ಜುಲೈ 7ರಂದು ಛತ್ತೀಸ್‌ಗಢ ಮತ್ತು ಉತ್ತರ ಪ್ರದೇಶ; ಜುಲೈ 8ರಂದು ತೆಲಂಗಾಣ ಮತ್ತು ರಾಜಸ್ಥಾನಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
ರಾಯ್‌ಪುರದಲ್ಲಿ ಸುಮಾರು 7500 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳ ಲೋಕಾರ್ಪಣೆ / ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಿ
ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರು ಛತ್ತೀಸ್‌ಗಢದಲ್ಲಿ ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ
ಗೋರಖ್‌ಪುರದ ʻಗೀತಾ ಪ್ರೆಸ್‌ʼನ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿರುವ ಪ್ರಧಾನಿ
ಗೋರಖ್‌ಪುರ-ಲಖನೌ ಮತ್ತು ಜೋಧ್‌ಪುರ್ –ಅಹ್ಮದಾಬಾದ್ (ಸಾಬರಮತಿ) ಸಂಪರ್ಕಿಸುವ ಎರಡು ʻವಂದೇ ಭಾರತ್ ರೈಲುʼಗಳಿಗೆ ಪ್ರಧಾನಮಂತ್ರಿ ಅವರು ಹಸಿರು ನಿಶಾನೆ ತೋರಲಿದ್ದಾರೆ
ಗೋರಖ್‌ಪುರ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ
ವಾರಾಣಸಿಯಲ್ಲಿ 12,100 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ/ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಿ
ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್-ಸೋನ್ ನಗರ ರೈಲ್ವೆ ಮಾರ್ಗದ ʻವಿಶೇಷ ಸರಕು-ಸಾಗಣೆ ಕಾರಿಡಾರ್ʼ ಉದ್ಘಾಟಿಸಲಿರುವ ಪ್ರಧಾನಿ
ವಾರಾಣಸಿ-ಲಖನೌ ನಡುವಿನ ಪ್ರಯಾಣವನ್ನು ಸುಗಮ ಮತ್ತು ವೇಗವಾಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ 56ರ ವಾರಣಾಸಿ-ಜೌನಪುರ ವಿಭಾಗದಲ್ಲಿ ಅಗಲೀಕರಣಗೊಳಿಸಿದ ಚತುಷ್ಪಥ ರಸ್ತೆಯನ್ನು ಪ್ರಧಾನಮಂತ್ರಿ ಅವರು ಉದ್ಘಾಟಿಸಲಿದ್ದಾರೆ
ಮಣಿಕರ್ಣಿಕಾ ಮತ್ತು ಹರಿಶ್ಚಂದ್ರ ಘಾಟ್ಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ ಉತ್ತರ ಪ್ರದೇಶದ ಫಲಾನುಭವಿಗಳಿಗೆ ʻಪಿಎಂ ಸ್ವಾನಿಧಿʼ ಸಾಲಗಳು, ʻಪಿಎಂಎವೈʼ ಗ್ರಾಮೀಣ ನಿವಾಸಗಳ ಕೀಲಿಗಳು ಮತ್ತು ಆಯುಷ್ಮಾನ್ ಕಾರ್ಡ್ಗಳನ್ನು ವಿತರಿಸಲಿರುವ ಪ್ರಧಾನಿ
ವಾರಂಗಲ್ನಲ್ಲಿ ಸುಮಾರು 6,100 ಕೋಟಿ ರೂಪಾಯಿ ಮೌಲ್ಯದ ಹಲವಾರು ರಸ್ತೆ ಮತ್ತು ರೈಲು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ
ಬಿಕಾನೇರ್ನಲ್ಲಿ 24,300 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿರುವ ಪ್ರಧಾನಿ
ಅಮೃತಸರ-ಜಾಮ್ನಗರ್ ಆರ್ಥಿಕ ಕಾರಿಡಾರ್ನ ಆರು ಪಥದ ʻಗ್ರೀನ್ ಫೀಲ್ಡ್ ಎಕ್ಸ್ಪ್ರೆಸ್ವೇʼ ವಿಭಾಗ ಮತ್ತು ʻಹಸಿರು ಇಂಧನ ಕಾರಿಡಾರ್ʼಗಾಗಿ ಅಂತರ ರಾಜ್ಯ ಪ್ರಸರಣ ಮಾರ್ಗದ ಮೊದಲ ಹಂತವನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ
ಬಿಕಾನೇರ್ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಜುಲೈ 7-8 ರಂದು ನಾಲ್ಕು ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಅವರು ಜುಲೈ 7ರಂದು ಛತ್ತೀಸ್‌ಗಢ ಮತ್ತು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಜುಲೈ 8ರಂದು ಪ್ರಧಾನಮಂತ್ರಿಯವರು ತೆಲಂಗಾಣ ಮತ್ತು ರಾಜಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಜುಲೈ 7-8 ರಂದು ನಾಲ್ಕು ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಅವರು ಜುಲೈ 7ರಂದು ಛತ್ತೀಸ್‌ಗಢ ಮತ್ತು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಜುಲೈ 8ರಂದು ಪ್ರಧಾನಮಂತ್ರಿಯವರು ತೆಲಂಗಾಣ ಮತ್ತು ರಾಜಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

