ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಶ್ವಾದ್ಯಂತ ಆಹಾರ ಸಂಸ್ಕರಣೆ ಮತ್ತು ಸಂಬಂಧಿತ ವಲಯದಲ್ಲಿ ತೊಡಗಿಕೊಂಡಿರುವ ಪ್ರಮುಖ ಕಂಪನಿಗಳನ್ನು ಪ್ರತಿನಿಧಿಸುವ ಸಿಇಓಗಳೊಂದಿಗೆ ಮಾತುಕತೆ ನಡೆಸಿದರು. ಭಾರತದಲ್ಲಿನ ವಿಶ್ವ ಆಹಾರ ಮೇಳದ ಭಾಗ ಇದಾಗಿತ್ತು.
ಅಮೆಜಾನ್ (ಇಂಡಿಯಾ), ಆಮ್ವೇ, ಬ್ರಿಟಾನಿಯಾ ಇಂಡಸ್ಟ್ರೀಸ್, ಕಾರ್ಗಿಲ್ ಏಶಿಯಾ ಪೆಸಿಫಿಕ್,ಕೋಕಾ-ಕೋಲಾ ಇಂಡಿಯಾ, ಡಾನ್ಫಾಸ್, ಫ್ಯೂಚರ್ ಸಮೂಹ, ಗ್ಲಾಕ್ಸೊ ಸ್ಮಿತ್ಕ್ಲೈನ್, ಈಸ್ ಫುಡ್ಸ್, ಐಟಿಸಿ, ಕಿಕೋಮನ್, ಲುಲು ಸಮೂಹ, ಮ್ಯಾಕ್ಕೈನ್, ಮೆಟ್ರೊ ಕ್ಯಾಶ್ ಅಂಡ್ಕ್ಯಾರಿ,ಮೊಂಡಲೀಜ್ ಇಂಟರ್ನ್ಯಾಷನಲ್, ನೆಸ್ಲೆ, ಒಎಸ್ಐ ಸಮೂಹ, ಪೆಪ್ಸಿಕೋ ಇಂಡಿಯಾ, ಸೀಲ್ಡ್ ಏರ್, ಶಾರಫ್ ಸಮೂಹ, ಸ್ಪಾರ್ ಇಂಟರ್ನ್ಯಾಷನಲ್, ದಿ ಹೈ ಸೆಲೆಸ್ಟಿಯಲ್ ಸಮೂಹ, ದಿ ಹರ್ಷೆ ಕಂಪನಿ, ಟ್ರೆಂಟ್ ಲಿಮಿಟೆಡ್ ಮತ್ತು ವಾಲ್ಮಾರ್ಟ್ ಇಂಡಿಯಾದ ಸಿಇಓಗಳು ಮತ್ತು ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಆಹಾರ ಸಂಸ್ಕರಣೆ ಕೈಗಾರಿಕೆಗಳ ಸಚಿವೆ ಶ್ರೀಮತಿ ಹರ್ಸಿಮ್ರತ್ ಕೌರ್ ಬಾದಲ್, ಆಹಾರ ಸಂಸ್ಕರಣೆ ಕೈಗಾರಿಕೆಗಳ ಖಾತೆ ರಾಜ್ಯ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಮತ್ತು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳೂ ಹಾಜರಿದ್ದರು.
ಸುಗಮವಾಗಿ ವಾಣಿಜ್ಯ ನಡೆಸುವ ಕುರಿತ ವಿಶ್ವಬ್ಯಾಂಕ್ ನ ಇತ್ತೀಚಿನ ವರದಿಯಲ್ಲಿ ಭಾರತದ ಶ್ರೇಣೀಕರಣದಲ್ಲಿ ಆಗಿರುವ ಸುಧಾರಣೆಗೆ ವಿವಿಧ ಸಿಇಓಗಳು ಶ್ಲಾಘನೆ ವ್ಯಕ್ತಪಡಿಸಿದರು. ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಮತ್ತು ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕೈಗೊಳ್ಳಲಾಗಿರುವ ಆರ್ಥಿಕ ಸುಧಾರಣೆಯ ಪ್ರಗತಿ ಮತ್ತು ವೇಗಕ್ಕಾಗಿ ಪ್ರಧಾನಮಂತ್ರಿಯವರ ದೃಷ್ಟಿಕೋನದಿಂದ ತಾವು ಪ್ರೇರಿತರಾಗಿರುವುದಾಗಿ ಹಲವು ಸಿಇಓಗಳು ತಿಳಿಸಿದರು. ಜಿಎಸ್ಟಿ ಮತ್ತು ಎಫ್.ಡಿ.ಐ. ಆಡಳಿತದ ಸುಧಾರೀಕರಣದಂಥ ಕಠಿಣ ಉಪಕ್ರಮ ಮತ್ತು ವಿನ್ಯಾಸಿತ ಸುಧಾರಣೆಗಾಗಿ ಅಭಿನಂದನೆ ಸಲ್ಲಿಸಿದರು.
