ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶನಿವಾರ ಭಾರತ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ 80ಕ್ಕೂ ಹೆಚ್ಚು ಹೆಚ್ಚುವರಿ ಕಾರ್ಯದರ್ಶಿಗಳು ಮತ್ತು ಜಂಟಿ ಕಾರ್ಯದರ್ಶಿಗಳ ತಂಡವನ್ನು ಭೇಟಿ ಮಾಡಿ ಅವರೊಂದಿಗೆ ಮಾತುಕತೆ ನಡೆಸಿದರು. ಇದು ಇಂಥ ಐದು ಸಂವಾದದಲ್ಲಿ ಸರಣಿಯ ಮೂರನೇಯದಾಗಿತ್ತು.
ಈ ಸಂವಾದದ ವೇಳೆ, ಅಧಿಕಾರಿಗಳು ಕೃಷಿ, ಕುಡಿಯುವ ನೀರು, ನಾಗರಿಕ ಕೇಂದ್ರಿತ ಆಡಳಿತ, ನಾವಿನ್ಯತೆ ಮತ್ತು ಆಡಳಿತದಲ್ಲಿ ಟೀಮ್ ವರ್ಕ್, ಯೋಜನೆಗಳ ಅನುಷ್ಠಾನ, ಶಿಕ್ಷಣ, ಉತ್ಪಾದನೆ, ಆಂತರಿಕ ಭದ್ರತೆ ಮತ್ತು ಸೌರ ಇಂಧನದಂಥ ಕ್ಷೇತ್ರಗಳಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಪ್ರಧಾನಮಂತ್ರಿಯವರು ಯೋಜನೆಗಳ ನಿಗಾಕ್ಕಾಗಿ ತಮ್ಮ ಪ್ರಗತಿ ಸಂವಾದದ ಪ್ರಸ್ತಾಪ ಮಾಡಿದರು. ಉತ್ಪಾದನೆ ಕುರಿತಂತೆ ಪ್ರಸ್ತಾಪಿಸಿದ ಪ್ರಧಾನಿಯವರು, ಭಾರತದಲ್ಲಿ ವಿದ್ಯುನ್ಮಾನ ಉತ್ಪಾದನೆಯು ವೈದ್ಯಕೀಯ ಸಾಧನ ಸಲಕರಣೆಗಳ ಉತ್ಪಾದನೆಗೆ ಗಮನಹರಿಸಬೇಕು ಎಂದರು.
ಸರ್ಕಾರವನ್ನು ‘ಸಾವಯವ ಕಾಯ’ವಾಗಿ ಮಾಡುವ ಸಲುವಾಗಿ ಸರ್ಕಾರದಲ್ಲಿ ಸಕಾರಾತ್ಮಕವಾದ ಕೆಲಸದ ವಾತಾವರಣ ಕಾಪಾಡುವ ಮಹತ್ವವನ್ನು ಪ್ರಧಾನಿಯವರು ಪ್ರತಿಪಾದಿಸಿದರು. ಹೊಸ ಕಾನೂನು ಮಾಡಿದ ಬಳಿಕ, ಹಳೆಯ ಕಾಯಿದೆಗಳನ್ನು ಪರಾಮರ್ಶಿಸಬೇಕು ಮತ್ತು ಅದು ಅನಗತ್ಯ ಎನಿಸಿದರೆ ತೆಗೆದುಹಾಕಬೇಕು ಎಂದರು.
ಭಾರತದ ಪರವಾಗಿ ಪ್ರಸಕ್ತ ಧನಾತ್ಮಕ ಜಾಗತಿಕ ವಾತಾವರಣ ಇರುವುದನ್ನು ಒತ್ತಿ ಹೇಳಿದ ಪ್ರಧಾನಿ, 2022ರ ಹೊತ್ತಿಗೆ ನವ ಭಾರತ ನಿರ್ಮಾಣ ಮಾಡುವ ಸ್ಪಷ್ಟ ಉದ್ದೇಶಗಳೊಂದಿಗೆ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಭಾರತದ 100 ಅತಿ ಹಿಂದುಳಿದ ಜಿಲ್ಲೆಗಳ ಬಗ್ಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ತಿಳಿಸಿದ ಪ್ರಧಾನಿ, ಇದರಿಂದ ಆ ಜಿಲ್ಲೆಗಳನ್ನು ವಿವಿಧ ಅಭಿವೃದ್ಧಿ ಮಾನದಂಡಗಳ ರೀತ್ಯ ರಾಷ್ಟ್ರೀಯ ಸರಾಸರಿ ಮಟ್ಟಕ್ಕೆ ತರಬಹುದು ಎಂದರು.