ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2019ರ ಫೆಬ್ರವರಿ 11ರಂದು ಉತ್ತರ ಪ್ರದೇಶದ ಬೃಂದಾವನಕ್ಕೆ ಭೇಟಿ ನೀಡಲಿದ್ದಾರೆ.
ಅಕ್ಷಯ ಪಾತ್ರಾ ಪ್ರತಿಷ್ಠಾನದ 3ನೇ ಶತಕೋಟಿ ಊಟ ಪೂರೈಸುವ ಅಂಗವಾಗಿ ಬೃಂದಾವನದ ಚಂದ್ರೋದಯ ಮಂದಿರದಲ್ಲಿ ಅವರು ಫಲಕ ಅನಾವರಣ ಮಾಡಲಿದ್ದಾರೆ.
ನಂತರ ಪ್ರಧಾನಮಂತ್ರಿಯವರು ಶಾಲೆಗಳ ಶೋಷಿತ ಮಕ್ಕಳಿಗೆ 3ನೇ ಶತಕೋಟಿ ಊಟವನ್ನು ಉಣಬಡಿಸಲಿದ್ದಾರೆ. ಇದೆ ಸಂದರ್ಭದಲ್ಲಿ ಅವರು ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಶ್ರೀ ಮೋದಿ ಅವರು ಇಸ್ಕಾನ್ ನ ಆಚಾರ್ಯ ಶ್ರೀಲ ಪ್ರಭುಪಾದರ ವಿಗ್ರಹಕ್ಕೆ ಪುಷ್ಪ ನಮನ ಸಲ್ಲಿಸಲಿದ್ದಾರೆ.
ಪ್ರತಿಷ್ಠಾನದಿಂದ 3 ಶತಕೋಟಿ ಊಟವನ್ನು ಪೂರೈಸಿದ ಅಂಗವಾಗಿ ಈ ಕಾರ್ಯಕ್ರಮ ನಡೆಯುತ್ತಿದೆ.
ಹಿನ್ನೆಲೆ:
ಅಕ್ಷಯಪಾತ್ರಾ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಅನುಷ್ಠಾನ ಮಾಡುತ್ತಿರುವ ಪಾಲುದಾರನಾಗಿದೆ.
19 ವರ್ಷಗಳ ತನ್ನ ಈ ಪಯಣದಲ್ಲಿ, ಅಕ್ಷಯಪಾತ್ರಾ ಪ್ರತಿಷ್ಠಾನ, 12 ರಾಜ್ಯಗಳ 14 ಸಾವಿರದ 702 ಶಾಲೆಗಳಲ್ಲಿ 1.76 ದಶಲಕ್ಷ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈಸುತ್ತಿದೆ. 2016ರಲ್ಲಿ ಅಕ್ಷಯಪಾತ್ರಾ, ಒಟ್ಟಾರೆ 2 ಶತಕೋಟಿ ಊಟ ಪೂರೈಸಿದ ಕಾರ್ಯಕ್ರಮವನ್ನು ಭಾರತದ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಸಮ್ಮುಖದಲ್ಲಿ ನಡೆಸಿತ್ತು.
ಪ್ರತಿಷ್ಠಾನವು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ (ಎಂ.ಎಚ್.ಆರ್.ಡಿ.) ಮತ್ತು ರಾಜ್ಯ ಸರ್ಕಾರಗಳೊಂದಿಗೆ ಆಪ್ತವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಗುಣಮಟ್ಟದ, ಶುಚಿ ಮತ್ತು ಪೌಷ್ಟಿಕಯುಕ್ತವಾದ ಆಹಾರವನ್ನು ಲಕ್ಷಾಂತರ ಮಕ್ಕಳಿಗೆ ನಿತ್ಯ ಉಣಬಡಿಸುತ್ತಿದೆ.
ಮಧ್ಯಾಹ್ನದ ಬಿಸಿಯೂಟ ಯೋಜನೆ ವಿಶ್ವದಲ್ಲಿಯೇ ಅತಿ ಬೃಹತ್ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವು ಶಾಲೆಗಳಲ್ಲಿ ಮಕ್ಕಳ ದಾಖಲಾತಿ, ಹಾಜರಾತಿ ಮತ್ತು ಉಳಿಯುವಂತೆ ಮಾಡಲು ಮತ್ತು 6ರಿಂದ 14ವರ್ಷ ವಯೋಮಾನದ ಮಕ್ಕಳ ಆರೋಗ್ಯ ಸುಧಾರಣೆಯ ಉದ್ದೇಶ ಹೊಂದಿದೆ.
ಪ್ರಧಾನಮಂತ್ರಿಯವರು ಸೆಲ್ಫಿ4ಸೊಸೈಟಿ ಆಪ್ ಅನ್ನು ದೆಹಲಿಯಲ್ಲಿ ಉದ್ಘಾಟಿಸುವ ವೇಳೆ 2018ರ ಅಕ್ಟೋಬರ್ 24ರಂದು ಅಕ್ಷಯಪಾತ್ರಾ ಬಗ್ಗೆ ಪ್ರಸ್ತಾಪಿಸಿದ್ದರು. ಅಕ್ಷಯ ಪಾತ್ರಾ ಸಾಮಾಜಿಕ ಸ್ಟಾರ್ಟ್ ಅಪ್ ಆಗಿದ್ದು, ಒಂದು ಆಂದೋಲನವಾಗಿ ರೂಪುಗೊಂಡು ಶಾಲಾ ಮಕ್ಕಳಿಗೆ ಆಹಾರ ಪೂರೈಸುತ್ತಿದೆ” ಎಂದು ಹೇಳಿದ್ದರು..