ಜುಲೈ 7ರಂದು ಬೆಳಿಗ್ಗೆ 10:45ಕ್ಕೆ ಪ್ರಧಾನಮಂತ್ರಿಯವರು ರಾಯ್‌ಪುರದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 2:30ರ ಸುಮಾರಿಗೆ ಪ್ರಧಾನಿಯವರು ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ತಲುಪಲಿದ್ದಾರೆ, ಅಲ್ಲಿ ಅವರು ಗೋರಖ್‌ಪುರದ ʻಗೀತಾ ಪ್ರೆಸ್‌ʼನ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ, ನಂತರ ಗೋರಖ್‌ಪುರ ರೈಲ್ವೆ ನಿಲ್ದಾಣದಲ್ಲಿ ʻವಂದೇ ಭಾರತ್ʼ ರೈಲುಗಳಿಗೆ ಅವರು ಹಸಿರು ನಿಶಾನೆ ತೋರಲಿದ್ದಾರೆ. ನಂತರ ಸಂಜೆ 5ಗಂಟೆಗೆ ವಾರಣಾಸಿ ತಲುಪಲಿರುವ ಪ್ರಧಾನಮಂತ್ರಿಯವರು, ಅಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಅಲ್ಲಿ ಅವರು ಹಲವು ಯೋಜನೆಗಳ ಶಂಕುಸ್ಥಾಪನೆ/ಉದ್ಘಾಟನೆ ನೆರವೇರಿಸಲಿದ್ದಾರೆ.

ಜುಲೈ 8 ರಂದು ಬೆಳಿಗ್ಗೆ 10:45ಕ್ಕೆ ಪ್ರಧಾನಮಂತ್ರಿಯವರು ತೆಲಂಗಾಣದ ವಾರಂಗಲ್ ತಲುಪಲಿದ್ದು, ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ, ಅಲ್ಲಿ ಅವರು ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಂಜೆ 4:15ರ ಸುಮಾರಿಗೆ ಬಿಕಾನೇರ್ ತಲುಪಲಿರುವ ಪ್ರಧಾನಮಂತ್ರಿಯವರು, ಅಲ್ಲಿ ಅವರು ರಾಜಸ್ಥಾನದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ಹಲವು ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ರಾಯ್‌ಪುರದಲ್ಲಿ ಪ್ರಧಾನ ಮಂತ್ರಿ

ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರು ಸುಮಾರು 6,400 ಕೋಟಿ ರೂಪಾಯಿ ಮೌಲ್ಯದ ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಶಂಕುಸ್ಥಾಪನೆ/ಲೋಕಾರ್ಪಣೆ ನೆರವೇರಿಸಲಿದ್ದಾರೆ. ಜಬಲ್ಪುರ-ಜಗದಾಲ್ಪುರ ರಾಷ್ಟ್ರೀಯ ಹೆದ್ದಾರಿಯ ರಾಯ್‌ಪುರದಿಂದ ಕೊಡೆಬೋಡ್ ವಿಭಾಗದವರೆಗಿನ 33 ಕಿ.ಮೀ ಉದ್ದದ 4 ಪಥದ ರಸ್ತೆಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಈ ವಿಭಾಗದ ರಸ್ತೆ ಯೋಜನೆಯು ಪ್ರವಾಸೋದ್ಯಮವನ್ನು ಉತ್ತೇಜಿಸುವುದರ ಜೊತೆಗೆ  ಕಚ್ಚಾ ಸರಕುಗಳು, ಜಗದಾಲ್ಪುರ ಬಳಿಯ ಉಕ್ಕು ಸ್ಥಾವರಗಳ ಸಿದ್ಧಪಡಿಸಿದ ಉತ್ಪನ್ನಗಳ ಸಾಗಣೆಗೆ ಅತ್ಯಗತ್ಯವಾಗಿದೆ. ಕಬ್ಬಿಣದ ಅದಿರು ನಿಕ್ಷೇಪಗಳಿಗೆ  ಸಂಪರ್ಕವನ್ನು ಒದಗಿಸುತ್ತದೆ. ರಾಷ್ಟ್ರೀಯ ಹೆದ್ದಾರಿ 130ರ ಬಿಲಾಸ್‌ಪುರ್‌ನಿಂದ ಅಂಬಿಕಾಪುರವರೆಗಿನ 53 ಕಿ.ಮೀ ಉದ್ದದ 4 ಪಥದ ಬಿಲಾಸ್‌ಪುರ್-ಪತ್ರಾಪಲಿ ಮಾರ್ಗವನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇದು ಉತ್ತರ ಪ್ರದೇಶದೊಂದಿಗೆ ಛತ್ತೀಸ್‌ಗಢದ ಸಂಪರ್ಕವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಪಕ್ಕದ ಪ್ರದೇಶಗಳಲ್ಲಿನ ಕಲ್ಲಿದ್ದಲು ಗಣಿಗಳಿಗೆ ಸಂಪರ್ಕವನ್ನು ಒದಗಿಸುವ ಮೂಲಕ ಕಲ್ಲಿದ್ದಲಿನ ಸಾಗಾಟವನ್ನು ಹೆಚ್ಚಿಸುತ್ತದೆ.

