ಇಂಡೋನೇಷಿಯಾ, ಮಲೇಷಿಯಾ ಮತ್ತು ಸಿಂಗಾಪುರ ಪ್ರವಾಸಕ್ಕೆ ಹೊರಡುವ ಮೊದಲು ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೀಡಿದ ಹೇಳಿಕೆಯ ಪೂರ್ಣಪಾಠ
“ನಾನು ಮೇ 29ರಿಂದ ಜೂನ್ 2, 2018ರ ತನಕ ಇಂಡೋನೇಷಿಯಾ, ಮಲೇಷಿಯಾ ಮತ್ತು ಸಿಂಗಾಪುರಕ್ಕೆ ಭೇಟಿ ನೀಡಲಿದ್ದೇನೆ. ಭಾರತ ಈ ಮೂರು ರಾಷ್ಟ್ರಗಳೊಂದಿಗೆ ಬಲಿಷ್ಟ ಕಾರ್ಯತಂತ್ರ ಪಾಲುದಾರಿಗೆಯನ್ನು ಹೊಂದಿದೆ.
ನಾನು ಮೇ 29ರಂದು ಇಂಡೋನೇಷಿಯಾ ಅಧ್ಯಕ್ಷ ಜೋಕೋ ವಿಡೋಡೋ ಅವರ ಆಹ್ವಾನದ ಮೇರೆಗೆ ಜಕಾರ್ತ ತಲುಪಲಿದ್ದೇನೆ. ಪ್ರಧಾನಿಯಾದ ನಂತರ ಇಂಡೋನೇಷಿಯಾಗೆ ಇದು ನನ್ನ ಪ್ರಥಮ ಭೇಟಿಯಾಗಿದೆ. ಮೇ 30ರಂದು ಇಂಡೋನೇಷಿಯಾ ಅಧ್ಯಕ್ಷರೊಂದಿಗಿನ ಮಾತುಕತೆಯನ್ನು ನಾನು ಎದುರು ನೋಡುತ್ತಿದ್ದೇನೆ. ಹಾಗೆಯೇ ಭಾರತ ಇಂಡೋನೇಷಿಯಾ ಸಂಯುಕ್ತ diಸಿಇಓ ಸಂಘಟನೆಯೊಂದಿಗೂ ಸಂವಾದ ನಡೆಸಲಿದ್ದೇನೆ. ಇಂಡೋನೇಷಿಯಾದ ಭಾರತೀಯ ಸಮಾಜದೊಂದಿಗೂ ನಾನು ಮಾತುಕತೆ ನಡೆಸಲಿದ್ದೇನೆ.
ಭಾರತ ಮತ್ತು ಇಂಡೋನೇಷಿಯಾ ಬಲಿಷ್ಟ ಹಾಗೂ ಸೌಹಾರ್ದ ಪಾಲುದಾರಿಕೆಯನ್ನು ಹೊಂದಿದ್ದು, ಅತ್ಯಂತ ಪ್ರಾಚೀನ ಇತಿಹಾಸ ಮತ್ತು ನಾಗರೀಕ ಸಂಬಂಧಗಳನ್ನು ಹೊಂದಿವೆ. ಎರಡೂ ದೇಶಗಳು ಬಹು ಜನಾಂಗೀಯ, ಬಹು ಧರ್ಮೀಯ, ಉತ್ತಮ ಹಾಗು ಮುಕ್ತ ಸಮಾಜವನ್ನು ಒಳಗೊಂಡಿವೆ. ನನ್ನ ಈ ಭೇಟಿ ಬಲಿಷ್ಟ ಪ್ರಜಾಪ್ರಭುತ್ವವನ್ನುಳ್ಳ ಎರಡೂ ದೇಶಗಳ ನಡುವೆ ಹೆಚ್ಚಿನ ಸಹಭಾಗಿತ್ವವನ್ನು ಸೃಷ್ಟಿಸುತ್ತದೆ ಮತ್ತು ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂಬ ವಿಶ್ವಾಸ ನನಗಿದೆ.
