ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು,ಆಡಳಿತ ಪರವಾದ ಮತ್ತು ಸಕಾಲದ ಅನುಷ್ಠಾನ ಕುರಿತ ಐಸಿಟಿ ಆಧಾರಿತ ಬಹು ಮಾದರಿ ವೇದಿಕೆ ಪ್ರಗತಿಯಮೂಲಕ ಇಪ್ಪತ್ತಮೂರನೇಸಂವಾದದ ಅಧ್ಯಕ್ಷತೆ ವಹಿಸಿದ್ದರು.
ಪ್ರಗತಿಯ ಮೊದಲ ಇಪ್ಪತ್ತೆರೆಡು ಸಭೆಗಳಲ್ಲಿ, ಒಟ್ಟು 9.31 ಲಕ್ಷ ಕೋಟಿ ರೂಪಾಯಿ ಹೂಡಿಕೆಯ 200 ಯೋಜನೆಗಳ ಅವಲೋಕನ ಮಾಡಲಾಗಿದೆ. 17 ವಲಯಗಳ ಸಾರ್ವಜನಿಕ ಕುಂದುಕೊರತೆಯನ್ನೂ ಪರಿಹರಿಸಲಾಗಿದೆ.
ಇಂದು ನಡೆದ ಇಪ್ಪತ್ತಮೂರನೇ ಸಭೆಯಲ್ಲಿ ಪ್ರಧಾನಮಂತ್ರಿಯವರು, ಗ್ರಾಹಕರ ಕುಂದುಕೊರತೆಗಳ ನಿರ್ವಹಣೆ ಮತ್ತು ಪರಿಹಾರ ಕುರಿತಂತೆ ಪರಿಶೀಲನೆ ನಡೆಸಿದರು. ಗ್ರಾಹಕರ ಕುಂದುಕೊರತೆಗಳನ್ನು ತ್ವರಿತವಾಗಿ ಮತ್ತು ಸಮರ್ಥವಾಗಿ ವಿಲೇವಾರಿ ಮಾಡಲು ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಪ್ರಧಾನಿಯವರಿಗೆ ವಿವರಿಸಲಾಯಿತು. ದೊಡ್ಡ ಸಂಖ್ಯೆಯ ಕುಂದುಕೊರತೆಗಳ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕಾದ ಅಗತ್ಯಗಳ ಬಗ್ಗೆ ಒತ್ತಿ ಹೇಳಿ, ಇದರಿಂದ ಗ್ರಾಹಕರಿಗೆ ಪ್ರಯೋಜನವಾಗುತ್ತದೆ ಎಂದರು.
ಪ್ರಧಾನಮಂತ್ರಿಯವರು, ಉತ್ತರಖಂಡ, ಒಡಿಶಾ, ಪಶ್ಚಿಮ ಬಂಗಾಳ, ಕರ್ನಾಟಕ, ತಮಿಲುನಾಡು, ಕೇರಳ, ನಾಗಾಲ್ಯಾಂಡ್, ಅಸ್ಸಾಂ, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ವ್ಯಾಪ್ತಿಯ ರೈಲು, ರಸ್ತೆ, ಇಂಧನ ಮತ್ತು ಪುನರ್ ನವೀಕರಿಸಬಹುದಾದ ಇಂಧನ ವಲಯಗಳ ಪ್ರಗತಿ ಪರಿಶೀಲನೆ ನಡೆಸಿದರು. ಈ ಯೋಜನೆಗಳು ಒಟ್ಟಾರೆ 30,000 ಕೋಟಿ ರೂಪಾಯಿ ಮೌಲ್ಯದ್ದಾಗಿವೆ.
ಪ್ರಧಾನಮಂತ್ರಿಯವರು, ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ (ಪಿಎಂಕೆಕೆಕೆವೈ) ಜಾರಿಯ ಪ್ರಗತಿಯನ್ನೂ ಪರಿಶೀಲಿಸಿದರು. ಜಿಲ್ಲಾ ಖನಿಜ ಪ್ರತಿಷ್ಠಾನ (ಡಿಎಂಎಫ್.ಗಳು)ಗಳು ಪಡೆದುಕೊಳ್ಳುತ್ತಿರುವ ಹಣವನ್ನು ಈ ಜಿಲ್ಲೆಗಳು ಪ್ರಸ್ತುತ ಎದುರಿಸುತ್ತಿರುವ ಪ್ರಮುಖ ಅಭಿವೃದ್ಧಿ ಸಮಸ್ಯೆಗಳು ಅಥವಾ ಕೊರತೆಗಳನ್ನು ನಿವಾರಿಸುವತ್ತ ಗಮನಹರಿಸಿ ವ್ಯೂಹಾತ್ಮಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಇದನ್ನು ಗಮನಾರ್ಹ ಮಾರ್ಗದಲ್ಲಿ ಮಾಡಬೇಕೆಂದ ಅವರು, ಇದರಿಂದ ಭಾರತ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ 2022ರ ಹೊತ್ತಿಗೆ ಸ್ಫುಟವಾದ ಫಲಿತಾಂಶವನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದರು.