ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವ “ಯು.ಎನ್.ಇ.ಪಿ. ಚ್ಯಾಂಪಿಯನ್ಸ್ ಆಫ್ ದ ಅರ್ಥ್” ಪ್ರಶಸ್ತಿಯನ್ನು ನವದೆಹಲಿಯ ಪ್ರವಾಸಿ ಭಾರತೀಯ ಕೇಂದ್ರದಲ್ಲಿ ಅಕ್ಟೋಬರ್ 03ರಂದು ಸ್ವೀಕರಿಸಲಿದ್ದಾರೆ. ಈ ಪ್ರಶಸ್ತಿಯ ವಿವರಗಳನ್ನು ಹಾಗೂ ಅದನ್ನು ವಿಶ್ವ ಸಂಸ್ಥೆಯ ಮಹಾಕಾರ್ಯದರ್ಶಿ ಶ್ರೀ ಅಂಟನಿಯೊ ಗುಟೆರ್ರಸ್ ಅವರು ಪ್ರದಾನಿಸಲಿರುವರು ಎಂದು ಸೆಪ್ಟೆಂಬರ್ 26 ರಂದು ನ್ಯೂಯೋರ್ಕ್ ನಗರದಲ್ಲಿ ಜರುಗಿದ ವಿಶ್ವಸಂಸ್ಥೆಯ 73ನೇ ಮಹಾಅಧಿವೇಶನದ ಸಂದರ್ಭದಲ್ಲಿ ಪ್ರಕಟಿಸಲಾಗಿತ್ತು. ಪ್ರಧಾನಮಂತ್ರಿ ಅವರು ಸಭಿಕರನ್ನುದ್ಧೇಶಿಸಿ ಭಾಷಣ ಮಾಡಲಿದ್ದಾರೆ.
ಅಂತರರಾಷ್ಟ್ರೀಯ ಸೋಲಾರ್ ಕೂಟ ( ಮೈತ್ರಿ ) ಪ್ರಾರಂಭಿಸಲು ಮಾಡಿದ ಪ್ರಯತ್ನ ಮತ್ತು 2022ರ ಒಳಗಾಗಿ “ಒಂದು ಬಾರಿ ಬಳಕೆ ಮಾಡುವ ಪ್ಲಾಸ್ಟಿಕ್” ಗಳ ನಿರೋಧಮಾಡುವ ಅಛಲ ನಿರ್ಧಾರಗಳೇ ಮೊದಲಾದ ಪರಿಸರ ಕ್ಷೇತ್ರದ ಶ್ರೇಷ್ಠತಮ ಕಾರ್ಯಗಳಿಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಈ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.
ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಪ್ರಯತ್ನಗಳನ್ನು ಮಾಡಿದ ಸರಕಾರ, ಸಾರ್ವಜನಿಕ ಸಂಸ್ಥೆ ಮತ್ತು ಖಾಸಗಿ ಕ್ಷೇತ್ರದ ಅತ್ಯುತ್ತಮ ಕಾರ್ಯಸಾಧಕ ವ್ಯಕ್ತಿಗಳಿಗೆ ವಾರ್ಷಿಕವಾಗಿ “ಯು.ಎನ್.ಇ.ಪಿ. ಚ್ಯಾಂಪಿಯನ್ಸ್ ಆಫ್ ದ ಅರ್ಥ್” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.