ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023 ಏಪ್ರಿಲ್ 14ರಂದು ಅಸ್ಸಾಂಗೆ ಭೇಟಿ ನೀಡಲಿದ್ದಾರೆ.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಪ್ರಧಾನ ಮಂತ್ರಿ ಅವರು ಏಮ್ಸ್ ಗುವಾಹಟಿ ತಲುಪಿ, ಹೊಸದಾಗಿ ನಿರ್ಮಿಸಿರುವ ಕ್ಯಾಂಪಸ್ ಪರಿಶೀಲಿಸಲಿದ್ದಾರೆ. ತರುವಾಯ ಅವರು ಸಾರ್ವಜನಿಕ ಸಮಾರಂಭದಲ್ಲಿ, ಏಮ್ಸ್ ಗುವಾಹಟಿ ಮತ್ತು ಇತರೆ 3 ವೈದ್ಯಕೀಯ ಕಾಲೇಜುಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅವರು ಅಸ್ಸಾಂ ಅಡ್ವಾನ್ಸ್ಡ್ ಹೆಲ್ತ್ ಕೇರ್ ಇನ್ನೋವೇಶನ್ ಇನ್ ಸ್ಟಿಟ್ಯೂಟ್ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ನಂತರ ಅರ್ಹ ಫಲಾನುಭವಿಗಳಿಗೆ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB-PMJAY) ಕಾರ್ಡ್‌ಗಳನ್ನು ವಿತರಿಸುವ ಮೂಲಕ 'ಆಪ್ಕೆ ದ್ವಾರ ಆಯುಷ್ಮಾನ್' ಅಭಿಯಾನ ಪ್ರಾರಂಭಿಸಲಿದ್ದಾರೆ.
ಮಧ್ಯಾಹ್ನ 2:15ರ ಸುಮಾರಿಗೆ, ಗುವಾಹಟಿಯ ಶ್ರೀಮಂತ ಶಂಕರದೇವ್ ಕಲಾಕ್ಷೇತ್ರದಲ್ಲಿ ಗುವಾಹಟಿ ಹೈಕೋರ್ಟ್‌ನ 75ನೇ ವಾರ್ಷಿಕೋತ್ಸವದಲ್ಲಿ ಪ್ರಧಾನ ಮಂತ್ರಿ ಭಾಗವಹಿಸಲಿದ್ದಾರೆ.
ಸಂಜೆ 5 ಗಂಟೆಗೆ ಸಾರ್ವಜನಿಕ ಸಮಾರಂಭದ ಅಧ್ಯಕ್ಷತೆ ವಹಿಸಲು ಪ್ರಧಾನ ಮಂತ್ರಿ ಅವರು ಗುವಾಹಟಿಯ ಸರುಸಜೈ ಕ್ರೀಡಾಂಗಣ ತಲುಪಲಿದ್ದಾರೆ. ಅಲ್ಲಿ ಅವರು 10 ಸಾವಿರಕ್ಕೂ ಹೆಚ್ಚು ಕಲಾವಿದರು ಪ್ರದರ್ಶಿಸಲಿರುವ ವರ್ಣರಂಜಿತ ಬಿಹು ನೃತ್ಯ ವೀಕ್ಷಿಸುತ್ತಾರೆ. ಕಾರ್ಯಕ್ರಮ ಸಮಯದಲ್ಲಿ ಪ್ರಧಾನ ಮಂತ್ರಿ ಅವರು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ನಾಮ್ರೂಪ್‌ನಲ್ಲಿ 500 ಟಿಪಿಡಿ ಮೆಂಥಾಲ್ ಪ್ಲಾಂಟ್‌ನ ಕಾರ್ಯಾರಂಭ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸುತ್ತಾರೆ; ಪಲಾಶಬರಿ ಮತ್ತು ಸುಲ್ಕುಚಿಯನ್ನು ಸಂಪರ್ಕಿಸುವ ಬ್ರಹ್ಮಪುತ್ರ ನದಿಯ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ; ರಂಗ್ ಘರ್, ಶಿವಸಾಗರದ ಸುಂದರೀಕರಣ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ, 5 ರೈಲ್ವೆ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಗುವಾಹಟಿಯ ಏಮ್ಸ್‌ನಲ್ಲಿ ಪ್ರಧಾನಮಂತ್ರಿ
