ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ತೇಕನ್ಪುರದಲ್ಲಿನ ಬಿ.ಎಸ್.ಎಫ್. ಅಕಾಡಮಿಯಲ್ಲಿ ಜನವರಿ 7 ಮತ್ತು 8ರಂದು ನಡೆಯಲಿರುವ ಡಿಜಿಪಿಗಳು ಮತ್ತು ಐಜಿಪಿಗಳ ವಾರ್ಷಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಡಿಜಿಪಿಗಳ ಸಮಾವೇಶ ವಾರ್ಷಿಕ ಕಾರ್ಯಕ್ರಮವಾಗಿದ್ದು, ಇದರಲ್ಲಿ ದೇಶಾದ್ಯಂತದ ಉನ್ನತ ಪೊಲೀಸ್ ಅಧಿಕಾರಿಗಳು ಭದ್ರತೆ ಸಂಬಂಧಿತ ವಿಚಾರಗಳ ಕುರಿತಂತೆ ಚರ್ಚಿಸಿ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಈ ಮುನ್ನ ಅಸ್ಸಾಂನ ಗುವಾಹಟಿಯಲ್ಲಿ 2014ರಲ್ಲಿ, ಗುಜರಾತ್ ನ ಕಚ್ ನ ದೋರ್ಡೋ ರನ್ ನಲ್ಲಿ 2015ರಲ್ಲಿ ಮತ್ತು ಹೈದ್ರಾಬಾದ್ ನ ರಾಷ್ಟ್ರೀಯ ಪೊಲೀಸ್ ಅಕಾಡಮಿಯಲ್ಲಿ 2016ರಲ್ಲಿ ಭಾಷಣ ಮಾಡಿದ್ದರು.
ಕಳೆದ ಸಭೆಯಲ್ಲಿ ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಮೂಲಭೂತವಾದ ಕುರಿತಂತೆ ವಿವರವಾಗಿ ಚರ್ಚಿಸಲಾಗಿತ್ತು. ಪ್ರಧಾನಮಂತ್ರಿಯವರು ನಾಯಕತ್ವ, ಮೃದು ಕೌಶಲ ಮತ್ತು ಸಂಘಟಿತ ತರಬೇತಿಯ ಮಹತ್ವವನ್ನು ಪ್ರತಿಪಾದಿಸಿದ್ದರು. ಅವರು ಪೊಲೀಸ್ ಪಡೆಗಳಿಗೆ ತಂತ್ರಜ್ಞಾನ ಮತ್ತು ಮಾನವ ಸಂಪರ್ಕದ ಮಹತ್ವವನ್ನು ವಿಶೇಷವಾಗಿ ಪ್ರತಿಪಾದಿಸಿದ್ದರು. ದೇಶಾದ್ಯಂತ ಇಂಥಹ ಸಮಾವೇಶಗಳು ನಡೆಯಬೇಕು, ಅದು ಕೇವಲ ದೆಹಲಿಗೆ ಸೀಮಿತವಾಗಿರಬಾರದು ಎಂಬ ಪ್ರಧಾನಿಯವರ ನಿಲುವಿನ ಹಿನ್ನೆಲೆಯಲ್ಲಿ ವಾರ್ಷಿಕ ಡಿ.ಜಿ.ಪಿ. ಸಮಾವೇಶವನ್ನು ರಾಷ್ಟ್ರೀಯ ರಾಜಧಾನಿಯಿಂದ ಹೊರಗೆ ನಡೆಸಲಾಗುತ್ತಿದೆ.