ಮೇ 31ರಂದು ಸಿಂಗಾಪುರದ ಪ್ರವಾಸ ಮಾರ್ಗದಲ್ಲಿ ಅಲ್ಪ ಸಮಯ ಮಲೇಷಿಯಾಕ್ಕೆ ಭೇಟಿ ನೀಡಲಿದ್ದು ಅಲ್ಲಿನ ನೂತನ ನಾಯಕತ್ವಕ್ಕೆ ಅಭಿನಂದನೆ ಸಲ್ಲಿಸಲಿದ್ದೇನೆ. ನಾನು ಅಲ್ಲಿನ ಪ್ರಧಾನಮಂತ್ರಿ ಡಾ. ಮಹಾತೀರ್ ಮೊಹಮ್ಮದ್ ಅವರ ಭೇಟಿಯನ್ನು ಎದುರು ನೋಡುತ್ತಿದ್ದೇನೆ.
ಸಿಂಗಾಪುರದಲ್ಲಿ ನಾನು ಭಾರತ ಮತ್ತು ಸಿಂಗಪೂರ್ ನಡುವೆ ಫಿನ್ಟೆಕ್, ಕೌಶಲ್ಯಾಭಿವೃದ್ಧಿ, ನಗರಾಭಿವೃದ್ಧಿ ಮತ್ತು ಕೃತಕ ಬುದ್ಧಿಮತ್ತೆಯ ವಲಯದಲ್ಲಿ ಎರಡೂ ದೇಶಗಳ ನಡುವೆ ಪಾಲುದಾರಿಕೆಯನ್ನು ಹೆಚ್ಚಿಸುವ ಬಗ್ಗೆ ಒತ್ತು ನೀಡಲಿದ್ದೇನೆ. ನಗರಾಭಿವೃದ್ಧಿ, ಯೋಜನೆ, ಸ್ಮಾರ್ಟ್ ಸಿಟಿ ಮತ್ತು ಮೂಲಸೌಕರ್ಯ ಅಭಿವೃದ್ಧಿಯಂತಹ ವಲಯಗಳಲ್ಲಿ ಸಿಂಗಪೂರ್ ಸಂಸ್ಥೆಗಳು ಭಾರತದೊಂದಿಗೆ ಹೆಚ್ಚಿನ ಪಾಲುದಾರಿಕೆಯನ್ನು ಹೊಂದಿವೆ. ನನ್ನ ಈ ಸಿಂಗಪೂರ್ ಭೇಟಿ ಎರಡೂ ದೇಶಗಳ ನಡುವೆ ಪಾಲುದಾರಿಕೆಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ.
ನಾನು ಮೇ 31ರಂದು ಭಾರತ – ಸಿಂಗಪೂರ್ ಉದ್ಯಮ ಮತ್ತು ನೂತನ ಆವಿಷ್ಕಾರ ಪ್ರದರ್ಶನಕ್ಕೆ ಭೇಟಿ ನೀಡಲಿದ್ದೇನೆ. ವ್ಯವಹಾರ ಮತ್ತು ಹೂಡಿಕೆ ವಿಷಯಗಳ ಬಗ್ಗೆ ಚರ್ಚಿಸಲು ಅಲ್ಲಿನ ಆಯ್ದ ಪ್ರಮುಖ ಸಿಇಓ ಗಳ ಜತೆ ಮಾತುಕತೆ ನಡೆಸಿ, ವ್ಯವಹಾರ ಮತ್ತು ಹೂಡಿಕೆಯ ಅವಕಾಶಗಳ ಬಗ್ಗೆ ದುಂಡುಮೇಜಿನ ಸಭೆ ನಡೆಸಲಿದ್ದೇನೆ.
ಜೂನ್ 1ರಂದು ನಾನು ಸಿಂಗಪೂರ್ ಅಧ್ಯಕ್ಷ ಅಲಿಮಾಹ್ ಯಾಕೋಬ್ ಅವರನ್ನು ಭೇಟಿ ಮಾಡಲಿದ್ದೇನೆ. ಸಿಂಗಪೂರ್ ನ ಪ್ರಧಾನಮಂತ್ರಿ ಲೀ ಅವರೊಂದಿಗೂ ನಿಯೋಗ ಮಟ್ಟದ ಮಾತುಕತೆ ನಡೆಸಲಿದ್ದೇನೆ. ನಾನು ಅಲ್ಲಿನ ನಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿದ್ದು, ಅಲ್ಲಿನ ಯುವ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದೇನೆ.
