ಮಾನ್ಯ ಸಭಾಪತಿಗಳೇ, ಸದನದ ವತಿಯಿಂದ ಹಾಗೂ ಸಂಪೂರ್ಣ ದೇಶದ ನಾಗರಿಕರ ಪರವಾಗಿ ನಾನು ತಮಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಾ ಶುಭಾಶಯಗಳನ್ನು ಕೋರುತ್ತಿದ್ದೇನೆ.
ಇಂದು ಆಗಸ್ಟ್ 11, ಇತಿಹಾಸದ ಪುಟಗಳಲ್ಲಿ ಮಹತ್ವಪೂರ್ಣ ದಿನ. ಇದೇ ದಿನದಂದು, 18ರ ಹರೆಯದ ಪುಟ್ಟ ಯುವಕ ಖುದೀರಾಮ್ ಬೋಸ್ ಅವರನ್ನು ನೇಣಿಗೇರಿಸಲಾಗಿತ್ತು. ದೇಶದ ಸ್ವಾತಂತ್ರಕ್ಕಾಗಿ ಯಾವ ರೀತಿಯ ಹೋರಾಟಗಳು ನಡೆದವು, ಇದಕ್ಕಾಗಿ ಎಷ್ಟು ಬಲಿದಾನಗಳು ನಡೆದವು, ಇದರ ಹಿನ್ನೆಲೆಯಲ್ಲಿ ನಮ್ಮ ಜವಾಬ್ಧಾರಿಗಳೆಷ್ಟು ಎಂಬುದನ್ನು ಈ ಘಟನೆ ನೆನಪಿಸುತ್ತದೆ.
ಶ್ರೀ ವೆಂಕಯ್ಯ ನಾಯ್ಡು ಅವರು ಭಾರತದ ಸ್ವಾತಂತ್ರ್ಯಾ ನಂತರ ಜನಿಸಿ ಉಪರಾಷ್ಟ್ರಪತಿಯಾದ ಮೊದಲಿಗರಾಗಿದ್ದಾರೆ ಎಂಬುದನ್ನು ನಾವು ಗಮನಿಸಬೇಕು. ಶ್ರೀ ವೆಂಕಯ್ಯನಾಯ್ಡು ಅವರು ಇದೇ ವಾತಾವರಣದಲ್ಲಿ, ಇವರೆಲ್ಲರ ಮಧ್ಯದಲ್ಲಿಯೇ ಬೆಳೆದು ದೊಡ್ಡವರಾಗಿ ಉಪರಾಷ್ಟ್ರಪತಿಯಾದ ಮೊಟ್ಟ ಮೊದಲ ವ್ಯಕ್ತಿಯಾಗಿದ್ದಾರೆ ಎಂದು ನನಗನಿಸುತ್ತಿದೆ. ಅವರು ಈ ಸದನವನ್ನು ಸೂಕ್ಷ್ಮವಾಗಿ ಅರಿತಿದ್ದಾರೆ. ಸದಸ್ಯರಿಂದ ಸಮಿತಿಯವರೆಗೆ, ಸಮಿತಿಯಿಂದ ಸದನದ ಕಾರ್ಯ ಕಲಾಪಗಳವರೆಗಿನ ಪ್ರಕ್ರಿಯೆಯ ತನಕ ಅವರು ಸ್ವಯಂ ಭಾಗವಹಿಸಿ ಬೆಳೆದುಬಂದ ಮೊದಲ ಉಪರಾಷ್ಟ್ರಪತಿಯಾಗಿ ದೇಶಕ್ಕೆ ದೊರೆತಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಜೆಪಿ ಆಂದೋಲನದ ಮೂಲಕ ಅವರು ಬೆಳೆದು ಮುಂದೆ ಬಂದಿದ್ದಾರೆ. ಜಯಪ್ರಕಾಶ್ ನಾರಾಯಣ್ ಅವರ ಆಹ್ವಾನದ ಮೇರೆಗೆ ಸ್ವಚ್ಚತೆಯಿಂದ ಹಿಡಿದು ಶುದ್ಧ ಆಡಳಿತಕ್ಕಾಗಿ ದೇಶದೆಲ್ಲೆಡೆ ಹೋರಾಟಗಳು ನಡೆದವು. ವಿದ್ಯಾರ್ಥಿ ದಿಶೆಯಲ್ಲಿ ಆಂಧ್ರಪ್ರದೇಶದ ಒಬ್ಬ ವಿದ್ಯಾರ್ಥಿ ನಾಯಕನಾಗಿ ಅವರು ತಮ್ಮನ್ನು ತಾವು ತೊಡಗಿಸಿಕೊಂಡು ಹೊರಹೊಮ್ಮಿದರು. ಅಂದಿನಿಂದ ಹಿಡಿದು ವಿಧಾನಸಭೆಯಾಗಲಿ, ರಾಜ್ಯಸಭೆಯಾಗಲಿ ಅವರು ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದರ ಜತೆ ಜತೆಗೆ ತಮ್ಮ ಕಾರ್ಯಕ್ಷೇತ್ರವನ್ನು ಕೂಡ ವಿಸ್ತರಿಸಿಕೊಂಡರು. ಇವೆಲ್ಲವುಗಳ ಪರಿಣಾಮವಾಗಿ ಇಂದು ನಾವೆಲ್ಲರೂ ಅವರನ್ನು ಇಷ್ಟಪಟ್ಟಿದ್ದೇವೆ ಮತ್ತು ಈ ಗೌರವಪೂರ್ಣ ಜವಾಬ್ಧಾರಿಯನ್ನು ಅವರಿಗೆ ನೀಡಿದ್ದೇವೆ.
ಶ್ರೀ ವೆಂಕಯ್ಯ ನಾಯ್ಡು ಅವರು ರೈತನ ಮಗ. ಅನೇಕ ವರ್ಷಗಳ ಕಾಲ ನನಗೆ ಅವರೊಂದಿಗೆ ಕಾರ್ಯ ನಿರ್ವಹಿಸುವ ಸೌಭಾಗ್ಯ ದೊರೆತಿದೆ. ಹಳ್ಳಿಗಳಾಗಲಿ, ಬಡವರಾಗಲಿ, ರೈತರಾಗಲಿ ಯಾವುದೇ ವಿಷಯದ ಬಗ್ಗೆ ಅವರು ಅತ್ಯಂತ ಸೂಕ್ಷ್ಮವಾಗಿ ಅಧ್ಯಯನ ಮಾಡಿ ಎಲ್ಲ ಸಮಯದಲ್ಲೂ ತಮ್ಮ ಸಲಹೆ, ಅಭಿಪ್ರಾಯಗಳನ್ನು ನೀಡುತ್ತಾ ಬಂದಿದ್ದಾರೆ. ಸಚಿವ ಸಂಪುಟದಲ್ಲೂ ಕೂಡಾ ಅವರು ನಗರಾಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಚಿವ ಸಂಪುಟದ ಸಭೆಗಳಲ್ಲಿ ಚರ್ಚೆಗಳು ನಡೆದ ಸಂದರ್ಭಗಳಲ್ಲಿ ಅವರು ಎಷ್ಟು ಸಮಯವನ್ನು ನಗರಾಭಿವೃದ್ಧಿಯ ಬಗ್ಗೆ ಚರ್ಚಿಸುತ್ತಿದ್ದರೋ ಅದಕ್ಕಿಂತ ಹೆಚ್ಚು ಅವರು ಗ್ರಾಮೀಣ ಪ್ರದೇಶ ಮತ್ತು ರೈತರ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು. ಇದು ಅವರ ಹೃದಯಕ್ಕೆ ಹತ್ತಿರವಾದ ವಿಷಯವಾಗಿತ್ತು, ಇದಕ್ಕೆ ಅವರ ಕೌಟುಂಬಿದ ಹಿನ್ನೆಲೆ ಕಾರಣವಾಗಿರಬಹುದು.
