ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಬೃಹತ್ ನೋಯಿಡಾದ ಇಂಡಿಯಾ ಎಕ್ಸ್ ಪೋ ಕೇಂದ್ರದಲ್ಲಿ, 2019ರ ಫೆಬ್ರವರಿ 11ರಂದು ಪೆಟ್ರೋಟೆಕ್ -2019ನ್ನು ಉದ್ಘಾಟಿಸಲಿದ್ದಾರೆ.
ಅವರು ಉದ್ಘಾಟನಾ ಸಮಾರಂಭ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಪೆಟ್ರೋಟೆಕ್ 2019 ಭಾರತದ ಮಹತ್ವಾಕಾಂಕ್ಷೆಯ ಹೈಡ್ರೋಕಾರ್ಬನ್ ಸಮಾವೇಶ ಎಂದು ಪರಿಗಣಿತವಾಗಿದೆ. ಪೆಟ್ರೋಟೆಕ್ 2019, ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಆಶ್ರಯದಲ್ಲಿ ನಡೆಯುತ್ತಿರುವ 13ನೇ ಅಂತಾರಾಷ್ಟ್ರೀಯ ತೈಲ ಮತ್ತು ಅನಿಲ ಸಮಾವೇಶ ಹಾಗೂ ವಸ್ತುಪ್ರದರ್ಶನವಾಗಿದೆ.
ಮೂರು ದಿನಗಳ ಬೃಹತ್ ಕಾರ್ಯಕ್ರಮವು 2019ರ ಫೆಬ್ರವರಿ 10ರಿಂದ 12ರವರೆಗೆ ನಡೆಯಲಿದ್ದು, ಭಾರತದಲ್ಲಿನ ತೈಲ ಮತ್ತು ಅನಿಲ ವಲಯದ ಇತ್ತೀಚಿನ ಮಾರುಕಟ್ಟೆ ಮತ್ತು ಹೂಡಿಕೆದಾರ ಸ್ನೇಹಿ ಅಭಿವೃದ್ಧಿಯನ್ನು ಪ್ರದರ್ಶಿಸುತ್ತದೆ. ಪಾಲುದಾರ ರಾಷ್ಟ್ರಗಳ ಸುಮಾರು 95 ಇಂಧನ ಸಚಿವರು ಮತ್ತು 70 ರಾಷ್ಟ್ರಗಳ 7 ಸಾವಿರ ಪ್ರತಿನಿಧಿಗಳು ಪೆಟ್ರೋಟೆಕ್ 2019ರಲ್ಲಿ ಭಾಗಿಯಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಸಮಾವೇಶದ ಜೊತೆಗೆ ಗ್ರೇಟರ್ ನೋಯಿಡಾದ ಇಂಡಿಯಾ ಎಕ್ಸ್ ಪೋ ಮಾರ್ಟ್ ನಲ್ಲಿ 20 ಸಾವಿರ ಚದರ ಮೀಟರ್ ವಿಸ್ತೀರ್ಣದಲ್ಲಿ ವಸ್ತುಪ್ರದರ್ಶನವನ್ನೂ ಆಯೋಜಿಸಲಾಗಿದೆ. ಪೆಟ್ರೋಟೆಕ್ 2019 ವಸ್ತುಪ್ರದರ್ಶನದಲ್ಲಿ ಮೇಕ್ ಇನ್ ಇಂಡಿಯಾ ಮತ್ತು ನವೀಕರಿಸಬಹುದಾದ ಇಂಧನ ಕುರಿತ ವಿಶೇಷ ಪ್ರದೇಶದ ಜೊತೆಗೆ 13 ರಾಷ್ಟ್ರಗಳ ಪೆವಿಲಿಯನ್ ಮತ್ತು 40 ದೇಶಗಳ 750 ಪ್ರದರ್ಶಕರು ಭಾಗಿಯಾಗಲಿದ್ದಾರೆ.
ಪ್ರಧಾನಮಂತ್ರಿಯವರು ಈ ಹಿಂದೆ, ಪೆಟ್ರೋಟೆಕ್ 2016 ರ 12ನೇ ಅವೃತ್ತಿಯನ್ನು 2016ರ ಡಿಸೆಂಬರ್ 5ರಂದು ಉದ್ಘಾಟಿಸಿದ್ದರು.
"ಭಾರತದ ಇಂಧನ ಭವಿಷ್ಯಕ್ಕಾಗಿ ನನ್ನ ದೃಷ್ಟಿ ನಾಲ್ಕು ಸ್ತಂಭಗಳನ್ನು ಹೊಂದಿದೆ: ಅದು
ಇಂಧನ ಪ್ರವೇಶ, ಇಂಧನ ದಕ್ಷತೆ, ಇಂಧನ ಸುಸ್ಥಿರತೆ ಮತ್ತು ಇಂಧನ ಭದ್ರತೆ ಎಂದು ಅವರು ಹೇಳಿದರು.
ದೇಶಕ್ಕೆ ಬರುವಂತೆ, ಮೇಕ್ ಇನ್ ಇಂಡಿಯಾದಲ್ಲಿ ಭಾಗಿಯಾಗುವಂತೆ ಜಾಗತಿಕ ಹೈಡ್ರೋ ಕಾರ್ಬನ್ ಕಂಪನಿಗಳಿಗೆ ಕರೆ ನೀಡಿದ ಅವರು, ತಮ್ಮ ಉದ್ದೇಶ ಕೆಂಪು ಪಟ್ಟಿಯನ್ನು ತೆಗೆದು ಕೆಂಪು ಹಾಸು ಹಾಸುವುದಾಗಿದೆ ಎಂದು ತಿಳಿಸಿದರು.