ರಾಯ್‌ಪುರ-ವಿಶಾಖಪಟ್ಟಣಂ ಕಾರಿಡಾರ್‌ನ ಛತ್ತೀಸ್‌ಗಢ ವಿಭಾಗದ ಮೂರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೂ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ʻರಾಷ್ಟ್ರೀಯ ಹೆದ್ದಾರಿ 130 ಸಿಡಿʼಯಲ್ಲಿ 43 ಕಿ.ಮೀ ಉದ್ದದ ಆರು ಪಥದ ಝಾಂಕಿ-ಸರ್ಗಿ ವಿಭಾಗದ ಅಭಿವೃದ್ಧಿ; ʻರಾಷ್ಟ್ರೀಯ ಹೆದ್ದಾರಿ 130 ಸಿಡಿʼಯಲ್ಲಿ 57 ಕಿ.ಮೀ ಉದ್ದದ ಆರು ಪಥದ ಸರ್ಗಿ-ಬಸನ್ವಾಹಿ ವಿಭಾಗದ ಅಭಿವೃದ್ಧಿ; ಮತ್ತು ʻಎನ್ಎಚ್ -130 ಸಿಡಿʼಯ 25 ಕಿ.ಮೀ ಉದ್ದದ ಆರು ಪಥದ ಬಸನ್ವಾಹಿ-ಮರಂಗ್ಪುರಿ ವಿಭಾಗದ ಅಭಿವೃದ್ಧಿಯೂ ಇದರಲ್ಲಿ ಸೇರಿದೆ. ಉದಂತಿ ವನ್ಯಜೀವಿ ಅಭಯಾರಣ್ಯ ಪ್ರದೇಶದಲ್ಲಿ ಅನಿರ್ಬಂಧಿತ ವನ್ಯಜೀವಿ ಸಂಚಾರಕ್ಕಾಗಿ ಒದಗಿಸಲಾದ 2.8 ಕಿ.ಮೀ ಉದ್ದದ 6 ಪಥದ ಸುರಂಗವು 27 ಪ್ರಾಣಿಗಳ ದಾಟು ಹಾದಿಗಳು (ಅನಿಮಲ್‌ ಪಾಸ್‌) ಮತ್ತು 17 ಮಂಗನ ಮೇಲು ಸೇತುವೆಗಳನ್ನು(ಮಂಕಿ ಕ್ಯಾನೋಪಿ) ಒಳಗೊಂಡಿದೆ. ಈ ಯೋಜನೆಗಳು ಧಮ್ತಾರಿಯಲ್ಲಿರುವ ಅಕ್ಕಿ ಗಿರಣಿಗಳು ಮತ್ತು ಕಂಕೇರ್‌ನ ಬಾಕ್ಸೈಟ್ ಸಮೃದ್ಧ ಪ್ರದೇಶಗಳಿಗೆ ಉತ್ತಮ ಸಂಪರ್ಕವನ್ನು ಒದಗಿಸುತ್ತವೆ. ಜೊತೆಗೆ ಕೊಂಡಗಾಂವ್‌ನ ಕರಕುಶಲ ಉದ್ಯಮಕ್ಕೆ ಪ್ರಯೋಜನವನ್ನು ನೀಡುತ್ತವೆ. ಒಟ್ಟಾರೆಯಾಗಿ, ಈ ಯೋಜನೆಗಳು ಈ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಭಾರಿ ಉತ್ತೇಜನ ನೀಡುತ್ತವೆ.

ಪ್ರಧಾನಮಂತ್ರಿಯವರು 750 ಕೋಟಿ ರೂ.ಗಳ ವೆಚ್ಚದಲ್ಲಿ ಪೂರ್ಣಗೊಂಡ 103 ಕಿ.ಮೀ ಉದ್ದದ ʻರಾಯ್‌ಪುರ-ಖರಿಯಾರ್ʼ ರಸ್ತೆ ರೈಲು ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇದು ಛತ್ತೀಸ್‌ಗಢದ ಕೈಗಾರಿಕೆಗಳಿಗೆ ಬಂದರುಗಳಿಂದ ಕಲ್ಲಿದ್ದಲು, ಉಕ್ಕು, ರಸಗೊಬ್ಬರಗಳು ಮತ್ತು ಇತರ ಸರಕುಗಳ ಸಾಗಣೆಯನ್ನು ಸುಲಭಗೊಳಿಸುತ್ತದೆ. ಕಿಯೋಟಿ- ಅಂತಗಢವನ್ನು ಸಂಪರ್ಕಿಸುವ 17 ಕಿ.ಮೀ ಉದ್ದದ ಹೊಸ ರೈಲು ಮಾರ್ಗವನ್ನೂ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. 290 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ಹೊಸ ರೈಲು ಮಾರ್ಗವು ಭಿಲಾಯ್ ಉಕ್ಕು ಸ್ಥಾವರಕ್ಕೆ ʻದಲ್ಲಿ ರಾಜ್ಹರಾʼ ಮತ್ತು ʻರೌಘಾಟ್ʼ ಪ್ರದೇಶಗಳ ಕಬ್ಬಿಣದ ಅದಿರು ಗಣಿಗಳೊಂದಿಗೆ ಸಂಪರ್ಕವನ್ನು ಒದಗಿಸುತ್ತದೆ. ಜೊತೆಗೆ ದಟ್ಟವಾದ ಕಾಡುಗಳ ಮೂಲಕ ಹಾದುಹೋಗುವ ದಕ್ಷಿಣ ಛತ್ತೀಸ್‌ಗಢದ ದೂರದ ಪ್ರದೇಶಗಳನ್ನು ಸಂಪರ್ಕಿಸುತ್ತದೆ.

ಕೊರ್ಬಾದಲ್ಲಿ 130 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ವಾರ್ಷಿಕ 60 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ʻಇಂಡಿಯನ್ ಆಯಿಲ್ ಕಾರ್ಪೊರೇಷನ್ʼನ ಬಾಟ್ಲಿಂಗ್ ಘಟಕವನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇದಲ್ಲದೆ, ʻಆಯುಷ್ಮಾನ್ ಭಾರತ್ʼ ಅಡಿಯಲ್ಲಿ ಫಲಾನುಭವಿಗಳಿಗೆ 75 ಲಕ್ಷ ಕಾರ್ಡ್‌ಗಳ ವಿತರಣೆಗೂ ಪ್ರಧಾನಿ ಚಾಲನೆ ನೀಡಲಿದ್ದಾರೆ.