ಶ್ರೀ ವೆಂಕಯ್ಯ ನಾಯ್ಡು ಅವರು ಉಪರಾಷ್ಟ್ರಪತಿ ಹುದ್ದೆಯಲ್ಲಿ ಕುಳಿತಿದ್ದಾರೆ. ಸಂಪೂರ್ಣ ವಿಶ್ವಕ್ಕೆ ನಾವು ಒಂದು ವಿಷಯವನ್ನು ಕುರಿತು ಹೇಳಬೇಕಾಗಿದೆ. ರಾಜಕೀಯ ಭಿನ್ನತೆಗಳ ನಡುವೆ ಇದು ನಮ್ಮೆಲ್ಲರ ಕರ್ತವ್ಯವಾಗಿದೆ ಕೂಡಾ. ಭಾರತದ ಪ್ರಜಾಪ್ರಭುತ್ವ ಎಷ್ಟು ಬಲಿಷ್ಟವಾಗಿದೆ ಎಂಬುದನ್ನು ವಿಶ್ವಕ್ಕೆ ತೋರಿಸುವುದು ನಮ್ಮೆಲ್ಲರ ಅದ್ಯತೆಯಾಗಿದೆ ಭಾರತದ ಸಂವಿಧಾನದಲ್ಲಿನ ಸೂಕ್ಷ್ಮತೆಗಳು ಎಷ್ಟು ಬಲಿಷ್ಟವಾಗಿದೆ. ಅಂದಿನ ಆ ಮಹಾಪುರುಷರು ನಮಗೆ ನೀಡಿದ ಸಂವಿಧಾನದ ಸಾಮರ್ಥ್ಯವೇನು. ಬಡತನದ ಹಿನ್ನೆಲೆಯಿಂದ, ಹಳ್ಳಿಗಳಿಂದ’, ಸಾಮಾನ್ಯ ಕುಟುಂಬದಿಂದ ಬಂದ ವ್ಯಕ್ತಿಗಳು ಇಂದು ಹಿಂದೂಸ್ತಾನದ ಸಾಂವಿಧಾನಿಕ ಸ್ಥಾನಗಳನ್ನು ಅಲಂಕರಿಸಿದ್ದಾರೆ ಎಂಬುದನ್ನು ತಿಳಿಸಬೇಕಿದೆ.ಮೊಟ್ಟಮೊದಲ ಬಾರಿಗೆ ದೇಶದ ಎಲ್ಲ ಉನ್ನತ ಹುದ್ದೆಗಳಲ್ಲಿ ಸಾಮಾನ್ಯ ಕುಟುಂಬದಿಂದ ಬಂದ ವ್ಯಕ್ತಿಗಳು ಕುಳಿತಿರುವುದು ಭಾರತದ ಸಂವಿಧಾನದ ಹಿರಿಮೆಯಾಗಿದೆ ಹಾಗು ಭಾರತದ ಪ್ರಜಾಪ್ರಭುತ್ವದ ಪ್ರೌಢಿಮೆಯನ್ನು ತೋರಿಸುತ್ತದೆ. ಈ ಹಿರಿಮೆ ದೇಶದ 125 ಕೋಟಿ ಭಾರತೀಯರ ಗರಿಮೆಯಾಗಿದೆ. ನಮ್ಮ ಪೂರ್ವಜರು ನಮಗೆ ಒಂದು ಪರಂಪರೆಯನ್ನು ನೀಡಿದ್ದಾರೆ, ಈ ಘಟನೆಯಿಂದ ನಾವು ನಮ್ಮ ಹಿರಿಯರನ್ನು ಗೌರವಿಸುತ್ತಿದ್ದೇವೆಂದು ನಾನು ಭಾವಿಸುತ್ತೇನೆ. ನಾನು ಮತ್ತೊಮ್ಮೆ ನಮ್ಮ ಸಂವಿಧಾನ ನಿರ್ಮಾತೃಗಳಿಗೆ ವಂದನೆಗಳನ್ನು ಸಲ್ಲಿಸಬಯಸುತ್ತೇನೆ.