ಕೃಷಿ ಉತ್ಪಾದನೆ ಹೆಚ್ಚಿಸಲು, ಆಹಾರ ಮತ್ತು ಪೌಷ್ಟಿಕತೆಯ ಭದ್ರತೆಗೆ, ಉದ್ಯೋಗ ಸೃಷ್ಟಿಗೆ ಆಹಾರ ಸಂಸ್ಕರಣಾ ವಲಯ ಪ್ರಮುಖವಾದದ್ದು ಮತ್ತು ಇದು ಕೃಷಿ ಉತ್ಪನ್ನಗಳಿಗೆ ಮೌಲ್ಯ ತರುತ್ತದೆ ಎಂಬುದನ್ನು ಪಾಲ್ಗೊಂಡವರು ಒತ್ತಿ ಹೇಳಿದರು. ಭಾರತದ ಆಹಾರ ಸಂಸ್ಕರಣೆ, ಕೃಷಿ, ಸಾರಿಗೆ ಮತ್ತು ಚಿಲ್ಲರೆ ಮಾರಾಟ ವಲಯದ ಸಮಗ್ರ ಪ್ರಗತಿಯ ಉಪಕ್ರಮ ಮತ್ತು ತಮ್ಮ ಕಾರ್ಯಕ್ರಮಗಳ ಕುರಿತಂತೆ ಸಿಇಓಗಳು ಸ್ಥೂಲ ಪ್ರಾತ್ಯಕ್ಷಿಕೆ ನೀಡಿದರು. ಸುಗ್ಗಿಯ ನಂತರದ ಮೂಲಸೌಕರ್ಯ ಬಲವರ್ಧನೆಯಲ್ಲಿರುವ ಅವಕಾಶಗಳ ಬಗ್ಗೆ ಅವರು ಆಸಕ್ತಿಯನ್ನು ತೋರಿದರು. ಭಾರತದ ಅಭಿವೃದ್ಧಿಯ ಗಾಥೆಯಲ್ಲಿ ತಮ್ಮ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.
ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಕ್ಕಾಗಿ ಸಿಇಓಗಳನ್ನು ಅಭಿನಂದಿಸಿದ ಪ್ರಧಾನಮಂತ್ರಿಯವರು, ಅವರ ಅಭಿಪ್ರಾಯಗಳು ಭಾರತದ ಬಗ್ಗೆ ಇರುವ ಅದ್ಭುತ ಉತ್ಸುಕತೆಯನ್ನು ತೋರುತ್ತದೆ ಎಂದರು. ಸಿಇಓಗಳ ಗಮನಾರ್ಹ ಸಲಹೆಗಳಿಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಸಿದರು.
ಕೃಷಿ ಉತ್ಪನ್ನ ಮತ್ತು ರೈತರ ಆದಾಯ ಹೆಚ್ಚಳಕ್ಕಾಗಿ ಪಾಲ್ಗೊಂಡವರು ಕೈಗೊಂಡ ಕ್ರಮಗಳನ್ನು ಪ್ರಧಾನಿ ಸ್ವಾಗತಿಸಿದರು. ಅದರಲ್ಲೂ ಭಾರತವು ಮಧ್ಯಮವರ್ಗದವರ ಏಳಿಗೆಗೆ ಮತ್ತು ಸರ್ಕಾರದ ನೀತಿ ಚಾಲಿತ ಉಪಕ್ರಮಗಳು ಆಹಾರ ಸಂಸ್ಕರಣೆ ಪರಿಸರ ವ್ಯವಸ್ಥೆಯ ಎಲ್ಲ ಬಾಧ್ಯಸ್ಥರಿಗೆ ಪರಸ್ಪರ ಗೆಲುವಿನ ಅವಕಾಶಗಳನ್ನು ತೆರೆಯುತ್ತಿದೆ ಎಂದು ತಿಳಿಸಿದರು. ರೈತರ ವೆಚ್ಚ ತಗ್ಗಿಸುವ ಮತ್ತು ಕೃಷಿ ಉತ್ಪನ್ನಗಳು ವ್ಯರ್ಥವಾಗುವುದರಿಂದಾಗಿ ನಷ್ಟ ನಿರ್ಮೂಲನೆ ಮಾಡುವ ಸರ್ಕಾರದ ಸಂಕಲ್ಪವನ್ನು ಪ್ರಧಾನಿ ಒತ್ತಿ ಹೇಳಿದರು. ಭಾರತದೊಂದಿಗೆ ಹೆಚ್ಚು ಫಲಪ್ರದ ಮತ್ತು ಆಳವಾದ ಕಾರ್ಯಕ್ರಮಕ್ಕಾಗಿ ಅವರು ಜಾಗತಿಕ ಸಿಇಓಗಳಿಗೆ ಆಹ್ವಾನ ನೀಡಿದರು.
ಇದಕ್ಕೂ ಮುನ್ನ ಶ್ರೀಮತಿ ಹರ್ಸಿಮ್ರತ್ ಕೌರ್ ಬಾದಲ್ ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ ಹೂಡಿಕೆಯ ಉತ್ತೇಜನಕ್ಕೆ ಸರ್ಕಾರದ ನೀತಿಗಳ ಕುರಿತು ಸಂಕ್ಷಿಪ್ತವಾಗಿ ಮಾತನಾಡಿದರು.