ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2020ರ ಜನವರಿ 2ರ ಗುರುವಾರ ಕರ್ನಾಟಕದ ತುಮಕೂರಿನಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ರಾಜ್ಯಗಳಿಗೆ ಶ್ಲಾಘನೆಯ ಪ್ರಶಸ್ತಿ ಮತ್ತು ಕೃಷಿ ಕರ್ಮಣ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಅವರು ಕೃಷಿ ಸಚಿವರ ಕೃಷಿ ಕರ್ಮಣ್ ಪ್ರಶಸ್ತಿಗಳನ್ನು ಪ್ರಗತಿಪರ ರೈತರಿಗೆ ಪ್ರದಾನ ಮಾಡಲಿದ್ದಾರೆ.
ಈ ಸಮಾರಂಭವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ – ಪಿಎಂ ಕಿಸಾನ್ ಅಡಿಯಲ್ಲಿ ಡಿಸೆಂಬರ್ 2019ರಿಂದ ಮಾರ್ಚ್ 2020ರ ಅವಧಿಯ 3ನೇ ಕಂತಾದ ರೂ.2000ಗಳ ಬಿಡುಗಡೆಗೂ ಸಾಕ್ಷಿಯಾಗಲಿದೆ. ಇದರಿಂದ ಸುಮಾರು 6 ಕೋಟಿ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ. ಪ್ರಧಾನಮಂತ್ರಿಯವರು ಪ್ರಧಾನಮಂತ್ರಿ ಕಿಸಾನ್ ಅಡಿಯಲ್ಲಿ 8 ರಾಜ್ಯಗಳು/ಕೇಂದ್ರಡಾಳಿತ ಪ್ರದೇಶಗಳ ಫಲಾನುಭವಿಗಳಿಗೆ ಪ್ರಮಾಣಪತ್ರಗಳನ್ನೂ ಹಸ್ತಾಂತರಿಸಲಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಪ್ರಧಾನಂತ್ರಿಯವರು ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಹಡಗುಗಳ ಕೀಗಳು ಮತ್ತು ಮೀನುಗಾರಿಕೆ ಹಡಗುಗಳ ಟ್ರಾನ್ಸ್ ಪಾಂಡರ್ ಗಳನ್ನು ತಮಿಳುನಾಡಿನ ಆಯ್ದ ಮೀನುಗಾರರಿಗೆ ಹಸ್ತಾಂತರಿಸಲಿದ್ದಾರೆ.
ಕಿಸಾನ್ ಕ್ರಿಡಿಟ್ ಕಾರ್ಡ್ (ಕೆಸಿಸಿ)ಗಳನ್ನು ಸಹ ಅವರು ಕರ್ನಾಟಕದ ಆಯ್ದ ರೈತರಿಗೆ ವಿತರಣೆ ಮಾಡಲಿದ್ದಾರೆ.
ಪ್ರಧಾನಮಂತ್ರಿಯವರು ಕಾರ್ಯಕ್ರಮ ಸ್ಥಳದಲ್ಲಿ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿ, ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.