ಗೋರಖ್‌ಪುರದಲ್ಲಿ ಪ್ರಧಾನಿ

ಪ್ರಧಾನಮಂತ್ರಿಯವರು ಗೋರಖ್‌ಪುರದ ʻಗೀತಾಪ್ರೆಸ್‌ಗೆʼ ಭೇಟಿ ನೀಡಲಿದ್ದಾರೆ ಮತ್ತು ಐತಿಹಾಸಿಕ ಮುದ್ರಣಾಲಯದ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅವರು ʻಚಿತ್ರಮಯ ಶಿವ ಪುರಾಣʼ ಗ್ರಂಥವನ್ನು ಬಿಡುಗಡೆ  ಮಾಡಲಿದ್ದಾರೆ. ಪ್ರಧಾನಮಂತ್ರಿಯವರು ʻಗೀತಾ ಪ್ರೆಸ್‌ʼಗೆ ಸೇರಿದ ʻಲೀಲಾ ಚಿತ್ರʼ ದೇಗುಲಕ್ಕೂ ಭೇಟಿ ನೀಡಲಿದ್ದಾರೆ.

ಪ್ರಧಾನಮಂತ್ರಿಯವರು ಗೋರಖ್‌ಪುರ ರೈಲ್ವೆ ನಿಲ್ದಾಣದಿಂದ ಎರಡು ʻವಂದೇ ಭಾರತ್ʼ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ʻಗೋರಖ್‌ಪುರ-ಲಖನೌ ವಂದೇಭಾರತ್ ಎಕ್ಸ್‌ಪ್ರೆಸ್‌ʼ ಮತ್ತು ʻಜೋಧ್‌ಪುರ-ಅಹಮದಾಬಾದ್ (ಸಾಬರಮತಿ) ವಂದೇ ಭಾರತ್ ಎಕ್ಸ್‌ಪ್ರೆಸ್ʼ ರೈಲುಗಳು ಇವಾಗಿವೆ.

 

ʻಗೋರಖ್‌ಪುರ – ಲಖನೌ ವಂದೇ ಭಾರತ್ ಎಕ್ಸ್‌ಪ್ರೆಸ್‌ʼ ರೈಲು ಅಯೋಧ್ಯೆಯ ಮೂಲಕ ಹಾದುಹೋಗುತ್ತದೆ ಮತ್ತು ರಾಜ್ಯದ ಪ್ರಮುಖ ನಗರಗಳಿಗೆ ಸಂಪರ್ಕವನ್ನು ಸುಧಾರಿಸುತ್ತದೆ. ಅಲ್ಲದೆ, ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡುತ್ತದೆ. ʻಜೋಧ್‌ಪುರ - ಸಾಬರಮತಿ ವಂದೇ ಭಾರತ್ ಎಕ್ಸ್‌ಪ್ರೆಸ್‌ʼ ರೈಲು ಜೋಧ್‌ಪುರ, ಅಬು ರೋಡ್, ಅಹಮದಾಬಾದ್‌ನಂತಹ ಪ್ರಸಿದ್ಧ ಸ್ಥಳಗಳಿಗೆ ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಈ ಪ್ರದೇಶದ ಸಾಮಾಜಿಕ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ.

ಪ್ರಧಾನಮಂತ್ರಿಯವರು ಗೋರಖ್‌ಪುರ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ನಿಲ್ದಾಣವನ್ನು ಸುಮಾರು 498 ಕೋಟಿ ರೂ.ಗಳ ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗುವುದು ಮತ್ತು ವಿಶ್ವದರ್ಜೆಯ ಪ್ರಯಾಣಿಕರ ಸೌಲಭ್ಯಗಳನ್ನು ಕಲ್ಪಿಸಲಾಗುವುದು.

ವಾರಣಾಸಿಯಲ್ಲಿ ಪ್ರಧಾನ ಮಂತ್ರಿ

ವಾರಾಣಸಿಯಲ್ಲಿ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು 12,100 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ/ಶಂಕುಸ್ಥಾಪನೆ  ನೆರವೇರಿಸಲಿದ್ದಾರೆ.

ಪ್ರಧಾನಮಂತ್ರಿಯವರು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ - ಸೋನ್ ನಗರ ರೈಲ್ವೆ ಮಾರ್ಗದ ʻವಿಶೇಷ ಸರಕು ಸಾಗಣೆ ಕಾರಿಡಾರ್‌ʼ ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. 6760 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಈ ಹೊಸ ಮಾರ್ಗವು ಸರಕುಗಳ ತ್ವರಿತ ಮತ್ತು ಪರಿಣಾಮಕಾರಿ ಚಲನೆಗೆ ಅನುವು ಮಾಡಿಕೊಡುತ್ತದೆ. 990 ಕೋಟಿಗೂ ಅಧಿಕ ವೆಚ್ಚದಲ್ಲಿ ವಿದ್ಯುದ್ದೀಕರಣ ಅಥವಾ ಡಬ್ಲಿಂಗ್ ಪೂರ್ಣಗೊಂಡಿರುವ ಮೂರು ರೈಲು ಮಾರ್ಗಗಳನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇವುಗಳಲ್ಲಿ ಘಾಜಿಪುರ ನಗರ - ಅನ್ರಿಹಾರ್ ರೈಲು ಮಾರ್ಗ, ಅನ್ರಿಹಾರ್-ಜೌನ್ಪುರ್ ರೈಲು ಮಾರ್ಗ ಮತ್ತು ಭಟ್ನಿ-ಅನ್ರಿಹಾರ್ ರೈಲು ಮಾರ್ಗಗಳು ಸೇರಿವೆ. ಇದರೊಂದಿಗೆ ಉತ್ತರ ಪ್ರದೇಶದ ರೈಲ್ವೆ ಮಾರ್ಗಗಳ 100 ಪ್ರತಿಶತ ವಿದ್ಯುದ್ದೀಕರಣ ಪೂರ್ಣಗೊಂಡಂತಾಗುತ್ತದೆ.

