ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಐ.ಸಿ.ಟಿ.ಆಧರಿತ ಕ್ರಿಯಾಶೀಲ ಆಡಳಿತ ಮತ್ತು ಸಕಾಲದಲ್ಲಿ ಕಾರ್ಯಕ್ರಮ ಅನುಷ್ಟಾನಕ್ಕೆ ಸಂಬಂಧಿಸಿದ ಬಹು ಮಾದರಿ ವೇದಿಕೆಯಾದ ’ಪ್ರಗತಿ” ಯ 28 ನೇ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಪ್ರಧಾನಮಂತ್ರಿ ಅವರು ಆದಾಯ ತೆರಿಗೆಗೆ ಸಂಬಂಧಿಸಿದ ಕುಂದುಕೊರತೆಗಳ ಪ್ರಗತಿಯನ್ನು ಪರಿಶೀಲಿಸಿದರು. ಹಣಕಾಸು ಇಲಾಖೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಮಾಡಲಾದ ಪ್ರಗತಿಯ ಬಗ್ಗೆ ವಿವರಿಸಿದರು. ಪ್ರಧಾನಮಂತ್ರಿ ಅವರು ಎಲ್ಲ ವ್ಯವಸ್ಥೆಗಳೂ ತಂತ್ರಜ್ಞಾನ ನಿರ್ದೇಶಿತವಾಗಿರಬೇಕು ಮತ್ತು ಮಾನವ ಮಧ್ಯಪ್ರವೇಶ ಅತ್ಯಂತ ಕನಿಷ್ಟ ಪ್ರಮಾಣದಲ್ಲಿರಬೇಕು ಎಂಬುದನ್ನು ಪುನರುಚ್ಚರಿಸಿದರು. ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮದ ನಿಟ್ಟಿನಲ್ಲಿ ಆಗಿರುವ ಪ್ರಗತಿಯನ್ನು ಸಮೀಕ್ಷಿಸಿದ ಪ್ರಧಾನಿಯವರು ಜನರ ಅನುಕೂಲಕ್ಕಾಗಿ ಆದಾಯ ತೆರಿಗೆ ಇಲಾಖೆ ಕೈಗೊಂಡಿರುವ ಕ್ರಮಗಳನ್ನು ಎಲ್ಲಾ ತೆರಿಗೆ ಪಾವತಿದಾರರಿಗೂ ಸೂಕ್ತ ರೀತಿಯಲ್ಲಿ ತಿಳಿಸಬೇಕು ಎಂದರು.
ಇದುವರೆಗೆ ನಡೆದ 27 “ಪ್ರಗತಿ” ಸಭೆಗಳಲ್ಲಿ ಒಟ್ಟು 11.5 ಲಕ್ಷ ಕೋ.ರೂ.ಗಳಿಗೂ ಅಧಿಕ ಮೊತ್ತದ ಹೂಡಿಕೆಯ ಯೋಜನೆಗಳ ಪರಾಮರ್ಶೆ ನಡೆಸಲಾಗಿದೆ. ವಿವಿಧ ವಲಯಗಳ ಸಾರ್ವಜನಿಕ ಕುಂದುಕೊರತೆಗಳ ಪರಿಹಾರದ ಬಗ್ಗೆಯೂ ಪರಾಮರ್ಶೆ ನಡೆಸಲಾಗಿದೆ.
ಇಂದು 28 ನೇ ಸಭೆಯಲ್ಲಿ ಪ್ರಧಾನ ಮಂತ್ರಿ ಅವರು ರೈಲ್ವೆ, ರಸ್ತೆ ಮತ್ತು ಪೆಟ್ರೋಲಿಯಂ ವಲಯಗಳ ಪ್ರಮುಖ ಮೂಲಸೌಕರ್ಯ ಯೋಜನೆಗಳ ಬಗ್ಗೆ ಪರಾಮರ್ಶೆ ನಡೆಸಿದರು. ಆಂದ್ರಪ್ರದೇಶ, ಅಸ್ಸಾಂ, ಗುಜರಾತ್, ದಿಲ್ಲಿ, ಹರ್ಯಾಣಾ, ತಮಿಳುನಾಡು, ಒಡಿಶಾ , ಕರ್ನಾಟಕ, ಪಂಜಾಬ್, ಉತ್ತರಪ್ರದೇಶ ಮತ್ತು ಉತ್ತರಾಖಂಡವೂ ಸೇರಿದಂತೆ ಹಲವು ರಾಜ್ಯಗಳ ವ್ಯಾಪ್ತಿಯಲ್ಲಿ ಈ ಯೋಜನೆಗಳು ವಿಸ್ತರಿಸಿವೆ.
ಪ್ರಧಾನ ಮಂತ್ರಿಗಳು ಆಯುಷ್ಮಾನ್ ಭಾರತ ಅಡಿಯಲ್ಲಿ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅನುಷ್ಠಾನವನ್ನು ಪರಿಶೀಲಿಸಿದರು. ಪ್ರಧಾನಮಂತ್ರಿ ಜನ ಔಷಧಿ ಪರಿಯೋಜನೆಯ ಪ್ರಗತಿಯನ್ನೂ ಅವರು ಪರಿಶೀಲಿಸಿದರು.