ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತ ಸರ್ಕಾರದ ವಿವಿಧ ಇಲಾಖೆ ಹಾಗೂ ಸಚಿವಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 380 ಉಪ ಕಾರ್ಯದರ್ಶಿಗಳು ಮತ್ತು ನಿರ್ದೇಶಕರುಗಳ ನಾಲ್ಕು ತಂಡದೊಂದಿಗೆ ಸಂವಾದ ನಡೆಸಿದರು. ಅಕ್ಟೋಬರ್ 2017ರ ವಿವಿಧ ದಿನಗಳಲ್ಲಿ ಈ ಸಂವಾದ ನಡೆಯಿತು. ಇದರ ಕೊನೆಯ ಸಂವಾದ 2017ರ ಅಕ್ಟೋಬರ್ 17ರಂದು ನಡೆಯಿತು. ಪ್ರತಿಯೊಂದು ಸಂವಾದವೂ ಸುಮಾರು 2 ಗಂಟೆಗಳ ಕಾಲ ನಡೆಯಿತು.
ಆಡಳಿತ, ಭ್ರಷ್ಟಾಚಾರ, ಸಾರ್ವಜನಿಕ ಉದ್ಯಮ, ಸರ್ಕಾರದ ಇ ಮಾರುಕಟ್ಟೆ ತಾಣ, ಆರೋಗ್ಯ, ಶಿಕ್ಷಣ, ಕೌಶಲ ವರ್ಧನೆ, ಕೃಷಿ, ಸಾರಿಗೆ, ರಾಷ್ಟ್ರೀಯ ಏಕತೆ, ಜಲ ಸಂಪನ್ಮೂಲ, ಸ್ವಚ್ಛ ಭಾರತ, ಸಂಸ್ಕೃತಿ, ಸಂವಹನ ಮತ್ತು ಪ್ರವಾಸೋದ್ಯಮ ಕುರಿತ ವಿಚಾರಗಳು ಈ ಸಂವಾದದ ವೇಳೆ ಚರ್ಚೆಗೆ ಬಂದವು.
2022ರ ಹೊತ್ತಿಗೆ ನವ ಭಾರತದ ನಿರ್ಮಾಣ ಮಾಡಲು, ಅಧಿಕಾರಿಗಳು ಸಂಪೂರ್ಣ ಸಮರ್ಪಣಾಭಾವದಿಂದ ಶ್ರಮಿಸಬೇಕೆಂದು ಪ್ರಧಾನಮಂತ್ರಿಯವರು ಪ್ರತಿಪಾದಿಸಿದರು. ಕೇಂದ್ರ ಸರ್ಕಾರದ ಕಾರ್ಯ ನಿರ್ವಹಣೆಯಲ್ಲಿನ ಕಂದಕಗಳು ದೊಡ್ಡ ಅಡಚಣೆಯಾಗಿವೆ ಎಂದು ಹೇಳಿದರು. ಈ ಕಂದಕಗಳನ್ನು ನಿವಾರಿಸಲು ಮತ್ತು ಆಡಳಿತದ ವಿವಿಧ ಪ್ರಕ್ರಿಯೆಗಳನ್ನು ತ್ವರಿತಗೊಳಿಸುವಂಥ ಪರಿಣಾಮ ಬೀರುವ ನಾವಿನ್ಯಪೂರ್ಣವಾದ ಮಾರ್ಗಗಳನ್ನು ಅಧಿಕಾರಿಗಳು ಅಳವಡಿಸಿಕೊಳ್ಳಬೇಕು ಎಂದು ಪ್ರಧಾನಿ ಹೇಳಿದರು.
ಇದೇ ನಿಟ್ಟಿನಲ್ಲಿ, ನಿರ್ದೇಶಕರು ಮತ್ತು ಉಪ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಉತ್ತಮ ಫಲಿತಾಂಶ ಸಾಧನೆಗಾಗಿ ತಂಡಗಳನ್ನು ರಚಿಸಬೇಕು ಎಂದರು. ಪ್ರಧಾನಮಂತ್ರಿಗಳ ಕಾರ್ಯಾಲಯದ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್, ಸಂಪುಟ ಸಚಿವಾಲಯದ ಮತ್ತು ಪಿಎಂಓದ ಹಿರಿಯ ಅಧಿಕಾರಿಗಳು ಸಂವಾದದ ವೇಳೆ ಹಾಜರಿದ್ದರು.