2750 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ಅಗಲೀಕರಣ ಪೂರ್ಣಗೊಂಡಿರುವ ರಾಷ್ಟ್ರೀಯ ಹೆದ್ದಾರಿ 56ರ ವಾರಣಾಸಿ-ಜೌನಪುರ ವಿಭಾಗದ ಚತುಷ್ಪಥ ರಸ್ತೆಯನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಪ್ರಧಾನಮಂತ್ರಿಯವರು ಉದ್ಘಾಟಿಸಲಿರುವ ವಾರಣಾಸಿಯ ಹಲವು ಯೋಜನೆಗಳಲ್ಲಿ 18 ಲೋಕೋಪಯೋಗಿ ರಸ್ತೆಗಳ ನಿರ್ಮಾಣ ಮತ್ತು ನವೀಕರಣ; ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ನಿರ್ಮಿಸಲಾದ ಅಂತರರಾಷ್ಟ್ರೀಯ ಬಾಲಕಿಯರ ಹಾಸ್ಟೆಲ್ ಕಟ್ಟಡ; ಕರ್ಸಾರಾ ಗ್ರಾಮದಲ್ಲಿ ಸೆಂಟ್ರಲ್ ಇನ್ಸ್‌ಟಿಟ್ಯೂಟ್‌ ಆಫ್ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಆಂಡ್‌ ಟೆಕ್ನಾಲಜಿ (ಸಿಪೆಟ್) - ವೃತ್ತಿಪರ ತರಬೇತಿ ಕೇಂದ್ರ; ಸಿಂಧೌರಾದ ಪೊಲೀಸ್ ಠಾಣೆಯಲ್ಲಿ ವಸತಿ ಕಟ್ಟಡಗಳು ಮತ್ತು ಸೌಲಭ್ಯಗಳು; ಭುಲ್ಲನಪುರದ ʻಪಿಎಸಿʼ; ಪಿಂದ್ರಾದಲ್ಲಿ ಅಗ್ನಿಶಾಮಕ ಠಾಣೆ; ಮತ್ತು ತರ್ಸಾಡಾದಲ್ಲಿ ಸರ್ಕಾರಿ ವಸತಿ ಶಾಲೆ; ಆರ್ಥಿಕ ಅಪರಾಧಗಳ ಸಂಶೋಧನಾ ಸಂಸ್ಥೆ ಕಟ್ಟಡ; ಮೋಹನ್ ಕತ್ರಾದಿಂದ ಕೊನಿಯಾ ಘಾಟ್‌ವರೆಗೆ ಒಳಚರಂಡಿ ಮಾರ್ಗ ಹಾಗೂ ರಾಮನಾ ಗ್ರಾಮದಲ್ಲಿ ಆಧುನಿಕ ಸೆಪ್ಟೇಜ್ ನಿರ್ವಹಣಾ ವ್ಯವಸ್ಥೆ; 30 ಡಬಲ್ ಸೈಡೆಡ್ ಬ್ಯಾಕ್ಲಿಟ್ ಎಲ್ಇಡಿ ಯುನಿಪೋಲ್‌ಳು; ರಾಮನಗರದ ಎನ್‌ಡಿಡಿಬಿ ಹಾಲಿನ ಘಟಕದಲ್ಲಿ ಹಸುವಿನ ಸಗಣಿ ಆಧಾರಿತ ಜೈವಿಕ ಅನಿಲ ಸ್ಥಾವರ; ಮತ್ತು ದಶಾಶ್ವಮೇಧ ಘಾಟ್‌ನಲ್ಲಿ ಗಂಗೆಯಲ್ಲಿ ಮೀಯುವ ಭಕ್ತರ ಸ್ನಾನಕ್ಕೆ ಅನುವು ಮಾಡಿಕೊಡುವ ವಿಶಿಷ್ಟವಾದ ತೇಲುವ ಬಟ್ಟೆ ಬದಲಾಯಿಸುವ ಕೋಣೆಗಳ ಜೆಟ್ಟಿ ಸೇರಿವೆ.

ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿರುವ ಯೋಜನೆಗಳಲ್ಲಿ ಚೌಖಂಡಿ, ಕಡಿಪುರ ಮತ್ತು ಹರ್‌ದತ್ತಾಪುರ ರೈಲ್ವೆ ನಿಲ್ದಾಣಗಳ ಬಳಿ 3 ದ್ವಿಪಥ ರೈಲ್ವೆ ಮೇಲ್ಸೇತುವೆ (ಆರ್‌ಒಬಿ) ನಿರ್ಮಾಣ; ವ್ಯಾಸನಗರ - ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ರೈಲ್ವೆ ಮೇಲ್ಸೇತುವೆ ನಿರ್ಮಾಣ; ಮತ್ತು 15 ಲೋಕೋಪಯೋಗಿ ರಸ್ತೆಗಳ ನಿರ್ಮಾಣ ಮತ್ತು ನವೀಕರಣವೂ ಸೇರಿವೆ. ಈ ಯೋಜನೆಗಳನ್ನು ಸುಮಾರು 780 ಕೋಟಿ ರೂ.ಗಳ ಒಟ್ಟು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.

