ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು,ಆಡಳಿತ ಪರವಾದ ಮತ್ತು ಸಕಾಲದ ಅನುಷ್ಠಾನ ಕುರಿತ ಐಸಿಟಿ ಆಧಾರಿತ ಬಹು ಮಾದರಿ ವೇದಿಕೆ ಪ್ರಗತಿಯ ಮೂಲಕ ಇಪ್ಪತ್ತೊಂದನೇಸಂವಾದದ ಅಧ್ಯಕ್ಷತೆ ವಹಿಸಿದ್ದರು.
ಮೊದಲ ಇಪ್ಪತ್ತು ಪ್ರಗತಿ ಸಭೆಗಳಲ್ಲಿ ಒಟ್ಟು 8.79 ಲಕ್ಷ ಕೋಟಿ ರೂಪಾಯಿ ಹೂಡಿಕೆಯ ಒಟ್ಟಾರೆ 183 ಯೋಜನೆಗಳ ಸಮಗ್ರ ಪರಾಮರ್ಶೆ ನಡೆಸಲಾಗಿದೆ. 17 ವಲಯಗಳ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಕುರಿತಂತೆಯೂ ಪರಾಮರ್ಶಿಸಲಾಗಿದೆ.
ಇಂದು ಇಪ್ಪತ್ತೊಂದನೆಯ ಸಭೆಯಲ್ಲಿ, ಪ್ರಧಾನಮಂತ್ರಿಯವರು ಪೇಟೆಂಟ್ ಗಳು ಮತ್ತು ಟ್ರೇಡ್ ಮಾರ್ಕ್ ಗೆ ಸಂಬಂಧಿಸಿದ ಕುಂದುಕೊರತೆಗಳ ನಿರ್ವಹಣೆ ಪರಿಹಾರ ಕುರಿತಂತೆ ಪರಿಶೀಲನೆ ನಡೆಸಿದರು. ಕಾರ್ಯಕ್ಷಮತೆಯಲ್ಲಿನ ಸುಧಾರಣೆಯನ್ನು ಗುರುತಿಸಿದ ಅವರು, ಸಂಬಂಧಿತ ಅಧಿಕಾರಿಗಳಿಗೆ ಪೇಟೆಂಟ್ ಮತ್ತು ಟ್ರೇಡ್ ಮಾರ್ಕ್ ವಿಸ್ತರಣೆ ನಿಟ್ಟಿನಲ್ಲಿ ಶ್ರಮಿಸುವಂತೆ ಸೂಚಿಸಿದರು. ಹೆಚ್ಚಿನ ಮಾನವಶಕ್ತಿ ಸೇರಿದಂತೆ ಪೇಟೆಂಟ್ ಮತ್ತು ಟ್ರೇಡ್ ಮಾರ್ಕ್ ನೀಡಿಕೆಯಲ್ಲಿ ತ್ವರಿತ ಕ್ರಮಗಳ ಕುರಿತಂತೆ ಅಧಿಕಾರಿಗಳು ಪ್ರಧಾನಿಯವರಿಗೆ ವಿವರಿಸಿದರು. ಪ್ರಕ್ರಿಯೆಯನ್ನು ಮುಖ್ಯವಾಹಿನಿಗೆ ತರಲು ಮತ್ತು ಜಾಗತಿಕ ಗುಣಮಟ್ಟವನ್ನು ತಲುಪುವ ನಿಟ್ಟಿನಲ್ಲಿ ಲಭ್ಯವಿರುವ ಇತ್ತೀಚಿನ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಬೇಕಾದ ಅಗತ್ಯವನ್ನು ಪ್ರಧಾನಿ ಪ್ರತಿಪಾದಿಸಿದರು.
ಪ್ರಧಾನಮಂತ್ರಿಯವರು ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಹರಿಯಾಣ, ರಾಜಾಸ್ಥಾನ, ಮಹಾರಾಷ್ಟ್ರ, ಉತ್ತರಾಖಂಡ್, ಪಂಜಾಬ್, ಪಶ್ಚಿಮ ಬಂಗಾಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಬಿಹಾರ್, ಒಡಿಶಾ, ತೆಲಂಗಾಣ ಮತ್ತು ಕೇರಳ ರಾಜ್ಯಗಳಲ್ಲಿ ವಿಸ್ತರಿಸಿರುವ ರೈಲ್ವೆ, ರಸ್ತೆ, ಇಂಧನ ಮತ್ತು ತೈಲ ಕೊಳವೆ ಮಾರ್ಗ ಹಾಗೂ ಆರೋಗ್ಯ ವಲಯದ ಸುಮಾರು 56 ಸಾವಿರ ಕೋಟಿ ರೂಪಾಯಿ ಮೊತ್ತದ ಮೂಲ ಸೌಕರ್ಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಇಂದು ಪರಿಶೀಲಿಸಲಾದ ಯೋಜನೆಗಳಲ್ಲಿ, ದೆಹಲಿ ಮುಂಬೈ ಕೈಗಾರಿಕಾ ಕಾರಿಡಾರ್, ಆಂಧ್ರಪ್ರದೇಶದ ಮಂಗಳಗಿರಿ, ಪಶ್ಚಿಮ ಬಂಗಾಳದ ಕಲ್ಯಾಣಿ, ಮಹಾರಾಷ್ಟ್ರದ ನಾಗಪುರ ಮತ್ತು ಉತ್ತರ ಪ್ರದೇಶದ ಗೋರಖ್ಪುರಗಳಲ್ಲಿ ನಾಲ್ಕು ಹೊಸ ಏಮ್ಸ್ ನಿರ್ಮಾಣ ಸೇರಿದ್ದವು.
