ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿ ಮೆಟ್ರೋ ಸೇವೆಯ ಹೊಸ ನೇರಳೆ ಬಣ್ಣದ ಮಾರ್ಗಕ್ಕೆ ಡಿಸೆಂಬರ್ 25ರಂದು ಚಾಲನೆ ನೀಡಲಿದ್ದಾರೆ. ಈ ಮಾರ್ಗವು ನೋಯಿಡಾದ ಸಸ್ಯೋದ್ಯಾನವನ್ನು ದೆಹಲಿಯ ಕಾಳಿಕಾಜಿ ಮಂದಿರದೊಂದಿಗೆ ಸಂಪರ್ಕಿಸಲಿದೆ. ಇದು ನೋಯಿಡಾ ಮತ್ತು ದಕ್ಷಿಣ ದೆಹಲಿ ನಡುವಿನ ಪ್ರಯಾಣದ ಅವಧಿಯನ್ನು ಗಣನೀಯವಾಗಿ ತಗ್ಗಿಸಲಿದೆ. ಈ ಸಂದರ್ಭದಲ್ಲಿ ಪ್ರಧಾನಿಯವರು ನೋಯಿಡಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಈ ಹೊಸ ಮಾರ್ಗವು ದೇಶದ ನಗರ ಪ್ರದೇಶಗಳ ಸಾರಿಗೆಯನ್ನು ಆಧುನೀಕರಿಸುವ ಕೇಂದ್ರ ಸರ್ಕಾರದ ನಿಲುವಿನ ಮತ್ತೊಂದು ಸಂಪರ್ಕವನ್ನು ಪ್ರತಿನಿಧಿಸುತ್ತದೆ. ಇದು ತಂತ್ರಜ್ಞಾನ ಕೇಂದ್ರಿತ ಮತ್ತು ಪರಿಸರ ಸ್ನೇಹಿಯಾದ ಸಮೂಹ ತ್ವರಿತ ನಗರ ಸಾರಿಗೆ ವ್ಯವಸ್ಥೆಯತ್ತ ಸಾಗಿರಿವುದನ್ನೂ ಪ್ರತಿನಿಧಿಸುತ್ತದೆ.
2017ರಲ್ಲಿ ಪ್ರಧಾನಮಂತ್ರಿಯವರು ಉದ್ಘಾಟಿಸುತ್ತಿರುವ 3ನೇ ಮೆಟ್ರೋ ಮಾರ್ಗ ಇದಾಗಿದೆ. ಇದಕ್ಕೂ ಮುನ್ನ ಪ್ರಧಾನಿಯವರು ಕೊಚ್ಚಿ ಮೆಟ್ರೋವನ್ನು ಕಳೆದ ಜೂನ್ ನಲ್ಲಿ ಮತ್ತು ನವೆಂಬರ್ ನಲ್ಲಿ ಹೈದ್ರಾಬಾದ್ ಮೆಟ್ರೋ ರೈಲನ್ನು ದೇಶಕ್ಕೆ ಸಮರ್ಪಿಸಿದ್ದರು. ಈ ಎರಡೂ ಸಂದರ್ಭದಲ್ಲಿ ಸಾರ್ವಜನಿಕ ಸಭೆಯ ಸ್ಥಳಕ್ಕೆ ಆಗಮಿಸುವ ಮುನ್ನ ಪ್ರಧಾನಮಂತ್ರಿಯವರು ಹೊಸ ರೈಲು ಮಾರ್ಗದಲ್ಲಿ ಸಂಚರಿಸಿದ್ದರು.
ಪ್ರಧಾನಮಂತ್ರಿಯವರು ರಾಷ್ಟ್ರೀಯ ರಾಜಧಾನಿ ವಲಯದಲ್ಲಿ ಹಲವು ಬಾರಿ ತಮ್ಮ ಕಾರ್ಯಕ್ರಮದ ಅಂಗವಾಗಿ ಮೆಟ್ರೋದಲ್ಲಿ ಸಂಚರಿಸಿದ್ದಾರೆ. 2016ರ ಜನವರಿಯಲ್ಲಿ ಪ್ರಧಾನಮಂತ್ರಿಯವರು ಮತ್ತು ಅಂದಿನ ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಲಾಂಡೆ ಅವರೊಂದಿಗೆ ಜಂಟಿಯಾಗಿ ಅಂತಾರಾಷ್ಟ್ರೀಯ ಸೌರ ಸಹಯೋಗದ ಕೇಂದ್ರ ಕಚೇರಿಗೆ ಶಿಲಾನ್ಯಾಸ ಮಾಡಲು ದೆಹಲಿಯಿಂದ ಗುರ್ ಗಾವ್ ಗೆ ಸಂಚರಿಸಿದ್ದರು. ತೀರಾ ಇತ್ತೀಚೆಗೆ 2017ರ ಏಪ್ರಿಲ್ ನಲ್ಲಿ ಪ್ರಧಾನಮಂತ್ರಿಯವರು ಮತ್ತು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಮೆಕಲಮ್ ಟರ್ನ್ ಬುಲ್ ಅವರು ಅಕ್ಷರಧಾಮಾ ದೇವಾಲಯದವರೆಗೆ ಮೆಟ್ರೋದಲ್ಲಿ ಸಂಚರಿಸಿದ್ದರು.
ತ್ವರಿತ ಸಮೂಹ ಸಾರಿಗೆ ವ್ಯವಸ್ಥೆ ಮೂಲಕ ಸಂಪರ್ಕ ಹೆಚ್ಚಿಸುವ ಉದ್ದೇಶವನ್ನು ದೃಷ್ಟಿಯಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರವು ಕಲೆದ ಮೂರೂವರೆ ವರ್ಷಗಳಲ್ಲಿ ಒಂಬತ್ತು ಮೆಟ್ರೋ ರೈಲು ಆರಂಭಿಸಿದೆ. ಇದು ಸುಮಾರು 165 ಕಿಲೋ ಮೀಟರ್ ಮಾರ್ಗವನ್ನು ಒಳಗೊಂಡಿದೆ. 140 ಕಿಲೋ ಮೀಟರ್ ಮಾರ್ಗದ ಐದು ಹೊಸ ಮೆಟ್ರೋ ರೈಲು ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. 250 ಕಿಲೋ ಮೀಟರ್ ಉದ್ದದ ಮೆಟ್ರೋ ರೈಲು ಮಾರ್ಗ ಮುಂದಿನ ಎರಡು ವರ್ಷಗಳಲ್ಲಿ ಅನುಷ್ಠಾನಗೊಳ್ಳಲಿದೆ.