ʻಜಲ ಜೀವನ್ ಮಿಷನ್ʼ ಅಡಿಯಲ್ಲಿ 550 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗುವ 192 ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳಿಗೂ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು 192 ಹಳ್ಳಿಗಳ 7 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುತ್ತದೆ.

ಪ್ರಧಾನಮಂತ್ರಿಯವರು ಮಣಿಕರ್ಣಿಕಾ ಮತ್ತು ಹರಿಶ್ಚಂದ್ರ ಘಟ್ಟಗಳ ಮರುವಿನ್ಯಾಸ ಮತ್ತು ಪುನರಾಭಿವೃದ್ಧಿಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನವೀಕರಣದ ಬಳಿಕ ಈ ಘಟ್ಟಗಳಲ್ಲಿ ಸಾರ್ವಜನಿಕ ಸೌಕರ್ಯಗಳು ಹೆಚ್ಚಲಿದ್ದು ಕಾಯುವ ಪ್ರದೇಶಗಳು, ಮರದ ಸಂಗ್ರಹಣೆ, ತ್ಯಾಜ್ಯ ವಿಲೇವಾರಿ ಮತ್ತು ಪರಿಸರ ಸ್ನೇಹಿ ಶವಸಂಸ್ಕಾರದ ಚಿತೆಗಳನ್ನು ಒದಗಿಸಲಿವೆ.

ದಶಾಶ್ವಮೇಧ ಘಾಟ್‌ನಲ್ಲಿ ನಿರ್ಮಿಸಲಾಗಿರುವ ತೇಲುವ ಬಟ್ಟೆ ಬದಲಾಯಿಸುವ ಕೋಣೆ ಜೆಟ್ಟಿಗಳ ಮಾದರಿಯಲ್ಲೇ ವಾರಾಣಸಿಯ ಗಂಗಾ ನದಿಯ ಆರು ಧಾರ್ಮಿಕ ಮಹತ್ವದ ಸ್ನಾನ ಘಟ್ಟಗಳಲ್ಲಿ ತೇಲುವ ಬಟ್ಟೆ ಬದಲಾಯಿಸುವ ಕೋಣೆ ಜೆಟ್ಟಿಗಳ ನಿರ್ಮಾಣ ಹಾಗೂ ಕರ್ಸಾರದ ʻಸಿಪೆಟ್ʼ ಕ್ಯಾಂಪಸ್ನಲ್ಲಿ ವಿದ್ಯಾರ್ಥಿ ನಿಲಯ ನಿರ್ಮಾಣ ಸೇರಿದಂತೆ ಇತರ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು.

ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಪಿಎಂ ಸ್ವನಿಧಿ ಸಾಲ, ʻಪಿಎಂಎವೈ-ಗ್ರಾಮೀಣʼ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಮನೆಗಳ ಕೀಲಿಗಳು ಮತ್ತು ʻಆಯುಷ್ಮಾನ್ ಭಾರತ್‌ ಕಾರ್ಡ್ʼಗಳನ್ನು ಉತ್ತರ ಪ್ರದೇಶದ ಫಲಾನುಭವಿಗಳಿಗೆ ವಿತರಿಸಲಿದ್ದಾರೆ. ಆ ಮೂಲಕ 5 ಲಕ್ಷ ʻಪಿಎಂಎವೈʼ ಫಲಾನುಭವಿಗಳ ಗೃಹ ಪ್ರವೇಶ, ಅರ್ಹ ಫಲಾನುಭವಿಗಳಿಗೆ 1.25 ಲಕ್ಷ ʻಪಿಎಂಎಸ್ ಸ್ವನಿಧಿʼ ಸಾಲಗಳ ವಿತರಣೆ ಹಾಗೂ 2.88 ಕೋಟಿ ʻಆಯುಷ್ಮಾನ್ ಕಾರ್ಡ್ʼಗಳ ವಿತರಣೆಗೆ ಚಾಲನೆ ದೊರೆಯಲಿದೆ.