ಶ್ರೀ ವೆಂಕಯ್ಯನಾಯ್ಡು ಅವರಿಗೊಂದು ವ್ಯಕ್ತಿತ್ವವಿದೆ, ಕರ್ತವ್ಯವಿದೆ ಮತ್ತು ಭಾಷಾ ಪ್ರೌಢಿಮೆ ಇದೆ. ಅವರು ಇವೆಲ್ಲವುಗಳ ಧಣಿರಾಗಿದ್ದಾರೆ. ಅವರ ಮಾತುಗಳಲ್ಲಿನ ಪ್ರಾಸವನ್ನು ತಾವೆಲ್ಲರೂ ಚೆನ್ನಾಗಿ ಅರಿತಿದ್ದೀರಿ. ಕೆಲವೊಮ್ಮೆ ಅವರು ಭಾಷಣ ಮಾಡುವ ಸಂದರ್ಭಗಳಲ್ಲಿ ಮತ್ತು ಅವರು ತೆಲುಗು ಮಾತನಾಡುವ ಸಮಯದಲ್ಲಿ ಅವರೊಂದು ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಚಲಾಯಿಸುತ್ತಿದ್ದಾರೆ ಎಂದು ಭಾಸವಾಗುತ್ತದೆ. ವಿಷಯಗಳ ಬಗೆಗಿನ ಸ್ಪಷ್ಟತೆ, ವೀಕ್ಷಕರ ಜತೆ ನೇರ ಸಂವಹನ ಸಾಧಿಸುವುದರಿಂದ ಮಾತ್ರ ಇದು ಸಾಧ್ಯವಾಗುತ್ತದೆ. ಇದು ಕೇವಲ ಶಬ್ಧಗಳ ಜತೆಗಿನ ಆಟವಲ್ಲ, ಯಾರು ಮಾತುಗಾರಿಕೆಯ ಪ್ರಪಂಚದಲ್ಲಿ ತೊಡಗಿಕೊಂಡಿರುತ್ತಾರೋ ಅವರಿಗೆ ಕೇವಲ ಪದಗಳ ಜತೆಗಿನ ಆಟದಿಂದ ಯಾವುದೇ ವ್ಯಕ್ತಿಯ ಮನಸ್ಸನ್ನು ಗೆಲ್ಲುವುದು ಸಾಧ್ಯವಿಲ್ಲ ಎಂಬ ಅರಿವಿರುತ್ತದೆ. ಶ್ರದ್ಧಾಭಾವದಿಂದ ಹೊರಬಂದ ವಿಚಾರಧಾರೆಯ ಆಧಾರದ ಮೇಲೆ ತನ್ನ ನಿರ್ಣಯ ಮತ್ತು ದೃಷ್ಟಿಕೋನದಿಂದ ಹೊರಬರುವ ವಿಷಯಗಳು ಜನರ ಮನಸ್ಸನ್ನು ತನ್ನಂತಾನೆ ಮುಟ್ಟುತ್ತದೆ, ಇದನ್ನು ನಾವು ಶ್ರೀ ವೆಂಕಯ್ಯನಾಯ್ಡು ಅವರ ಜೀವನದಲ್ಲಿ ನೋಡಿದ್ದೇವೆ.
