ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೇತಾಜಿ ಸುಭಾಷ್ ಚಂದ್ರ ಭೋಸ್ ಅವರ 125ನೇ ಜಯಂತಿ ವರ್ಷದ ಅಂಗವಾಗಿ 2021ರ ಜನವರಿ 23ರಂದು ನಡೆಯಲಿರುವ “ಪರಿಕ್ರಮ ದಿವಸ’ ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡಲು ಕೋಲ್ಕತ್ತಾಕ್ಕೆ ಆಗಮಿಸಲಿದ್ದಾರೆ. ಪ್ರಧಾನಮಂತ್ರಿಯವರು ಅಸ್ಸಾಂನ ಶಿವಸಾಗರ್ ನ ಜರೇಂಗಾ ಪತ್ಹಾರ್ ಗೂ ಭೇಟಿ ನೀಡಲಿದ್ದು, 1.06 ಲಕ್ಷ ಭೂಮಿ ಪಟ್ಟಾ/ಹಂಚಿಕೆ ಪತ್ರ ವಿತರಣೆ ಮಾಡಲಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಪ್ರಧಾನಮಂತ್ರಿ
ಪ್ರಧಾನಮಂತ್ರಿಯವರು ಕೋಲ್ಕತ್ತಾದ ವಿಕ್ಟೋರಿಯಾ ಸ್ಮಾರಕದಲ್ಲಿ ನಡೆಯಲಿರುವ ‘ಪರಾಕ್ರಮ ದಿವಸ’ದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರಕ್ಕೆ ನೇತಾಜಿಯವರು ನೀಡಿದ ಅದಮ್ಯ ಸ್ಫೂರ್ತಿ ಮತ್ತು ನಿಸ್ವಾರ್ಥ ಸೇವೆಯನ್ನು ಗೌರವಿಸುವ ಮತ್ತು ಸ್ಮರಿಸುವ ಸಲುವಾಗಿ, ದೇಶದ ಜನರು, ವಿಶೇಷವಾಗಿ ಯುವಜನರು ನೇತಾಜಿಯವರಂತೆ ಪ್ರತಿಕೂಲ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಲು ಪ್ರೇರೇಪಿಸುವ ಮತ್ತು ದೇಶಭಕ್ತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಜನವರಿ 23 ರಂದು 'ಪರಾಕ್ರಮ ದಿವಸ್' ಎಂದು ಅವರ ಜನ್ಮದಿನವನ್ನು ಆಚರಿಸಲು ಭಾರತ ಸರ್ಕಾರ ನಿರ್ಧರಿಸಿದೆ.
ಈ ಸಂದರ್ಭದಲ್ಲಿ ನೇತಾಜಿ ಅವರ ಕುರಿತಂತೆ ಶಾಶ್ವತವಾದ ವಸ್ತುಪ್ರದರ್ಶನ ಮತ್ತು ಪ್ರೊಜೆಕ್ಷನ್ ಮ್ಯಾಪಿಂಗ್ ಪ್ರದರ್ಶನವನ್ನು ಉದ್ಘಾಟಿಸಲಾಗುವುದು. ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಸ್ಮರಣಾರ್ಥ ನಾಣ್ಯ ಮತ್ತು ಅಂಚೆಚೀಟಿಯನ್ನೂ ಬಿಡುಗಡೆ ಮಾಡುವರು. ನೇತಾಜಿಯವರ ಜೀವನ ಆಧಾರಿತ “ಅಮ್ರ ನೂತನ್ ಜುಬೋನೇರಿ ದೂತ್’ ಎಂಬ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಮುನ್ನ ಪ್ರಧಾನಮಂತ್ರಿಯವರು “21ನೇ ಶತಮಾನದಲ್ಲಿ ನೇತಾಜಿ ಸುಭಾಷ್ ಅವರ ಪರಂಪರೆಯ ಪುನರ್ ದರ್ಶನ’ ಎಂಬ ಅಂತಾರಾಷ್ಟ್ರೀಯ ಸಮಾವೇಶ ಮತ್ತು ಕಲಾವಿದರ ಶಿಬಿರ ಆಯೋಜಿಸಲಾಗಿರುವ ಕೋಲ್ಕತ್ತಾದ ರಾಷ್ಟ್ರೀಯ ಗ್ರಂಥಾಲಯಕ್ಕೆ ಭೇಟಿ ನೀಡುವರು. ಪ್ರಧಾನಮಂತ್ರಿಯವರು ಸಮಾವೇಶದಲ್ಲಿ ಪಾಲ್ಗೊಂಡವರು ಮತ್ತು ಕಲಾವಿದರೊಂದಿಗೆ ಸಂವಾದ ನಡೆಸುವರು.
ಅಸ್ಸಾಂನಲ್ಲಿ ಪ್ರಧಾನಮಂತ್ರಿ
ಅಂದು ಬೆಳಗ್ಗೆ ಪ್ರಧಾನಮಂತ್ರಿಯವರು 1.06 ಲಕ್ಷ ಪಟ್ಟಾ/ಹಂಚಿಕೆಪತ್ರಗಳನ್ನು ಅಸ್ಸಾಂನ ಶಿವಸಾಗರ್ ನಲ್ಲಿ ವಿತರಣೆ ಮಾಡಲಿದ್ದಾರೆ. ರಾಜ್ಯದ ದೇಶೀಯ ಜನರ ಭೂಮಿಯ ಹಕ್ಕು ಸಂರಕ್ಷಿಸುವ ತುರ್ತು ಅಗತ್ಯವನ್ನು ಮನಗಂಡು, ಅಸ್ಸಾಂ ಸರ್ಕಾರ ಸಮಗ್ರ ನೂತನ ಭೂಮಿ ನೀತಿ ತಂದಿದ್ದು, ದೇಶಿಯ ಜನರ ಭೂಮಿಯ ಒಡೆತನದ ಹಕ್ಕು ರಕ್ಷಿಸುತ್ತಿದೆ. ಅಸ್ಸಾಂನ ದೇಶೀಯ ಜನರಲ್ಲಿ ಸುರಕ್ಷತೆಯ ಭಾವನೆ ಮೂಡಿಸಲು ಪಟ್ಟಾ/ ಹಂಚಿಕೆ ಪತ್ರಗಳನ್ನು ನೀಡುವುದಕ್ಕೆ ಉನ್ನತ ಆದ್ಯತೆಯನ್ನು ನೀಡಲಾಗಿದೆ. ಅಸ್ಸಾಂನಲ್ಲಿ 2016ರಲ್ಲಿ 5.75 ಲಕ್ಷ ಭೂರಹಿತ ಕುಟುಂಬಗಳಿದ್ದವು.ಪ್ರಸಕ್ತ ಸರ್ಕಾರ 2.28 ಲಕ್ಷ ಭೂಮಿಯ ಪಟ್ಟಾ/ ಹಂಚಿಕೆ ಪತ್ರಗಳನ್ನು 2016ರ ಮೇ ತಿಂಗಳಿಂದ ವಿತರಿಸಿದೆ. ಜನವರಿ 23ರ ಕಾರ್ಯಕ್ರಮ ಈ ಪ್ರಕ್ರಿಯೆಯ ಮುಂದುವರಿದ ಹೆಜ್ಜೆಯಾಗಿದೆ.