ಪ್ರಧಾನ ಮಂತ್ರಿ ಅವರು 3,400 ಕೋಟಿ.ರೂ.ಗಿಂತ ಹೆಚ್ಚಿನ ಮೊತ್ತದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ
ಗುವಾಹಟಿಯ ಏಮ್ಸ್ ಕಾರ್ಯಾಚರಣೆಯು ಅಸ್ಸಾಂ ರಾಜ್ಯ ಮತ್ತು ಇಡೀ ಈಶಾನ್ಯ ಪ್ರದೇಶಕ್ಕೆ ಮಹತ್ವದ ಸಂದರ್ಭವಾಗಿದೆ. ಇದು ದೇಶಾದ್ಯಂತ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವ ಪ್ರಧಾನ ಮಂತ್ರಿ ಅವರ ಬದ್ಧತೆಗೆ ಸಾಕ್ಷಿಯಾಗಿದೆ. ಈ ಆಸ್ಪತ್ರೆಯ ಶಂಕುಸ್ಥಾಪನೆಯನ್ನು 2017 ಮೇನಲ್ಲಿ ಪ್ರಧಾನ ಮಂತ್ರಿಯವರು ನೆರವೇರಿಸಿದ್ದರು. 1120 ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ., ಏಮ್ಸ್ ಗುವಾಹಟಿಯು 30 ಆಯುಷ್ ಹಾಸಿಗೆಗಳು ಸೇರಿದಂತೆ 750 ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ಅತ್ಯಾಧುನಿಕ ಆಸ್ಪತ್ರೆಯಾಗಿದೆ. ಈ ಆಸ್ಪತ್ರೆಯು ಪ್ರತಿ ವರ್ಷ 100 ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವ ಸಾಮರ್ಥ್ಯ ಹೊಂದಿದೆ. ಈ ಆಸ್ಪತ್ರೆಯು ಈಶಾನ್ಯ ಭಾಗದ ಜನರಿಗೆ ವಿಶ್ವ ದರ್ಜೆಯ ಆರೋಗ್ಯ ಸೌಲಭ್ಯಗಳನ್ನು ಒದಗಿಸಲಿದೆ.
ಪ್ರಧಾನ ಮಂತ್ರಿ ಅವರು ನಲ್ಬರಿ ವೈದ್ಯಕೀಯ ಕಾಲೇಜು, ನಲ್ಬರಿ; ನಾಗಾನ್ ವೈದ್ಯಕೀಯ ಕಾಲೇಜು, ನಾಗಾಂವ್; ಮತ್ತು ಕೊಕ್ರಜಾರ್ ವೈದ್ಯಕೀಯ ಕಾಲೇಜು, ಕೊಕ್ರಜಾರ್, ಈ ಮೂರು ವೈದ್ಯಕೀಯ ಕಾಲೇಜುಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ; ಇವುಗಳನ್ನು ಕ್ರಮವಾಗಿ ಸುಮಾರು 615 ಕೋಟಿ ರೂ., 600 ಕೋಟಿ ರೂ. ಮತ್ತು 535 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರತಿ ವೈದ್ಯಕೀಯ ಕಾಲೇಜಿನಲ್ಲಿ ತುರ್ತು ಸೇವೆಗಳು, ಐಸಿಯು ಸೌಲಭ್ಯಗಳು, ಶಸ್ತ್ರಚಿಕಿತ್ಸಾ ಕೊಠಡಿ ಮತ್ತು ರೋಗ ಪತ್ತೆ ಇತ್ಯಾದಿ ಸೌಲಭ್ಯಗಳಿದ್ದು, ಒಪಿಡಿ, ಐಪಿಡಿ ಸೇವೆಗಳೊಂದಿಗೆ 500 ಹಾಸಿಗೆಗಳು ಹಾಗೂ ಬೋಧನಾ ಆಸ್ಪತ್ರೆ ಒಳಗೊಂಡಿದೆ. ಪ್ರತಿ ವರ್ಷ ವೈದ್ಯಕೀಯ ಕಾಲೇಜು 100 ಎಂಬಿಬೆಸ್ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವ ಸಾಮರ್ಥ್ಯ ಹೊಂದಿದೆ.