ಪ್ರತಿಯೊಬ್ಬ ಸಂಸತ್ ಸದಸ್ಯನೂ ಗ್ರಾಮೀಣ ಅಭಿವೃದ್ಧಿ ವಿಷಯಗಳ ಬಗ್ಗೆ ಆಗ್ಗಿಂದಾಗ್ಗೆ ಸರ್ಕಾರದ ಗಮನ ಸೆಳೆಯುತ್ತಿರುತ್ತಾರೆ ಎಂಬುದು ನಿಜ. ಡಾ. ಮನಮೋಹನ್ ಸಿಂಗ್ ಅವರ ನೇತೃತ್ವದ ಸರ್ಕಾರವಾಗಿರಲಿ ಅಥವಾ ನನ್ನ ನೇತೃತ್ವದ ಸರ್ಕಾರವಾಗಿರಲಿ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆಯ ಕೆಲಸಕ್ಕಾಗಿ ಪ್ರತಿಯೊಬ್ಬ ಸಂಸತ್ ಸದಸ್ಯರೂ ನಿರಂತರ ಬೇಡಿಕೆ ಸಲ್ಲಿಸುತ್ತಿರುತ್ತಾರೆ. ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆಯ ಕಲ್ಪನೆ ಮತ್ತು ಅದರ ಯೋಜನೆ, ಈ ಕೊಡುಗೆಯನ್ನು ಯಾರಾದರೂ ನೀಡಿದ್ದರೆ ಅದು ನಮ್ಮ ಉಪರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡು ಅವರು ನೀಡಿದ್ದರು ಎಂಬುದು ಎಲ್ಲ ಸಂಸದರಿಗೆ ಹೆಮ್ಮೆಯ ವಿಷಯ. ಹಳ್ಳಿಗಳ ಬಗ್ಗೆ, ಬಡವರ ಬಗ್ಗೆ, ರೈತರ ಬಗ್ಗೆ, ದಲಿತರ ಬಗ್ಗೆ, ಶೋಷಿತರ ಬಗ್ಗೆ ನನ್ನದೆನ್ನುವ ಭಾವನೆ ಬಂದಾಗ, ಅವರನ್ನು ಕಷ್ಟದಿಂದ ಪಾರು ಮಾಡಬೇಕೆಂಬ ಸಂಕಲ್ಪ ಮೂಡಿದಾಗ ಮಾತ್ರ ಇದು ಸಾಧ್ಯವಾಗುತ್ತದೆ.
ಇಂದು ಉಪರಾಷ್ಟ್ರಪತಿಯಾಗಿ ಶ್ರೀ ವೆಂಕಯ್ಯ ನಾಯ್ಡು ಅವರು ನಮ್ಮ ನಡುವೆ ಇದ್ದಾರೆ, ಸದನದಲ್ಲಿ ನಮಗೆ ಕೆಲವು ಕಾಲ ತೊಂದರೆಯಾಗಬಹುದು. ಯಾಕೆಂದರೆ ವಕೀಲರ ಸಂಘದ ಯಾವುದೇ ವಕೀಲ ನ್ಯಾಯಾಧೀಶನಾದಾಗ ಪ್ರಾರಂಭದಲ್ಲಿ ನ್ಯಾಯಾಲಯದಲ್ಲಿ ಅವರೊಡನೆ ವಕೀಲರ ಸಂಘದ ಸದಸ್ಯರು ಮಾತನಾಡುವಾಗ ಸ್ವಲ್ಪ ವಿಚಿತ್ರವಾಗಿ ಕಾಣುತ್ತದೆ. ನೆನ್ನೆಯವರೆಗೆ ಇವರು ನನ್ನೊಡನೆ ನಿಂತಿರುತ್ತಿದ್ದರು, ನನ್ನೊಡನೆ ವಾದ ಮಾಡುತ್ತಿದ್ದರು, ಇಂದು ನಾನು ಇವರೊಂದಿಗೆ ಹೇಗೆ?? ಅದೇ ರೀತಿ ನಮಗೆಲ್ಲರಿಗೂ, ವಿಶೇಷವಾಗಿ ಈ ಸದನದಲ್ಲಿ ಅವರೊಂದಿಗೆ ಮಿತ್ರರಾಗಿ ಕಾರ್ಯ ನಿರ್ವಹಿಸುತ್ತಿದ್ದವರಿಗೆ ಅವರು ಇಂದು ಈ ಸ್ಥಾನದಲ್ಲಿ ಕುಳಿತಿದ್ದಾರೆಂದರೆ... ನಮ್ಮ ಪ್ರಜಾಪ್ರಭುತ್ವದ ವಿಶೇಷತೆಯೆಂದರೆ ವ್ಯವಸ್ಥೆಗೆ ಅನುಗುಣವಾಗಿ ನಾವು ನಮ್ಮ ಕಾರ್ಯಶೈಲಿಯನ್ನು ಬದಲಿಸಿಕೊಳ್ಳುತ್ತೇವೆ.