ವಾರಂಗಲ್‌ನಲ್ಲಿ ಪ್ರಧಾನ ಮಂತ್ರಿ

ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣದಲ್ಲಿ ಸುಮಾರು 6,100 ಕೋಟಿ ರೂ.ಗಳ ಮೌಲ್ಯದ ಹಲವಾರು ನಿರ್ಣಾಯಕ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಪ್ರಧಾನಮಂತ್ರಿ ಅವರು 5,550 ಕೋಟಿ ರೂಪಾಯಿ ಮೌಲ್ಯದ 176 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಾಗ್ಪುರ-ವಿಜಯವಾಡ ಕಾರಿಡಾರ್‌ನ 108 ಕಿ.ಮೀ ಉದ್ದದ ʻಮಂಚೇರಿಯಲ್-ವಾರಂಗಲ್ʼ ವಿಭಾಗವೂ ಈ ಯೋಜನೆಗಳಲ್ಲಿ ಸೇರಿದೆ. ಈ ವಿಭಾಗವು ಮಂಚೇರಿಯಲ್ ಮತ್ತು ವಾರಂಗಲ್ ನಡುವಿನ ದೂರವನ್ನು ಸುಮಾರು 34 ಕಿ.ಮೀ ಕಡಿಮೆ ಮಾಡುವ ಮೂಲಕ ಪ್ರಯಾಣದ ಸಮಯವನ್ನು ಕಡಿತಗೊಳಿಸುತ್ತದೆ. ಜೊತೆಗೆ ರಾಷ್ಟ್ರೀಯ ಹೆದ್ದಾರಿ - 44 ಮತ್ತು ರಾಷ್ಟ್ರೀಯ ಹೆದ್ದಾರಿ - 65ರಲ್ಲಿ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ರಾಷ್ಟ್ರೀಯ ಹೆದ್ದಾರಿ 563ರ 68 ಕಿ.ಮೀ ಉದ್ದದ ಕರೀಂನಗರ-ವಾರಂಗಲ್ ವಿಭಾಗವನ್ನು ಈಗಿರುವ ಎರಡು ಪಥದಿಂದ ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಗೂ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ಹೈದರಾಬಾದ್-ವಾರಂಗಲ್ ಕೈಗಾರಿಕಾ ಕಾರಿಡಾರ್, ಕಾಕತೀಯ ಮೆಗಾ ಜವಳಿ ಪಾರ್ಕ್ ಮತ್ತು ವಾರಂಗಲ್‌ನ ವಿಶೇಷ ಆರ್ಥಿಕ ವಲಯಕ್ಕೆ ಸಂಪರ್ಕವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಪ್ರಧಾನಮಂತ್ರಿಯವರು ಕಾಜಿಪೇಟ್‌ನ ರೈಲ್ವೆ ಉತ್ಪಾದನಾ ಘಟಕಕ್ಕೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 500 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವ ಆಧುನಿಕ ಉತ್ಪಾದನಾ ಘಟಕವು, ವ್ಯಾಗನ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ವ್ಯಾಗನ್‌ಗಳ ರೊಬೊಟಿಕ್ ಪೇಂಟಿಂಗ್, ಅತ್ಯಾಧುನಿಕ ಯಂತ್ರೋಪಕರಣಗಳು, ಆಧುನಿಕ ವಸ್ತು ಸಂಗ್ರಹ ಮತ್ತು ನಿರ್ವಹಣೆಯಂತಹ ಇತ್ತೀಚಿನ ತಂತ್ರಜ್ಞಾನ ಸೌಲಭ್ಯಗಳನ್ನು ಇದು ಹೊಂದಿರುತ್ತದೆ. ಇದು ಸ್ಥಳೀಯ ಉದ್ಯೋಗ ಸೃಷ್ಟಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ಪೂರಕ ಘಟಕಗಳ ಅಭಿವೃದ್ಧಿಗೆ ಸಹಾಯ ಮಾಡುತ್ತದೆ.

ಬಿಕಾನೇರ್‌ನಲ್ಲಿ ಪ್ರಧಾನ ಮಂತ್ರಿ

ಪ್ರಧಾನಮಂತ್ರಿಯವರು ಬಿಕಾನೇರ್‌ನಲ್ಲಿ 24,300 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಪ್ರಧಾನಮಂತ್ರಿಯವರು ಅಮೃತಸರ – ಜಾಮ್‌ನಗರ್ ಆರ್ಥಿಕ ಕಾರಿಡಾರ್‌ನ ಆರು ಪಥದ ʻಗ್ರೀನ್ ಫೀಲ್ಡ್ ಎಕ್ಸ್‌ಪ್ರೆಸ್ ವೇʼ ವಿಭಾಗವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ಜಖ್ದವಾಲಿ ಗ್ರಾಮದಿಂದ ಜಲೋರ್ ಜಿಲ್ಲೆಯ ಖೇತ್ಲಾವಾಸ್ ಗ್ರಾಮದವರೆಗೆ 500 ಕಿ.ಮೀ.ಗೂ ಹೆಚ್ಚು ವ್ಯಾಪಿಸಿರುವ ಈ ವಿಭಾಗವನ್ನು ಸುಮಾರು 11,125 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಎಕ್ಸ್‌ಪ್ರೆಸ್‌ ಹೆದ್ದಾರಿಯು ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುವುದಲ್ಲದೆ, ಪ್ರಮುಖ ನಗರಗಳು ಮತ್ತು ಕೈಗಾರಿಕಾ ಕಾರಿಡಾರ್‌ಗಳ ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ. ಈ ಎಕ್ಸ್‌ಪ್ರೆಸ್‌ ಹೆದ್ದಾರಿಯು ಸರಕುಗಳ ತಡೆರಹಿತ ಸಾಗಣೆಗೆ ಅನುಕೂಲ ಮಾಡಿಕೊಡುವುದಲ್ಲದೆ, ಅದರ ಮಾರ್ಗದಲ್ಲಿ ಪ್ರವಾಸೋದ್ಯಮ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.