ಪ್ರಧಾನ ಮಂತ್ರಿ ಅವರು ‘ಆಪ್ಕೆ ದ್ವಾರ ಆಯುಷ್ಮಾನ್’ ಅಭಿಯಾನವನ್ನು ವಿಧ್ಯುಕ್ತವಾಗಿ ಪ್ರಾರಂಭಿಸಿದ್ದು, ಕಲ್ಯಾಣ ಯೋಜನೆಗಳ 100% ಶುದ್ಧತ್ವ ಖಚಿತಪಡಿಸಿಕೊಳ್ಳಲು ಪ್ರತಿಯೊಬ್ಬ ಫಲಾನುಭವಿಯನ್ನು ತಲುಪುವ ಅವರ ದೃಷ್ಟಿಯನ್ನು ಸಾಕಾರಗೊಳಿಸುವತ್ತ ಒಂದು ಹೆಜ್ಜೆಯಾಗಿದೆ. ಪ್ರಧಾನ ಮಂತ್ರಿ ಅವರು ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB-PMJAY) ಕಾರ್ಡ್‌ಗಳನ್ನು ಸಾಂಕೇತಿಕವಾಗಿ 3 ಫಲಾನುಭವಿಗಳಿಗೆ ವಿತರಿಸಲಿದ್ದಾರೆ, ನಂತರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸುಮಾರು 1.1 ಕೋಟಿ AB-PMJAY ಕಾರ್ಡ್‌ಗಳನ್ನು ವಿತರಿಸಲಾಗುವುದು.
ಅಸ್ಸಾಂ ಅಡ್ವಾನ್ಸ್ಡ್ ಹೆಲ್ತ್ ಕೇರ್ ಇನ್ನೋವೇಶನ್ ಇನ್ ಸ್ಟಿಟ್ಯೂಟ್(AAHII) ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದು, ಇದು ಆರೋಗ್ಯಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ 'ಆತ್ಮನಿರ್ಭರ್ ಭಾರತ್' ಮತ್ತು 'ಮೇಕ್ ಇನ್ ಇಂಡಿಯಾ'ದ ಪ್ರಧಾನ ಮಂತ್ರಿಗಳ ದೂರದೃಷ್ಟಿಯನ್ನು ಸಾಕಾರಗೊಳಿಸುವತ್ತ ಒಂದು ದಿಟ್ಟ ಹೆಜ್ಜೆಯಾಗಿದೆ. ದೇಶದಲ್ಲಿ ಆರೋಗ್ಯ ಸಂರಕ್ಷಣೆಯಲ್ಲಿ ಬಳಸಲಾಗುವ ಹೆಚ್ಚಿನ ತಂತ್ರಜ್ಞಾನಗಳನ್ನು ಆಮದು ಮಾಡಿಕೊಳ್ಳಲಾಗಿದೆ ಮತ್ತು ವಿಭಿನ್ನ ಸನ್ನಿವೇಶದಲ್ಲಿ ಅಭಿವೃದ್ಧಿಪಡಿಸಲಾಗಿದೆ, ಇದು ಭಾರತೀಯ ಪರಿಸರದಲ್ಲಿ ಕಾರ್ಯ ನಿರ್ವಹಿಸಲು ಹೆಚ್ಚು ದುಬಾರಿ ಮತ್ತು ಸಂಕೀರ್ಣವಾಗಿದೆ. AAHII ಸಂಸ್ಥೆಯನ್ನು ಅಂತಹ ಸನ್ನಿವೇಶಗಳನ್ನು ನಿರ್ವಹಿಸಲು ಸ್ಥಾಪಿಸಲಾಗುತ್ತಿದೆ. ಇದು 'ನಮ್ಮ ಸಮಸ್ಯೆಗಳಿಗೆ ನಮ್ಮದೇ ಪರಿಹಾರಗಳನ್ನು ನಾವು ಕಂಡುಕೊಳ್ಳುತ್ತೇವೆ' ಎಂಬ ಧ್ಯೇಯದೊಂದಿಗೆ ಕೆಲಸ ಮಾಡುತ್ತದೆ. AAHII ಅನ್ನು ಸುಮಾರು 546 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ವೈದ್ಯಕೀಯ ಮತ್ತು ಆರೋಗ್ಯ ಸಂರಕ್ಷಣೆಯಲ್ಲಿ ಅತ್ಯಾಧುನಿಕ ಆವಿಷ್ಕಾರಗಳು, ಸಂಶೋಧನೆ ಮತ್ತು ಅಭಿವೃದ್ಧಿ, ಆರೋಗ್ಯಕ್ಕೆ ಸಂಬಂಧಿಸಿದ ರಾಷ್ಟ್ರದ ವಿಶಿಷ್ಟ ಸಮಸ್ಯೆಗಳನ್ನು ಗುರುತಿಸುತ್ತದೆ ಮತ್ತು ಆ ಸಮಸ್ಯೆಗಳನ್ನು ಪರಿಹರಿಸಲು ಹೊಸ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.
ಶ್ರೀಮಂತ ಶಂಕರದೇವ ಕಲಾಕ್ಷೇತ್ರದಲ್ಲಿ ಪ್ರಧಾನ ಮಂತ್ರಿ
ಗುವಾಹಟಿ ಹೈಕೋರ್ಟ್‌ನ 75ನೇ ವಾರ್ಷಿಕೋತ್ಸವದಲ್ಲಿ ಪ್ರಧಾನಮಂತ್ರಿ ಅವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮ ಸಮಯದಲ್ಲಿ, ಅಸ್ಸಾಂ ಪೊಲೀಸರು ವಿನ್ಯಾಸಗೊಳಿಸಿದ ಮೊಬೈಲ್ ಅಪ್ಲಿಕೇಶನ್ 'ಅಸ್ಸಾಂ ಕಾಪ್' ಅನ್ನು ಪ್ರಧಾನಿ ಅನಾವರಣ ಮಾಡಲಿದ್ದಾರೆ. ಅಪರಾಧ ಮತ್ತು ಕ್ರಿಮಿನಲ್ ನೆಟ್‌ವರ್ಕ್ ಟ್ರ್ಯಾಕಿಂಗ್ ಸಿಸ್ಟಮ್ (CCTNS) ಮತ್ತು VAHAN ರಾಷ್ಟ್ರೀಯ ರಿಜಿಸ್ಟರ್‌ನ ಡೇಟಾಬೇಸ್‌ನಿಂದ ಆರೋಪಿಗಳು ಮತ್ತು ವಾಹನ ಹುಡುಕಾಟವನ್ನು ಅಪ್ಲಿಕೇಶನ್ ಸುಗಮಗೊಳಿಸುತ್ತದೆ.
ಗೌಹಾಟಿ ಹೈಕೋರ್ಟ್ ಅನ್ನು 1948ರಲ್ಲಿ ಸ್ಥಾಪಿಸಲಾಯಿತು. ಇದು ಅಸ್ಸಾಂ, ನಾಗಾಲ್ಯಾಂಡ್, ಮಣಿಪುರ, ಮೇಘಾಲಯ, ಮಿಜೋರಾಂ, ತ್ರಿಪುರಾ ಮತ್ತು ಅರುಣಾಚಲ ಪ್ರದೇಶ ಸೇರಿ 7 ಈಶಾನ್ಯ ರಾಜ್ಯಗಳಿಗೆ ಸಾಮಾನ್ಯ ನ್ಯಾಯಾಲಯವಾಗಿ 2013 ಮಾರ್ಚ್ ವರೆಗೆ ಕಾರ್ಯ ನಿರ್ವಹಿಸಿತು. ಮಣಿಪುರ, ಮೇಘಾಲಯ ಮತ್ತು ತ್ರಿಪುರ ರಾಜ್ಯಗಳಿಗೆ ಪ್ರತ್ಯೇಕ ಹೈಕೋರ್ಟ್ ರಚಿಸಲಾಯಿತು. ಗೌಹಾಟಿ ಹೈಕೋರ್ಟ್ ಈಗ ಅಸ್ಸಾಂ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳ ಅಧಿಕಾರ ವ್ಯಾಪ್ತಿ ಹೊಂದಿದೆ. ಅದರ ಪ್ರಧಾನ ಸ್ಥಾನವನ್ನು ಗುವಾಹಟಿಯಲ್ಲಿ ಮತ್ತು 3 ಶಾಶ್ವತ ಪೀಠಗಳನ್ನು ಕೊಹಿಮಾ (ನಾಗಾಲ್ಯಾಂಡ್), ಐಜ್ವಾಲ್ (ಮಿಜೋರಾಂ) ಮತ್ತು ಇಟಾನಗರ (ಅರುಣಾಚಲ ಪ್ರದೇಶ) ಹೊಂದಿದೆ.