ಪ್ರಧಾನಮಂತ್ರಿಯವರು, ಸ್ಮಾರ್ಟ್ ಸಿಟಿ ಅಭಿಯಾನದ ಪ್ರಗತಿಯನ್ನೂ ಪರಿಶೀಲಿಸಿದರು. ಸ್ಪರ್ಧಾ ಮಾರ್ಗದಲ್ಲಿ ನಗರಗಳ ಪಾಲ್ಗೊಳ್ಳುವಿಕೆಗೆ ಅವರು ಪ್ರಶಂಸೆ ವ್ಯಕ್ತಪಡಿಸಿದರು. ಈಗ ಎಲ್ಲರ ಮುಂದೆ ಇರುವ ಸವಾಲು 90 ಗುರುತಿಸಲಾದ ನಗರಗಳಲ್ಲಿ ಉತ್ತಮ ಗುಣಮಟ್ಟದಲ್ಲಿ ಯೋಜನೆ ಅನುಷ್ಠಾನ ಮತ್ತು ತ್ವರಿತವಾಗಿ ಪೂರ್ಣಗೊಳಿಸುವುದನ್ನು ಖಾತ್ರಿ ಪಡಿಸುವುದಾಗಿದೆ ಎಂದರು.
ಅರಣ್ಯ ಹಕ್ಕು ಕಾಯಿದೆ ಪರಾಮರ್ಶೆ ನಡೆಸಿದ ಪ್ರಧಾನಿ, ಬುಡಕಟ್ಟು ಸಮುದಾಯದ ಹಕ್ಕು ಪತ್ತೆಗೆ ಮತ್ತು ಕ್ಲೇಮ್ ಗಳನ್ನು ಶೀಘ್ರ ವಿಲೆವಾರಿ ಮಾಡಲು ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದರು.
ಜಿಎಸ್ಟಿಗೆ ಸಂಬಂಧಿಸಿದಂತೆ ಆತಂಕಗಳು ಆಧಾರರಹಿತ ಎಂಬುದು ಸಾಬೀತಾಗಿವೆ ಎಂದ ಪ್ರಧಾನಿಯವರು, ಸುಗಮವಾಗಿ ವಹಿವಾಟು ನಡೆಯುತ್ತಿದೆ ಎಂದರು. ಜಿಎಸ್ಟಿ ಅಡಿಯಲ್ಲಿ ನೋಂದಣಿಯನ್ನು ಹೆಚ್ಚು ಉತ್ತೇಜಿಸುವಂತೆ ಎಲ್ಲ ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿದ ಅವರು, ಒಂದು ತಿಂಗಳೊಳಗೆ ಈ ನಿಟ್ಟಿನಲ್ಲಿ ದೊಡ್ಡ ಏರಿಕೆ ದಾಖಲಿಸುವಂತೆ ತಿಳಿಸಿದರು.
ಸರ್ಕಾರದ ಇ ಮಾರುಕಟ್ಟೆ (ಜಿಇಎಂ) ಕುರಿತಂತೆ ಮಾತನಾಡಿದ ಅವರು, ಪೋರ್ಟಲ್ ನಿಂದ ಪಾರದರ್ಶಕತೆ ಸುಧಾರಣೆ ಆಗಿದೆ ಮತ್ತು ಅದು ಅನುಪಯುಕ್ತ ವೆಚ್ಚ ತಗ್ಗಿಸಿದೆ ಎಂದರು. ಸರ್ಕಾರದ ದಾಸ್ತಿನಿನಲ್ಲಿ ಜಿಇಎಂಗೆ ಆದ್ಯತೆ ನೀಡುವಂತೆ ಎಲ್ಲ ರಾಜ್ಯಗಳ ಮುಖ್ಯಕಾರ್ಯದರ್ಶಿಗಳಿಗೆ ಅವರು ಸೂಚಿಸಿದರು.