಸಾಮರ್ಥ್ಯ ವಿಸ್ತರಣೆ ಮತ್ತು ವಡೋದರಾದ ಎಚ್.ಪಿ.ಸಿ.ಎಲ್. ಹಸಿರು ವಲಯ ಮಾರುಕಟ್ಟೆ ಟರ್ಮಿನಲ್ ಯೋಜನೆಗೂ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.