ಗುಜರಾತಿನ ಕೆವಾಡಿಯಾದಲ್ಲಿ ವಿಶ್ವದ ಅತಿ ಎತ್ತರದ ‘ಏಕತಾ ಪ್ರತಿಮೆ’ಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 31, 2018ರಂದು ದೇಶಾರ್ಪಣೆ ಮಾಡಲಿದ್ದಾರೆ.
ಸರ್ದಾರ್ ವಲ್ಲಭಬಾಯಿ ಪಟೇಲರ ವಾರ್ಷಿಕ ಜಯಂತಿಯಂದು ಗುಜರಾತಿನ ನರ್ಮದಾ ಜಿಲ್ಲೆಯಲ್ಲಿರುವ ಕೆವಾಡಿಯಾದಲ್ಲಿ ಅವರ 182 ಮೀಟರ್ ಎತ್ತರದ ಪ್ರತಿಮೆಯನ್ನು ದೇಶಾರ್ಪಣೆ ಮಾಡಲಾಗುವುದು.
‘ಏಕತಾ ಪ್ರತಿಮೆ”ಯ ದೇಶಾರ್ಪಣೆಯ ಸಂಕೇತವಾಗಿ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಮತ್ತು ಇತರ ಗಣ್ಯರು ಮಣ್ಣು ಮತ್ತು ನರ್ಮದಾ ನದಿ ನೀರನ್ನು ಕಲಶಕ್ಕೆ ಸುರಿಯಲಿದ್ದಾರೆ . ಪ್ರತಿಮೆಗೆ ಪ್ರಧಾನ ಮಂತ್ರಿ ಅವರು ಅಭಿಷೇಕ ಮಾಡಲಿದ್ದಾರೆ.
ಪ್ರಧಾನಮಂತ್ರಿ ಅವರು ಸಭಿಕರನ್ನುದ್ಧೇಶಿಸಿ ಭಾಷಣ ಮಾಡಲಿದ್ದಾರೆ.
ಪ್ರಧಾನಮಂತ್ರಿ ಅವರು ಏಕತೆಯ ಗೋಡೆಗೆ (ವಾಲ್ ಆಫ್ ಯುನಿಟಿ) ಭೇಟಿ ನೀಡಿ, ಅದನ್ನು ಉದ್ಘಾಟಿಸಲಿದ್ದಾರೆ. ಪ್ರಧಾನಮಂತ್ರಿ ಅವರು ‘ಏಕತಾ ಪ್ರತಿಮೆ”ಯ ಪಾದಕ್ಕೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಪ್ರಧಾನಮಂತ್ರಿ ಅವರು ವಸ್ತುಸಂಗ್ರಹಾಲಯ, ವಸ್ತು ಪ್ರದರ್ಶನ ಮತ್ತು ವೀಕ್ಷಕರ ಗ್ಯಾಲರಿಗೆ ಭೇಟಿ ನೀಡಲಿದ್ದಾರೆ. 153 ಮೀಟರ್ ಎತ್ತರದ ಈ ಗ್ಯಾಲರಿಯಲ್ಲಿ, ಏಕಕಾಲಕ್ಕೆ 200 ಮಂದಿ ವೀಕ್ಷಕರಿಗೆ ಸ್ಥಳಾವಕಾಶವಿದೆ. ಈ ಗ್ಯಾಲರಿಯಿಂದ ಸರ್ದಾರ್ ಸರೋವರ ಅಣೆಕಟ್ಟು, ಸತ್ಪುರ ಶ್ರೇಣಿ ಮತ್ತು ವಿಂಧ್ಯಾ ಪರ್ವತ ಶ್ರೇಣಿಗಳ ವಿಹಂಗಮ ನೋಟವನ್ನು ಕಾಣಬಹುದು.
ಈ ದೇಶಾರ್ಪಣೆಯ ಸಮಾರಂಭದಲ್ಲಿ ಸಾಂಸ್ಕೃತಿಕ ತಂಡಗಳಿಂದ ಪ್ರದರ್ಶನಗಳು ಮತ್ತು ಐ.ಎ.ಎಫ್. ವಿಮಾನಗಳ ಹಾರಾಟ ನಡೆಯಲಿದೆ.