ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಬುಧವಾರ ಭಾರತ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ 80ಕ್ಕೂ ಹೆಚ್ಚು ಜಂಟಿ ಕಾರ್ಯದರ್ಶಿಗಳು ಹಾಗೂ ಹೆಚ್ಚುವರಿ ಕಾರ್ಯದರ್ಶಿಗಳನ್ನು ಭೇಟಿ ಮಾಡಿ, ಸಂವಾದ ನಡೆಸಿದರು. ಇಂಥ ಐದು ಸಂವಾದಗಳಲ್ಲಿ ಇದು ನಾಲ್ಕನೆಯದಾಗಿದೆ.
ಈ ಸಂವಾದದ ವೇಳೆ, ಅಧಿಕಾರಿಗಳು ನಾವಿನ್ಯತೆ ಮತ್ತು ಆಡಳಿತದಲ್ಲಿ ತಂಡ ಕಾರ್ಯನಿರ್ವಹಣೆ, ಆರೋಗ್ಯ ಸೇವೆ, ಆರೋಗ್ಯ ಶಿಕ್ಷಣ, ಕೃಷಿ, ಜಲ ಸಂಪನ್ಮೂಲ, ಇ-ಆಡಳಿತ, ತೆರಿಗೆ ಆಡಳಿತ ಮತ್ತು ಜಿಎಸ್ಟಿ, ಸುಲಭವಾಗಿ ವ್ಯಾಪಾರ ನಡೆಸುವುದು, ಕುಂದುಕೊರತೆ ನಿವಾರಣೆ ಮತ್ತು ಮಕ್ಕಳ ಹಕ್ಕು ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ಅನುಭವವನ್ನು ಹಂಚಿಕೊಂಡರು.
ಪ್ರಧಾನಮಂತ್ರಿಯವರು, ಆಡಳಿತದ ಪ್ರಕ್ರಿಯೆಯನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಶ್ರಮಿಸುವಂತೆ ಅಧಿಕಾರಿಗಳಿಗೆ ಆಗ್ರಹಿಸಿದರು. ತಂಡಸ್ಫೂರ್ತಿಯನ್ನು ಅಭಿವೃದ್ಧಿಪಡಿಸಲು ಮಾನವಸ್ಪರ್ಶದ ಅತ್ಯಗತ್ಯ, ಇದು ಉತ್ತಮ ಸಂಘಟಿತ ಫಲಿತಾಂಶ ನೀಡುತ್ತದೆ ಎಂದು ಪ್ರಧಾನಿ ಹೇಳಿದರು.
ಪ್ರಸ್ತುತ ಭಾರತದ ಪರವಾಗಿ ಇರುವ ಧನಾತ್ಮಕ ಜಾಗತಿಕ ಪರಿಸರದ ಬಗ್ಗೆ ಮುಖ್ಯವಾಗಿ ಪ್ರಸ್ತಾಪಿಸಿದ ಪ್ರದಾನಿ, 2022ರ ಹೊತ್ತಿಗೆ ನವ ಭಾರತ ನಿರ್ಮಾಣಕ್ಕೆ ಸ್ಪಷ್ಟ ಉದ್ದೇಶದೊಂದಿಗೆ ಮುಂದೆವರಿಯುವಂತೆ ಸೂಚಿಸಿದರು.