ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ (2017ರ ಅಕ್ಟೋಬರ್ 11ರಂದು) ನವದೆಹಲಿಯ ಪೂಸಾದ ಐಎಆರ್.ಐ.ನಲ್ಲಿ ನಾನಾಜಿ ದೇಶಮುಖ್ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಪ್ರಧಾನಮಂತ್ರಿಯವರು ‘ತಂತ್ರಜ್ಞಾನ ಮತ್ತು ಗ್ರಾಮೀಣ ಜೀವನ’ ವಿಷಯ ಕುರಿತ ವಸ್ತುಪ್ರದರ್ಶನಕ್ಕೂ ಭೇಟಿ ನೀಡಲಿದ್ದಾರೆ. ಈ ವಸ್ತುಪ್ರದರ್ಶನವು 100ಕ್ಕೂ ಹೆಚ್ಚು ಉತ್ತಮ ರೂಢಿಗಳು ಹಾಗೂ ಆನ್ವಯಿಕಗಳನ್ನು ಒಳಗೊಂಡಿವೆ. ಅಲ್ಲಿ ಅವರು ಗ್ರಾಮೀಣ ನಾವಿನ್ಯದಾರರೊಂದಿಗೆ ಸಂವಾದ ನಡೆಸಲಿದ್ದಾರೆ.
ಪ್ರಧಾನಮಂತ್ರಿಯವರು ನಾನಾಜಿ ದೇಶ್ ಮುಖ್ ಮತ್ತು ಲೋಕನಾಯಕ ಜಯಪ್ರಕಾಶ ನಾರಾಯಣ ಅವರಿಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ.
ನಾನಾಜಿ ದೇಶ್ ಮುಖ್ ಅವರ ಸ್ಮರಣಾರ್ಥ ಅಂಚೆ ಚೀಟಿಯನ್ನೂ ಪ್ರಧಾನಮಂತ್ರಿಯವರು ಬಿಡುಗಡೆ ಮಾಡಲಿದ್ದಾರೆ. ಜಿಲ್ಲಾಮಟ್ಟದಲ್ಲಿನ ಅಭಿವೃದ್ಧಿಕಾರ್ಯಗಳ ನಿಗಾ ಮತ್ತು ಸಹಯೋಗಕ್ಕಾಗಿ ಅವರು ಪೋರ್ಟಲ್ ಗೆ ಕೂಡ ಚಾಲನೆ ನೀಡಲಿದ್ದಾರೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಗ್ರಾಮೀಣಾಭಿವೃದ್ಧಿ ಕಾರ್ಯಗಳ ಪ್ರಗತಿಯ ಮಾಹಿತಿ ಒದಗಿಸುವ ಅವರು ಗ್ರಾಮ ಸಂವಾದ ಆಪ್ ಅನ್ನು ಉದ್ಘಾಟಿಸಲಿದ್ದಾರೆ. ಇದನ್ನು ಮಾಹಿತಿಯಿಂದ ಸಶಕ್ತೀಕರಣ ಎಂಬ ಧ್ಯೇಯದ ಮೇಲೆ ವಿನ್ಯಾಸಗೊಳಿಸಲಾಗಿದೆ. ಅವರು ಐಎಆರ್.ಐ.ನ ಸಸ್ಯ ಫಿನೋಮಿಕ್ಸ್ ಸೌಲಭ್ಯವನ್ನು ಉದ್ಘಾಟಿಸಲಿದ್ದಾರೆ.
ಸ್ವಸಹಾಯ ಗುಂಪುಗಳು, ಪಂಚಾಯತ್ ಗಳು, ಜಲ ಸಂರಕ್ಷಣೆ ನಾವಿನ್ಯದಾರರು ಮತ್ತು ಪ್ರಧಾನಮಂತ್ರಿ ವಸತಿ ಯೋಜನೆಯ ಫಲಾನುಭವಿಗಳು ಸೇರಿದಂತೆ ಸುಮಾರು ಹತ್ತು ಸಾವಿರ ಜನರನ್ನುದ್ದೇಶಿಸಿ ಪ್ರಧಾನಮಂತ್ರಿಯವರು ಭಾಷಣ ಮಾಡಲಿದ್ದಾರೆ.