ಉತ್ತಮ ಮತ್ತು ನೀರು ಪೂರೈಕೆ ಖಾತ್ರಿಪಡಿಸುವ ಯೋಜನೆಯಾದ ಗಂಗಾಜಲ ಯೋಜನೆಗೆ ಪ್ರಧಾನಮಂತ್ರಿ ಅವರಿಂದ ಶುಭಾರಂಭ, ಆಗ್ರಾದಲ್ಲಿ ಪ್ರಧಾನ ಮಂತ್ರಿ ಅವರ ಸಾರ್ವಜನಿಕ ಸಭೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ, 2019 ರ ಜನವರಿ 9 ರಂದು ಉತ್ತರ ಪ್ರದೇಶದ ಆಗ್ರಾಕ್ಕೆ ಭೇಟಿ ನೀಡುವರು. ಅವರು ಗಂಗಾಜಲ ಯೋಜನೆ ಮತ್ತು ಇತರ ವಿವಿಧ ಅಭಿವೃದ್ಧಿ ಯೋಜನೆಗಳ ಶುಭಾರಂಭ ಮಾಡಲಿರುವರು. ಆಗ್ರಾ ಸ್ಮಾರ್ಟ್ ಸಿಟಿಗಾಗಿ ಸಮಗ್ರ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸುವರು ಹಾಗು ಎಸ್.ಎನ್ . ವೈದ್ಯಕೀಯ ಕಾಲೇಜು ಮೇಲ್ದರ್ಜೆಗೇರಿಸುವ ಮತ್ತಿತರ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು.
ಗಂಗಾಜಲ ಕಾರ್ಯಕ್ರಮ 2880 ಕೋ.ರೂ.ಗಳ ವೆಚ್ಚದ ಯೋಜನೆಯಾಗಿದೆ. ಅದು ಆಗ್ರಾಕ್ಕೆ ಉತ್ತಮ ಮತ್ತು ಅತ್ಯಂತ ಖಾತ್ರಿಯಾಗಿ ನೀರು ಪೂರೈಕೆ ಮಾಡುವ ಯೋಜನೆಯಾಗಿದೆ. ಇದು ನಗರ ವಾಸಿಗಳಿಗೆ ಮತ್ತು ಪ್ರವಾಸಿಗಳಿಗೆ ಪ್ರಯೋಜನಕಾರಿಯಾಗಲಿದೆ.
ಆಗ್ರಾದ ಎಸ್.ಎನ್. ವೈದ್ಯಕೀಯ ಕಾಲೇಜನ್ನು 20 ಕೋ.ರೂ. ಯೋಜನಾ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುವುದು. ಇದರಲ್ಲಿ ಮಹಿಳಾ ಆಸ್ಪತ್ರೆಯಲ್ಲಿ 100 ಹಾಸಿಗೆಗಳ ಹೆರಿಗೆ ವಿಭಾಗವನ್ನು ಆರಂಭಿಸುವುದೂ ಸೇರಿದೆ. ಇದರಿಂದ ಸಮಾಜದ ದುರ್ಬಲ ವರ್ಗದವರಿಗೆ ಉತ್ತಮ ಆರೋಗ್ಯ ಮತ್ತು ಹೆರಿಗೆ ಶುಶ್ರೂಷೆಯೂ ಲಭಿಸಲಿದೆ. ಆಗ್ರಾ ಸ್ಮಾರ್ಟ್ ಸಿಟಿಗಾಗಿ ಸಮಗ್ರ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವನ್ನು 285 ಕೋ.ರೂ. ಯೋಜನಾ ವೆಚ್ಚದಲ್ಲಿ ರೂಪಿಸಲಾಗುವುದು. ಇದು ಪ್ರವಾಸಿಗರ ಪ್ರಥಮಾಧ್ಯತೆಯ ತಾಣವಾಗಿರುವ ಆಗ್ರಾವನ್ನು ಅದಕ್ಕೆ ಸೂಕ್ತ ರೀತಿಯಲ್ಲಿ ಆಧುನಿಕ ವಿಶ್ವ ದರ್ಜೆಯ ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿಪಡಿಸಲು ನೆರವಾಗಲಿದೆ .
ಪ್ರಧಾನ ಮಂತ್ರಿ ಅವರು ಆಗ್ರಾದ ಕೋಥಿ ಮೀನಾ ಬಜಾರಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವರು.
ನಗರಕ್ಕೆ ಪ್ರಧಾನಮಂತ್ರಿ ಅವರ ಎರಡನೆ ಭೇಟಿ ಇದಾಗಿದೆ. 2016 ರ ನವೆಂಬರ್ ತಿಂಗಳ 20ರಂದು ನೀಡಿದ್ದ ಈ ಮೊದಲಿನ ಭೇಟಿಯಲ್ಲಿ ಅವರು ಪ್ರಧಾನಮಂತ್ರಿ ಆವಾಸ್ ಯೋಜನಾ (ಗ್ರಾಮೀಣ) ವನ್ನು ಆರಂಭಿಸಿದ್ದರು. ಈ ಯೋಜನೆ ಅಡಿಯಲ್ಲಿ 65 ಲಕ್ಷ ಮನೆಗಳನ್ನು ಇದುವರೆಗೆ ನಿರ್ಮಿಸಲಾಗಿದೆ, ಇದರಲ್ಲಿ ಉತ್ತರಪ್ರದೇಶದ 9.2 ಲಕ್ಷ ಮನೆಗಳೂ ಸೇರಿವೆ. ಅವರು ಈ ವಲಯಕ್ಕೆ ನಿರ್ದಿಷ್ಟವಾದ ರೈಲು ಮೂಲಸೌಕರ್ಯ ಮತ್ತು ಸೇವೆಗಳನ್ನು ಆರಂಭಿಸಿದ್ದರು.