ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 25 ಡಿಸೆಂಬರ್ 2021ರಂದು ಮಧ್ಯಾಹ್ನ 12:30ರ ಸುಮಾರಿಗೆ ಗುಜರಾತ್‌ನ ಕಚ್‌ನಲ್ಲಿರುವ ಗುರುದ್ವಾರ ಲಖ್‌ಪತ್ ಸಾಹಿಬ್‌ನಲ್ಲಿ ಗುರುನಾನಕ್ ದೇವ್ ಜೀ ಅವರ ಗುರುಪುರಬ್ ಆಚರಣೆಯನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ.
ಪ್ರತಿ ವರ್ಷ ಡಿಸೆಂಬರ್ 23ರಿಂದ ಡಿಸೆಂಬರ್25 ರವರೆಗೆ ಗುಜರಾತಿನ ಸಿಖ್ ಸಂಘವು ಗುರುದ್ವಾರ ಲಖ್‌ಪತ್ ಸಾಹಿಬ್‌ನಲ್ಲಿ ಗುರುನಾನಕ್ ದೇವ್ ಜೀ ಅವರ ಗುರುಪುರಬ್ ಅನ್ನು ಆಚರಿಸುತ್ತದೆ. ಗುರುನಾನಕ್ ದೇವ್ ಅವರು ತಮ್ಮ ಪ್ರಯಾಣದ ಸಮಯದಲ್ಲಿ ಲಖ್‌ಪತ್‌ನಲ್ಲಿ ತಂಗಿದ್ದರು. ಗುರುದ್ವಾರ ಲಖ್‌ಪತ್ ಸಾಹಿಬ್‌ನಲ್ಲಿ ಮರದ ಪಾದರಕ್ಷೆಗಳು ಮತ್ತು ಪಾಲ್ಖಿ (ತೊಟ್ಟಿಲು), ಗುರುಮುಖಿಯ ಹಸ್ತಪ್ರತಿಗಳು ಮತ್ತು ಲಿಪಿಗಳು ಸೇರಿದಂತೆ ಗುರುನಾನಕ್ ಅವರಿಗೆ ಸೇರಿದ ವಸ್ತುಗಳನ್ನು ಕಾಣಬಹುದು.
2001ರ ಭೂಕಂಪದ ಸಮಯದಲ್ಲಿ ಗುರುದ್ವಾರಕ್ಕೆ ಹಾನಿಯಾಗಿತ್ತು. ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಶ್ರೀ ನರೇಂದ್ರ ಮೋದಿ ಅವರು ಈ ಗುರುದ್ವಾರದ ದುರಸ್ತಿಗಾಗಿ ತುರ್ತು ಪ್ರಯತ್ನಗಳನ್ನು ಮಾಡಿದ್ದರು. ಈ ಕ್ರಮವು ಸಮುದಾಯದ ನಂಬಿಕೆಯ ಬಗ್ಗೆ ಪ್ರಧಾನಿ ಹೊಂದಿರುವ ಆಳವಾದ ಪೂಜ್ಯಭಾವನೆಯನ್ನು ಸೂಚಿಸುತ್ತದೆ. ಗುರು ನಾನಕ್ ದೇವ್ ಜೀ ಅವರ 550ನೇ ಪ್ರಕಾಶ್‌ಪುರಬ್, ಗುರು ಗೋವಿಂದ ಸಿಂಗ್ ಜೀ ಅವರ 350ನೇ ಪ್ರಕಾಶ್ ಪುರಬ್ ಮತ್ತು ಗುರು ತೇಜ್ ಬಹದ್ದೂರ್ ಅವರ 400ನೇ ಪ್ರಕಾಶ್ ಪುರಬ್ ಆಚರಣೆಗಳು ಸೇರಿದಂತೆ ಇತ್ತೀಚಿನ ಅನೇಕ ಪ್ರಯತ್ನಗಳಲ್ಲೂ ಪ್ರಧಾನಿ ಅವರ ಈ ಭಾವನೆಯು ಪ್ರತಿಫಲಿಸಿದೆ.