ಅಂದು ಸಂಜೆ ಶಾಂಗ್ರಿ ಲಾ ದಲ್ಲಿ ಪ್ರಮುಖ ಭಾಷಣ ಮಾಡಲಿದ್ದೇನೆ. ಅಲ್ಲಿ ಭಾರತೀಯ ಪ್ರಧಾನಿಯೊಬ್ಬರು ನೀಡುತ್ತಿರುವ ಪ್ರಥಮ ಭಾಷಣ ಇದಾಗಿದೆ. ಪ್ರಾದೇಶಿಕ ಭದ್ರತಾ ವಿಷಯಗಳ ಬಗ್ಗೆ ಭಾರತದ ದೃಷ್ಟಿಕೋನವನ್ನು ಸ್ಪಷ್ಟಪಡಿಸುವ ಹಾಗೂ ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ನಿರ್ವಹಣೆಗೆ ಇದು ಅವಕಾಶ ನೀಡಲಿದೆ.
ಜೂನ್ 2 ರಂದು ನಾನು 27 ಮಾರ್ಚ್ 1948ರಂದು ಗಾಂಧೀಜಿ ಅವರ ಚಿತಾಭಸ್ಮವನ್ನು ಸಮುದ್ರದಲ್ಲಿ ವಿಸರ್ಜಿಸಿದ ಕ್ಲಿಫೋರ್ಡ್ ಪಿಯರ್ ನಲ್ಲಿ ಒಂದು ಫಲಕವನ್ನು ಅನಾವರಣ ಮಾಡಲಿದ್ದೇನೆ. ಭಾರತದೊಂದಿಗೆ ನಾಗರಿಕ ಸಂಪರ್ಕ ಹೊಂದಿರುವ ಹಲವು ಧಾರ್ಮಿಕ ಸ್ಥಳಗಳಿಗೆ ನಾನು ಭೇಟಿ ನೀಡಲಿದ್ದೇನೆ.
ನನ್ನ ಕಾರ್ಯಕ್ರಮದ ಕೊನೆಯ ಭಾಗವಾಗಿ ನಾನು ಸಿಂಗಪುರದ ಚಾಂಗಿ ನೌಕಾ ಕೇಂದ್ರಕ್ಕೆ ಭೇಟಿ ನೀಡಲಿದ್ದೇನೆ. ಮತ್ತು ನಾನು ಭಾರತೀಯ ನೌಕಾ ಹಡಗು ಐಎನ್ ಎಸ್ ಸತ್ಪುರಕ್ಕೆ ಭೇಟಿ ನೀಡಲ್ಲಿದ್ದೇನೆ ಹಾಗು ಭಾರತೀಯ ನೌಕಾಪಡೆ ಮತ್ತು ರಾಯಲ್ ಸಿಂಗಾಪುರ್ ನೌಕಾ ಅಧಿಕಾರಿಗಳು ಮತ್ತು ನಾವಿಕರೊಂದಿಗೆ ಸಂವಾದ ನಡೆಸಲಿದ್ದೇನೆ .
ಇಂಡೋನೇಷಿಯಾ, ಮಲೇಷಿಯಾ ಮತ್ತು ಸಿಂಗಾಪುರದ ನನ್ನ ಭೇಟಿ ಆಕ್ಟ್ ಈಸ್ಟ್ ಪಾಲಿಸಿಗೆ ಮತ್ತಷ್ಟು ಉತ್ತೇಜನವನ್ನು ನೀಡುತ್ತದೆ ಮತ್ತು ಮೂರೂ ದೇಶಗಳೊಂದಿಗೆ ನಮ್ಮ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂಬ ವಿಶ್ವಾಸ ನನಗಿದೆ.