ನವದೆಹಲಿಯ ಭಾರತ ಮಂಟಪಂನಲ್ಲಿ 2024 ರ ಸೆಪ್ಟೆಂಬರ್ 12 ರಂದು ಸಂಜೆ 4 ಗಂಟೆಗೆ ನಾಗರಿಕ ವಿಮಾನಯಾನ ಕುರಿತ ಎರಡನೇ ಏಷ್ಯಾ ಪೆಸಿಫಿಕ್ ಸಚಿವ ಮಟ್ಟದ ಸಮ್ಮೇಳನದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿದ್ದಾರೆ. ಅವರು ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಾದೇಶಿಕ ವಿಮಾನಯಾನವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿರುವ ದೂರದೃಷ್ಟಿಯ ಮಾರ್ಗನಕ್ಷೆಯಾದ “ದೆಹಲಿ ಘೋಷಣೆ”ಯನ್ನು ಎಲ್ಲಾ ಸದಸ್ಯ ರಾಷ್ಟ್ರಗಳು ಅಳವಡಿಸಿಕೊಳ್ಳುವ ಬಗ್ಗೆ ಕೂಡ ಪ್ರಧಾನಮಂತ್ರಿ ಪ್ರಕಟಿಸಲಿದ್ದಾರೆ.
ಈ ಸಮ್ಮೇಳನ ಮತ್ತು ದೆಹಲಿ ಘೋಷಣೆಯ ಅಳವಡಿಕೆಯು ಏಷ್ಯಾ ಪೆಸಿಫಿಕ್ ನಾಗರಿಕ ವಿಮಾನಯಾನ ವಲಯದಲ್ಲಿ ಸುರಕ್ಷತೆ, ಭದ್ರತೆ ಮತ್ತು ಸುಸ್ಥಿರತೆಯ ಉನ್ನತೀಕರಣದತ್ತ ಮಹತ್ವದ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ ಹಾಗೂ ಈ ಪ್ರದೇಶದಲ್ಲಿನ ದೇಶಗಳ ನಡುವಿನ ಸಹಕಾರ ಭಾವದ ಬಗ್ಗೆ ತಿಳಿಸುತ್ತದೆ.
ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ಐಸಿಒಎ) ಸಹಯೋಗದಲ್ಲಿ ನಾಗರಿಕ ವಿಮಾನಯಾನ ಸಚಿವಾಲಯ ಆಯೋಜಿಸಿರುವ ಏಷ್ಯಾ-ಪೆಸಿಫಿಕ್ ಸಮ್ಮೇಳನವು ಏಷ್ಯಾ-ಪೆಸಿಫಿಕ್ ವಲಯದ ಸಾರಿಗೆ ಮತ್ತು ವಿಮಾನಯಾನ ಸಚಿವರು, ನಿಯಂತ್ರಕ ಸಂಸ್ಥೆಗಳು ಮತ್ತು ಉದ್ಯಮ ತಜ್ಞರನ್ನು ಒಟ್ಟುಗೂಡಿಸಲಿದೆ. ಸಾರ್ವಜನಿಕ ಮತ್ತು ಖಾಸಗಿ ವಲಯದ ನಡುವೆ ಹೆಚ್ಚಿನ ಸಹಕಾರ ಪೋಷಿಸುವ ಜೊತೆಗೆ ಮೂಲಸೌಕರ್ಯ ಅಭಿವೃದ್ಧಿ, ಸುಸ್ಥಿರತೆ ಮತ್ತು ಕಾರ್ಯಪಡೆ ಅಭಿವೃದ್ಧಿಯಂತಹ ಪ್ರಮುಖ ಸವಾಲುಗಳನ್ನು ನಿರ್ವಹಿಸುವ ಕುರಿತಂತೆ ಸಮ್ಮೇಳನದಲ್ಲಿ ಪ್ರಮುಖವಾಗಿ ಚರ್ಚೆ ನಡೆಯಲಿದೆ.