ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021 ರ ಡಿಸೆಂಬರ್ 12 ರಂದು ಮಧ್ಯಾಹ್ನ 12 ಗಂಟೆಗೆ ವಿಜ್ಞಾನ ಭವನದಲ್ಲಿ “ಠೇವಣಿದಾರರು ಮೊದಲು : ಕಾಲಮಿತಿಯಲ್ಲಿ 5 ಲಕ್ಷ ರೂಪಾಯಿವರೆಗೆ ವಿಮಾ ಬಾಂಡ್ ಠೇವಣಿ ಪಾವತಿ ಕುರಿತ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ.
ವಿಮಾ ಠೇವಣಿಯು ಉಳಿತಾಯ, ಸ್ಥಿರ, ಚಾಲ್ತಿ ಒಳಗೊಂಡು ಎಲ್ಲಾ ಠೇವಣಿಗಳಿಗೆ ಇದು ಅನ್ವಯಿಸುತ್ತದೆ. ಭಾರತದಲ್ಲಿನ ಎಲ್ಲಾ ವಾಣಿಜ್ಯ ಬ್ಯಾಂಕ್ ಗಳು, ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿನ ರಾಜ್ಯ, ಕೇಂದ್ರೀಯ ಮತ್ತು ಪ್ರಾಥಮಿಕ ಸಹಕಾರ ಬ್ಯಾಂಕ್ ಗಳಲ್ಲಿ ಇದು ಜಾರಿಗೆ ಬಂದಿದೆ. ಬ್ಯಾಂಕ್ ಠೇವಣಿ ವಿಮಾ ಸೌಲಭ್ಯವು 1 ರಿಂದ 5 ಲಕ್ಷ ರೂಪಾಯಿಗೆ ಏರಿಕೆಯಾಗಿದ್ದು, ಇದೊಂದು ಗಮನಾರ್ಹ ಸುಧಾರಣಾ ಕ್ರಮವಾಗಿದೆ.
ಪ್ರತಿ ಬ್ಯಾಂಕ್ ನ ಪ್ರತಿಯೊಬ್ಬ ಠೇವಣಿದಾರರಿಗೆ 5 ಲಕ್ಷ ರೂಪಾಯಿವರೆಗೆ ಠೇವಣಿಗೆ ವಿಮಾ ರಕ್ಷಣೆ ದೊರೆಯಲಿದೆ. ಕಳೆದ ಹಣಕಾಸು ವರ್ಷದ ಕೊನೆಯ ವೇಳೆಗೆ ಸಂಪೂರ್ಣ ರಕ್ಷಣೆ ಪಡೆದ ಖಾತೆಗಳ ಸಂಖ್ಯೆ 98.1% ರಷ್ಟಿದೆ. ಇದು ಅಂತಾರಾಷ್ಟ್ರೀಯ ಮಾನದಂಡವಾದ 80% ಕ್ಕಿಂತಲೂ ಅಧಿಕವಾಗಿದೆ.
ಆರ್.ಬಿ.ಐ ನಿಯಂತ್ರಣದಲ್ಲಿರುವ 16 ನಗರ ಸಹಕಾರ ಬ್ಯಾಂಕ್ ಗಳ ಠೇವಣಿದಾರರಿಂದ ಪಡೆದ ಕ್ಲೈಮ್ ಗಳಿಗೆ ವಿಮೆ ಹಣ ಮತ್ತು ಸಾಲ ಖಾತರಿ ನಿಗಮ ಇತ್ತೀಚೆಗೆ ಮಧ್ಯಂತರ ಪಾವತಿಗಳ ಮೊದಲ ಕಂತು ಬಿಡುಗಡೆ ಮಾಡಿದೆ. ಅವರ ಕ್ಲೈಮುಗಳಿಗೆ ಅನುಗುಣವಾಗಿ 1 ಲಕ್ಷಕ್ಕೂ ಹೆಚ್ಚು ಠೇವಣಿದಾರರ ಪರ್ಯಾಯ ಬ್ಯಾಂಕ್ ಖಾತೆಗಳಿಗೆ 1,300 ಕೋಟಿ ರೂಪಾಯಿ ಮೊತ್ತವನ್ನು ಪಾವತಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವರು, ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವರು ಮತ್ತು ಆರ್.ಬಿ.ಐ ಗರ್ವನರ್ ಸಹ ಉಪಸ್ಥಿತರಿರಲಿದ್ದಾರೆ.