ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2019 ರ ಜನವರಿ 13 ರಂದು ನವದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿ ಗುರು ಗೋವಿಂದ ಸಿಂಗ್ ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡಲಿದ್ದಾರೆ. ಗುರು ಗೋವಿಂದ ಸಿಂಗ್ ಅವರ ಜನ್ಮ ವರ್ಷ ಆಚರಣೆಯ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪ್ರಧಾನಮಂತ್ರಿ ಅವರು ಈ ಸಂದರ್ಭ ಆಯ್ದ ಗಣ್ಯರ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಸಿಖ್ ಸಮುದಾಯದ 10 ನೇ ಗುರುಗಳಾದ ಗುರು ಗೋವಿಂದ ಸಿಂಗ್ ಅವರು ತಮ್ಮ ಬೋಧನೆ ಮತ್ತು ಚಿಂತನೆಯ ಮೂಲಕ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2017ರ ಜನವರಿ 5 ರಂದು ಪಾಟ್ನಾದಲ್ಲಿ ನಡೆದ ಶ್ರೀ ಗುರು ಗೋವಿಂದ ಸಿಂಗ್ ಜೀ ಮಹಾರಾಜರ 350 ನೇ ಜನ್ಮ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆ ಸಂದರ್ಭದ ಸ್ಮರಣಾರ್ಥ ಅಂಚೆ ಚೀಟಿಯನ್ನೂ ಅವರು ಬಿಡುಗಡೆ ಮಾಡಿದ್ದರು. ಅವರು ತಮ್ಮ ಭಾಷಣದಲ್ಲಿ ಗುರು ಗೋವಿಂದ ಸಿಂಗ್ ಅವರು ದೇಶವನ್ನು ಒಗ್ಗೂಡಿಸಲು ಖಾಲ್ಸ ಪಂಥದ ಮತ್ತು ಪಂಚಪ್ಯಾರಾಗಳ ಮೂಲಕ ಹೇಗೆ ವಿಶಿಷ್ಠ ಪ್ರಯತ್ನಗಳನ್ನು ಮಾಡಿದರು ಎಂಬುದನ್ನು ಒತ್ತಿ ಪ್ರಧಾನಮಂತ್ರಿ ಹೇಳಿದ್ದರು. ಗುರು ಗೋವಿಂದ್ ಸಿಂಗ್ ಜಿ ಅವರು ತಮ್ಮ ಬೋಧನೆಗಳಲ್ಲಿ ಜ್ಞಾನದ ತಿರುಳನ್ನು ಹಂಚಿದರು ಎಂದು ಪ್ರಧಾನಮಂತ್ರಿ ಅವರು ಹೇಳಿದ್ದರು.
ದುರ್ಬಲ ವರ್ಗದವರ ಬಗ್ಗೆ ಗುರು ಗೋವಿಂದ ಸಿಂಗ್ ಅವರ ಹೋರಾಟವನ್ನು ಪ್ರಧಾನಮಂತ್ರಿ ಅವರು 2018ರ ಡಿಸೆಂಬರ್ 30 ರ ತಮ್ಮ ಆಕಾಶವಾಣಿ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಪ್ರಸ್ತಾವಿಸಿದ್ದರು. ಮಾನವನ ಯಾತನೆಗಳನ್ನು, ದುಃಖವನ್ನು ನಿವಾರಣೆ ಮಾಡುವುದು ಅತ್ಯಂತ ದೊಡ್ಡ ಸೇವೆ ಎಂಬುದಾಗಿ ಗುರು ಗೋವಿಂದ ಸಿಂಗ್ ಜೀ ಅವರು ನಂಬಿದ್ದರೆಂಬುದನ್ನು ಕೂಡಾ ಪ್ರಧಾನಮಂತ್ರಿ ಅವರು ಸ್ಮರಿಸಿಕೊಂಡಿದ್ದರು. ಅವರ ನಾಯಕತ್ವ, ತ್ಯಾಗ ಮತ್ತು ಅರ್ಪಣಾ ಭಾವವನ್ನು ಪ್ರಧಾನಮಂತ್ರಿ ಅವರು ಮುಕ್ತ ಕಂಠದಿಂದ ಪ್ರಶಂಶಿಸಿದ್ದರು.
ಲೂಧಿಯಾನಾ ರಾಷ್ಟ್ರೀಯ ಎಂ.ಎಸ್.ಎಂ.ಇ. ಪ್ರಶಸ್ತಿ ಪ್ರದಾನ ಸಮಾರಂಭ 2016 ರ ಅಕ್ಟೋಬರ್ 18 ರಂದು ನಡೆದಿದ್ದಾಗ ಅದರಲ್ಲಿ ಪ್ರಧಾನಮಂತ್ರಿ ಅವರು ಗುರು ಗೋವಿಂದ ಸಿಂಗ್ ಅವರು “ಮನುಷ್ಯರಲ್ಲಿ ಯಾರೊಬ್ಬರೂ ಮೇಲಲ್ಲ, ಯಾರೊಬ್ಬರೂ ಕೀಳಲ್ಲ, ಎಲ್ಲರೂ ಒಂದೇ , ಯಾರೊಬ್ಬರೂ ಅಸ್ಪೃಶ್ಯರಲ್ಲ”, ಎಂದು ಹೇಳಿದ್ದ ಸಂದೇಶವನ್ನು ಇನ್ನೊಮ್ಮೆ ನೆನಪಿಸಿಕೊಂಡಿದ್ದರಲ್ಲದೆ, ಇದು ಈಗಲೂ ಪ್ರಸ್ತುತ ಎಂದೂ ಅಭಿಪ್ರಾಯಪಟ್ಟಿದ್ದರು. 2016ರ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ತಮ್ಮ ಭಾಷಣದಲ್ಲಿ ಪ್ರಧಾನಮಂತ್ರಿ ಅವರು ಮಗದೊಮ್ಮೆ ದೇಶಕ್ಕಾಗಿ ತ್ಯಾಗ, ಸಿಖ್ ಗುರುಗಳ ಸಂಪ್ರದಾಯವಾಗಿತ್ತು ಎಂಬುದನ್ನು ಮುಖ್ಯವಾಗಿ ಉಲ್ಲೇಖಿಸಿದ್ದರು.