ಈ ವಲಯದ ವಿದ್ಯುತ್ ವಲಯಕ್ಕೆ ಉತ್ತೇಜನ ನೀಡುವ ಸಲುವಾಗಿ ಪ್ರಧಾನಮಂತ್ರಿಯವರು ಸುಮಾರು 10,950 ಕೋಟಿ ರೂಪಾಯಿ ಮೌಲ್ಯದ ʻಹಸಿರು ಇಂಧನ ಕಾರಿಡಾರ್‌ʼನ ಅಂತರ ರಾಜ್ಯ ಪ್ರಸರಣ ಮಾರ್ಗದ ಮೊದಲ ಹಂತವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ʻಹಸಿರು ಇಂಧನ ಕಾರಿಡಾರ್ʼ,  ಸುಮಾರು 6 ಗಿಗಾವ್ಯಾಟ್ ನವೀಕರಿಸಬಹುದಾದ ಶಕ್ತಿಯನ್ನು ಸಂಯೋಜಿಸುತ್ತದೆ. ಅಲ್ಲದೆ,  ಪಶ್ಚಿಮ ವಲಯದಲ್ಲಿ ಶಾಖೋತ್ಪನ್ನ ವಿದ್ಯುತ್‌ ಮತ್ತು ಉತ್ತರ ವಲಯದಲ್ಲಿ ಜಲವಿದ್ಯುತ್ ಗ್ರಿಡ್‌ನೊಂದಿಗೆ ನವೀಕರಿಸಬಹುದಾದ ವಿದ್ಯುತ್‌ ಗ್ರಿಡ್ನ ಸಮತೋಲನಕ್ಕೆ ಸಹಾಯ ಮಾಡುತ್ತದೆ, ಆ ಮೂಲಕ ಉತ್ತರ ಮತ್ತು ಪಶ್ಚಿಮ ವಲದಯ ನಡುವೆ ಪ್ರಸರಣ ಸಾಮರ್ಥ್ಯವನ್ನು ಬಲಪಡಿಸುತ್ತದೆ. ಪ್ರಧಾನಮಂತ್ರಿಯವರು ಬಿಕಾನೇರ್ ಅನ್ನು ಭಿವಾಡಿ ಪ್ರಸರಣ ಮಾರ್ಗಕ್ಕೆ ಸಮರ್ಪಿಸಲಿದ್ದಾರೆ. ಸುಮಾರು 1,340 ಕೋಟಿ ರೂ.ಗಳ ವೆಚ್ಚದಲ್ಲಿ ಪವರ್ ಗ್ರಿಡ್ ಅಭಿವೃದ್ಧಿಪಡಿಸಲಿರುವ ಬಿಕಾನೇರ್‌ನಿಂದ ಭಿವಾಡಿ ಪ್ರಸರಣ ಮಾರ್ಗವು ರಾಜಸ್ಥಾನದಲ್ಲಿ 8.1 ಗಿಗಾವ್ಯಾಟ್ ಸೌರಶಕ್ತಿಯನ್ನು ಸ್ಥಳಾಂತರಿಸಲು ಸಹಾಯ ಮಾಡುತ್ತದೆ.

ಪ್ರಧಾನಮಂತ್ರಿಯವರು ಬಿಕಾನೇರ್ ನಲ್ಲಿ 30 ಹಾಸಿಗೆಗಳ ಹೊಸ ನೌಕರರ ರಾಜ್ಯ ವಿಮಾ ನಿಗಮ (ಇಎಸ್‌ಐಸಿ) ಆಸ್ಪತ್ರೆಯನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಆಸ್ಪತ್ರೆಯು 100 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿರಲಿದೆ. ಈ ಆಸ್ಪತ್ರೆಯು ಸ್ಥಳೀಯ ಜನರ ವೈದ್ಯಕೀಯ ಅಗತ್ಯಗಳನ್ನು ಪೂರೈಸುವುದರ ಜೊತೆಗೆ,  ಗುಣಮಟ್ಟದ ಆರೋಗ್ಯ ಸೇವೆಗಳ ಲಭ್ಯತೆಯನ್ನು ಖಾತರಿಪಡಿಸುವ ಪ್ರಮುಖ ಆರೋಗ್ಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.

ಇದಲ್ಲದೆ, ಪ್ರಧಾನಮಂತ್ರಿಯವರು ಬಿಕಾನೇರ್ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸುಮಾರು 450 ಕೋಟಿ ರೂ.ಗಳ ವೆಚ್ಚದಲ್ಲಿ ನಡೆಸಲಾಗುವ ಈ ಕಾಮಗಾರಿಯು ಎಲ್ಲಾ ಪ್ಲಾಟ್‌ಫಾರ್ಮ್‌ಗಳ ನವೀಕರಣ; ನೆಲಹಾಸು ಮತ್ತು ಮೇಲ್ಛಾವಣಿ ನವೀಕರಣವನ್ನು ಒಳಗೊಂಡಿದೆ. ರೈಲ್ವೆ ನಿಲ್ದಾಣದ ಹಾಲಿ ಪಾರಂಪರಿಕ ರಚನೆಗೆ ಧಕ್ಕೆಯಾಗದಂತೆ ಖಾತರಿಪಡಿಸಿಕೊಂಡು ಈ ಕಾಮಗಾರಿ ನಡೆಸಲಾಗುವುದು.

43 ಕಿ.ಮೀ ಉದ್ದದ ಚುರು-ರತನ್‌ಘರ್ ವಿಭಾಗದ ಡಬ್ಲಿಂಗ್‌ ಕಾರ್ಯಕ್ಕೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ರೈಲು ಮಾರ್ಗದ ಡಬ್ಲಿಂಗ್‌ನಿಂದ ಸಂಪರ್ಕವು ಸುಧಾರಿಸುತ್ತದೆ, ಬಿಕಾನೇರ್ ಪ್ರದೇಶದಿಂದ ದೇಶದ ಇತರ ಭಾಗಗಳಿಗೆ ಜಿಪ್ಸಮ್, ಸುಣ್ಣದ ಕಲ್ಲು, ಆಹಾರ ಧಾನ್ಯಗಳು ಮತ್ತು ರಸಗೊಬ್ಬರ ಉತ್ಪನ್ನಗಳನ್ನು ಸುಲಭವಾಗಿ ಸಾಗಿಸಲು ಇದು ಅನುವು ಮಾಡಿಕೊಡುತ್ತದೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...

Prime Minister visited the Indian Arrival monument at Monument Gardens in Georgetown today. He was accompanied by PM of Guyana Brig (Retd) Mark Phillips. An ensemble of Tassa Drums welcomed Prime Minister as he paid floral tribute at the Arrival Monument. Paying homage at the monument, Prime Minister recalled the struggle and sacrifices of Indian diaspora and their pivotal contribution to preserving and promoting Indian culture and tradition in Guyana. He planted a Bel Patra sapling at the monument.

The monument is a replica of the first ship which arrived in Guyana in 1838 bringing indentured migrants from India. It was gifted by India to the people of Guyana in 1991.