ಸರುಸಜೈ ಕ್ರೀಡಾಂಗಣದಲ್ಲಿ ಪ್ರಧಾನಮಂತ್ರಿ
ಪ್ರಧಾನ ಮಂತ್ರಿ ಅವರು 10,900 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಪಲಾಶಬರಿ ಮತ್ತು ಸುಲ್ಕುಚಿ ಸಂಪರ್ಕಿಸುವ ಬ್ರಹ್ಮಪುತ್ರ ನದಿಯ ಸೇತುವೆ ನಿರ್ಮಾಣಕ್ಕೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸೇತುವೆಯು ಈ ಪ್ರದೇಶದಲ್ಲಿ ಹೆಚ್ಚು ಅಗತ್ಯವಿರುವ ಸಂಪರ್ಕ ಒದಗಿಸುತ್ತದೆ. ಪ್ರಧಾನಿ ಅವರು ದಿಬ್ರುಗಢ್‌ನ ನಾಮ್ರೂಪ್‌ನಲ್ಲಿ 500 ಟಿಪಿಡಿ ಸಾಮರ್ಥ್ಯದ ಮೆಥೆನಾಲ್ ಸ್ಥಾವರಕ್ಕೆ ಚಾಲನೆ ನೀಡಲಿದ್ದಾರೆ. ಅವರು ಈ ಪ್ರದೇಶದ ವಿವಿಧ ವಿಭಾಗಗಳಲ್ಲಿ ಜೋಡಿ ಮತ್ತು ವಿದ್ಯುದ್ದೀಕರಣ ಮಾರ್ಗ ಸೇರಿದಂತೆ 5 ರೈಲ್ವೆ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.
ಉದ್ಘಾಟನೆಗೊಳ್ಳುತ್ತಿರುವ ರೈಲ್ವೆ ಯೋಜನೆಗಳಲ್ಲಿ ದಿಗರು-ಲುಮ್ಡಿಂಗ್ ವಿಭಾಗ; ಗೌರಿಪುರ-ಅಭಯಪುರಿ ವಿಭಾಗ; ಹೊಸ ಬೊಂಗೈಗಾಂವ್-ಧೂಪ್ ಧಾರಾ ವಿಭಾಗದ ಜೋಡಿ ಮಾರ್ಗ; ರಾಣಿನಗರ ಜಲ್ಪೈಗುರಿ-ಗುವಾಹಟಿ ವಿಭಾಗದ ವಿದ್ಯುದೀಕರಣ; ಸೆಂಚೋವಾ-ಸಿಲ್ಘಾಟ್ ಟೌನ್ ಮತ್ತು ಸೆಂಚೋವಾ-ಮೈರಾಬರಿ ವಿಭಾಗದ ವಿದ್ಯುದೀಕರಣ ಮಾರ್ಗಗಳು ಈ ಯೋಜನೆಗಳಲ್ಲಿ ಸೇರಿವೆ.
