ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 15ರಂದು ಸ್ವಚ್ಛತೆಯೇ ಸೇವೆ ಆಂದೋಲನಕ್ಕೆ ಚಾಲನೆ ನೀಡಲಿದ್ದಾರೆ.
ಒಂದು ಪಾಕ್ಷಿಕ ಕಾಲ ನಡೆಯುವ ವಿಸ್ತೃತ ಕಾರ್ಯಕ್ರಮದ ಭಾಗವಾಗಿ ಪ್ರಧಾನಮಂತ್ರಿಯವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೇಶದ 18 ಸ್ಥಳಗಳಿಂದ ವಿವಿಧ ಜನವರ್ಗದೊಂದಿಗೆ ಸಂವಾದ ನಡೆಸಲಿದ್ದಾರೆ. ಪ್ರಧಾನಮಂತ್ರಿಯವರು ಸಂವಾದ ನಡೆಸುವವರಲ್ಲಿ ಶಾಲಾ ಮಕ್ಕಳು, ಯೋಧರು, ಆಧ್ಯಾತ್ಮಿಕ ನಾಯಕರು, ಹಾಲು ಮತ್ತು ಕೃಷಿ ಸಹಕಾರ ಸಂಸ್ಥೆಗಳ ಸದಸ್ಯರು, ಮಾಧ್ಯಮ ಮಿತ್ರರು, ಸ್ಥಳೀಯ ಸರ್ಕಾರಗಳ ಪ್ರತಿನಿಧಿಗಳು, ರೈಲ್ವೆ ಸಿಬ್ಬಂದಿ, ಸ್ವ ಸಹಾಯ ಗುಂಪುಗಳು ಮತ್ತು ಸ್ವಚ್ಛಾಗ್ರಹಿಗಳೂ ಸೇರಿದ್ದಾರೆ.
ಸ್ವಚ್ಛತೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಸೃಷ್ಟಿಸುವುದು ಸ್ವಚ್ಛತೆಯೇ ಸೇವೆ ಆಂದೋಲನದ ಗುರಿಯಾಗಿದ್ದು, ಈ ಕಾರ್ಯಕ್ರಮವನ್ನು 2018ರ ಅಕ್ಟೋಬರ್ 2ಕ್ಕೆ ನಾಲ್ಕು ವರ್ಷ ಪೂರೈಸಲಿರುವ ಸ್ವಚ್ಛ ಭಾರತ ಆಂದೋಲನದ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಲಾಗಿದೆ. ಮಹಾತ್ಮಾ ಗಾಂಧಿ ಅವರ 150 ವರ್ಷಾಚರಣೆಯ ಆರಂಭದ ಸಂಕೇತವೂ ಇದಾಗಿದೆ.
ಈ ಮುನ್ನ “ಈ ಆಂದೋಲನವು ಬಾಪೂ ಅವರಿಗೆ ಗೌರವ ನಮನ ಸಲ್ಲಿಸುವ ಶ್ರೇಷ್ಠ ಮಾರ್ಗವಾಗಿದೆ” ಎಂದು ಪ್ರಧಾನಿ ಬಣ್ಣಿಸಿದ್ದಾರೆ. ಜನತೆಗೆ ನೀಡಿರುವ ವಿಡಿಯೋ ಸಂದೇಶದಲ್ಲಿ ಅವರು, ಈ ಆಂದೋಲನದ ಭಾಗವಾಗಿ ಸ್ವಚ್ಛ ಭಾರತ ನಿರ್ಮಿಸುವ ಪ್ರಯತ್ನಗಳನ್ನು ಬಲಪಡಿಸುವಂತೆ”ಕೋರಿದ್ದಾರೆ.