ಇಷ್ಟು ದೀರ್ಘ ಅವಧಿವರೆಗೆ ನಮ್ಮ ಮಧ್ಯೆ ರಾಜ್ಯಸಭೆಯ ಸದಸ್ಯರಾಗಿ. ಪ್ರತಿಯೊಂದು ಸೂಕ್ಷ್ಮತೆಗಳ ನಡುವೆ ಹೊರಬಂದು, ಒಬ್ಬ ಪರಿಪೂರ್ಣ ವ್ಯಕ್ತಿಯಾಗಿ ಉಪರಾಷ್ಟ್ರಪತಿ ಮತ್ತು ಈ ಸದನದ ಸಭಾಪತಿಯಾಗಿ ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡುತ್ತಾರೆ, ನಮ್ಮನ್ನು ಮುನ್ನಡೆಸುತ್ತಾರೆ ಎಂಬ ವಿಶ್ವಾಸ ನನಗಿದೆ. ಸದನದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಅವರ ಕೊಡುಗೆ ಮಹತ್ವಪೂರ್ಣವಾಗಿರುತ್ತದೆ ಎಂಬ ನಂಬಿಕೆ ನನಗಿದೆ ಮತ್ತು ಒಂದು ದೊಡ್ಡ ಬದಲಾವಣೆಯ ಸಂಕೇತವಾಗಿ ನಾವು ಅವರನ್ನು ಕಾಣುತ್ತಿದ್ದೇವೆ. ಇದು ಒಳ್ಳೆಯದಕ್ಕಾಗಿ ಆಗುತ್ತದೆ.
ಇಂದು ಶ್ರೀ ವೆಂಕಯ್ಯ ನಾಯ್ಡು ಅವರು ಈ ಗೌರವಶಾಲಿ ಹುದ್ದೆಯನ್ನು ಅಲಂಕರಿಸುತ್ತಿದ್ದಾರೆ.
ನಾನೊಂದು ಮಾತನ್ನು ನೆನಪು ಮಾಡಲು ಬಯಸುತ್ತೇನೆ.
“ಅಧಿಕಾರವನ್ನು ಹೀಗೆ ರಕ್ಷಣೆ ಮಾಡಿ,
ಅಧಿಕಾರವನ್ನು ಹೀಗೆ ರಕ್ಷಣೆ ಮಾಡಿ,
ಎಲ್ಲೆಲ್ಲಿ ನಿನ್ನ ದೃಷ್ಟಿ ಸಾಗುತ್ತದೋ
ಅಲ್ಲಿಂದ ನಿನಗೊಂದು ನಮಸ್ಕಾರ ಲಭಿಸಲಿ” ( ‘’अमलकरोऐसाअमनमें, अमलकरोऐसाअमनमें, जहांसेगुजरेतुम्हारीनज़रें, उधरसेतुम्हेंसलामआए।’’)
ಇದರೊಂದಿಗೆ ಮತ್ತಷ್ಟು ಸಾಲುಗಳನ್ನು ಸೇರಿಸಿ ನಾನು ಹೇಳುತ್ತೇನೆ
“ಸದನದಲ್ಲಿ ಹೀಗೆ ಅಧಿಕಾರ ನಿರ್ವಹಿಸಿ
ಎಲ್ಲಿಯವರೆಗೆ ತಮ್ಮ ದೃಷ್ಟಿ ಸಾಗುತ್ತದೋ,
ಅಲ್ಲಿಂದ ತಮಗೊಂದು ನಮಸ್ಕಾರ ದೊರೆಯಲಿ” ( ‘‘अमलकरोऐसासदनमें, जहांसेगुजरेतुम्हारीनज़रें, उधरसेतुम्हेंसलामआए।’)
ತುಂಬು ಹೃದಯದ ಶುಭಾಶಯಗಳೊಂದಿಗೆ ಧನ್ಯವಾದಗಳು.