ಪ್ರಧಾನ ಮಂತ್ರಿ ಅವರು ಶಿವಸಾಗರದಲ್ಲಿ ರಂಗ್ ಘರ್ ಅನ್ನು ಸುಂದರಗೊಳಿಸುವ ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ, ಇದು ಈ ಸ್ಥಳದಲ್ಲಿ ಪ್ರವಾಸಿ ಸೌಕರ್ಯಗಳನ್ನು ಹೆಚ್ಚಿಸುತ್ತದೆ. ರಂಗ್ ಘರ್ ಅನ್ನು ಸುಂದರಗೊಳಿಸುವ ಯೋಜನೆಯು ಬೃಹತ್ ಜಲಮೂಲದ ಸುತ್ತಲೂ ನಿರ್ಮಿಸಲಾದ ಕಾರಂಜಿ-ಪ್ರದರ್ಶನ ಮತ್ತು ಅಹೋಮ್ ರಾಜವಂಶದ ಇತಿಹಾಸ ಪ್ರದರ್ಶನ, ಸಾಹಸಮಯ ದೋಣಿ ವಿಹಾರಕ್ಕಾಗಿ ಜೆಟ್ಟಿಯೊಂದಿಗೆ ದೋಣಿ ಮನೆ, ಸ್ಥಳೀಯ ಕರಕುಶಲ ವಸ್ತುಗಳ ಪ್ರಚಾರಕ್ಕಾಗಿ ಕುಶಲಕರ್ಮಿಗಳ ಗ್ರಾಮ, ಆಹಾರಕ್ಕಾಗಿ ವೈವಿಧ್ಯಮಯ ಜನಾಂಗೀಯ ಪಾಕಪದ್ಧತಿಗಳಂತಹ ಸೌಲಭ್ಯಗಳನ್ನು ಒದಗಿಸುತ್ತದೆ. ಶಿವಸಾಗರದಲ್ಲಿರುವ ರಂಗ್ ಘರ್ ಅಹೋಮ್ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳನ್ನು ಬಿಂಬಿಸುವ ಅತ್ಯಂತ ಸಾಂಪ್ರದಾಯಿಕ ರಚನೆಯಾಗಿದೆ. ಇದನ್ನು 18 ನೇ ಶತಮಾನದಲ್ಲಿ ಅಹೋಮ್ ರಾಜ ಸ್ವರ್ಗದೇವ್ ಪ್ರಮತ್ತ ಸಿಂಹ ನಿರ್ಮಿಸಿದ್ದ.
ಅಸ್ಸಾಮಿನ ಸಾಂಸ್ಕೃತಿಕ ಮತ್ತು ಜೀವನದ ಗುರುತಾಗಿ ಜಾಗತಿಕವಾಗಿ ಪ್ರದರ್ಶಿಸುವ ಸಲುವಾಗಿ ಆಯೋಜಿಸಲಾದ ಮೆಗಾ ಬಿಹು ನೃತ್ಯ ಪ್ರದರ್ಶನಕ್ಕೆ ಪ್ರಧಾನಿ ಸಾಕ್ಷಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಒಂದೇ ಸ್ಥಳದಲ್ಲಿ 10,000ಕ್ಕೂ ಹೆಚ್ಚಿನ ಕಲಾವಿದರು ನೃತ್ಯ ಪ್ರದರ್ಶಿಸಲಿದ್ದಾರೆ. ಒಂದೇ ಸ್ಥಳದಲ್ಲಿ ವಿಶ್ವದ ಅತಿದೊಡ್ಡ ಬಿಹು ನೃತ್ಯ ಪ್ರದರ್ಶನದ ವಿಭಾಗದಲ್ಲಿ ಹೊಸ ಗಿನ್ನೆಸ್ ವಿಶ್ವ ದಾಖಲೆಗೆ ಈ ಕಾರ್ಯಕ್ರಮ ಪ್ರಯತ್ನಿಸುತ್ತಿದೆ. ಇದರಲ್ಲಿ ರಾಜ್ಯದ 31 ಜಿಲ್ಲೆಗಳ ಕಲಾವಿದರು ಭಾಗವಹಿಸಲಿದ್ದಾರೆ.