ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್ 10,2018 ರಂದು ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ವಿಶ್ವ ಜೈವಿಕ ಇಂಧನ ದಿನ ಆಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ರೈತರು, ವಿಜ್ಞಾನಿಗಳು, ಉದ್ಯಮಿಗಳು, ವಿದ್ಯಾರ್ಥಿಗಳು, ಸರಕಾರಿ ಅಧಿಕಾರಿಗಳು ಮತ್ತು ಶಾಸಕರನ್ನು ಒಳಗೊಂಡ ವೈವಿಧ್ಯಮಯ ಸಭಾಸದರನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ.
ಜೈವಿಕ ಇಂಧನ ಕಚ್ಚಾ ತೈಲ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲಿದೆ. ಅವುಗಳಿಂದ ಸ್ವಚ್ಚ ಪರಿಸರ ನಿರ್ಮಾಣವಾಗಲಿದೆ ಮತ್ತು ರೈತರಿಗೆ ಹೆಚ್ಚುವರಿ ಆದಾಯದ ಜೊತೆಗೆ ಗ್ರಾಮೀಣ ಭಾಗದಲ್ಲಿ ಉದ್ಯೋಗಾವಕಾಶಗಳು ನಿರ್ಮಾಣವಾಗಲಿವೆ. ಆದುದರಿಂದ ಜೈವಿಕ ಇಂಧನಗಳು ರೈತರ ಆದಾಯ ಹೆಚ್ಚಳ ಮತ್ತು ಸ್ವಚ್ಚ ಭಾರತ್ ಸಹಿತ ವಿವಿಧ ಸರಕಾರೀ ಉಪಕ್ರಮಗಳಲ್ಲಿ ಸಮ್ಮಿಳಿತಗೊಂಡಿವೆ.
ಕೇಂದ್ರ ಸರಕಾರದ ಪ್ರಯತ್ನಗಳ ಫಲಿತಾಂಶವಾಗಿ ಪೆಟ್ರೋಲಿನಲ್ಲಿ ಎಥೆನಾಲ್ ಮಿಶ್ರಣ 2013-14ರ ಎಥೆನಾಲ್ ಪೂರೈಕೆ ವರ್ಷದಲ್ಲಿ 38 ಕೋಟಿ ಲೀಟರುಗಳಷ್ಟಿದ್ದದ್ದು, 2017-18 ರ ಎಥೆನಾಲ್ ಪೂರೈಕೆ ವರ್ಷದಲ್ಲಿ ಅಂದಾಜು 141 ಕೋಟಿ ಲೀಟರುಗಳಷ್ಟಾಗುವ ನಿರೀಕ್ಷೆ ಇದೆ. ಜೈವಿಕ ಇಂಧನಕ್ಕೆ ಸಂಬಂಧಿಸಿ 2018 ರ ಜೂನ್ ತಿಂಗಳಲ್ಲಿ ರಾಷ್ಟ್ರೀಯ ನೀತಿಗೆ ಸರಕಾರ ಅನುಮೋದನೆ ನೀಡಿದೆ.