ನಾನು ಆಗಸ್ಟ್ 22-26ರ ಅವಧಿಯಲ್ಲಿ ಫ್ರಾನ್ಸ್, ಯುಎಇ ಮತ್ತು ಬಹ್ರೇನ್‌ಗೆ ಭೇಟಿ ನೀಡಲಿದ್ದೇನೆ.
ಫ್ರಾನ್ಸ್‌ಗೆ ನನ್ನ ಭೇಟಿಯು ನಮ್ಮ ಎರಡು ದೇಶಗಳು ಗಾಢವಾಗಿ ಗೌರವಿಸುವ ಮತ್ತು ಬಲವಾದ ಕಾರ್ಯತಂತ್ರದ ಸಹಭಾಗಿತ್ವವನ್ನು ಪ್ರತಿಬಿಂಬಿಸುತ್ತದೆ. ಆಗಸ್ಟ್ 22-23ರಂದು, ನಾನು ಫ್ರಾನ್ಸ್‌ನಲ್ಲಿ ದ್ವಿಪಕ್ಷೀಯ ಸಭೆಗಳನ್ನು ನಡೆಸುತ್ತಿದ್ದೇನೆ. ಅದರಲ್ಲಿ ಅಧ್ಯಕ್ಷ ಮ್ಯಾಕ್ರನ್‌ರೊಂದಿಗಿನ ಶೃಂಗಸಭೆ ಸಂವಾದ ಮತ್ತು ಪ್ರಧಾನಿ ಫಿಲಿಪ್ ಅವರೊಂದಿಗಿನ ಸಭೆಗಳು ಸೇರಿವೆ. ನಾನು ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸುತ್ತೇನೆ. 1950 ಮತ್ತು 1960 ರ ದಶಕಗಳಲ್ಲಿ ಫ್ರಾನ್ಸ್ ನಲ್ಲಿ ಸಂಭವಿಸಿದ ಎರಡು ಏರ್ ಇಂಡಿಯಾ ಅಪಘಾತಗಳ ಭಾರತೀಯ ಸಂತ್ರಸ್ತರಿಗೆ ಸ್ಮಾರಕವನ್ನು ಲೋಕಾರ್ಪಣೆ ಮಾಡಲಿದ್ದೇನೆ.
ನಂತರ, ಆಗಸ್ಟ್ 25-26ರಂದು, ಅಧ್ಯಕ್ಷ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ಜಿ 7 ಶೃಂಗಸಭೆಯಲ್ಲಿ ಬಿಯರಿಟ್ಜ್ ಪಾಲುದಾರನಾಗಿ ಪರಿಸರ, ಹವಾಮಾನ, ಸಾಗರಗಳು ಮತ್ತು ಡಿಜಿಟಲ್ ರೂಪಾಂತರ ಕುರಿತಾದ ಅಧಿವೇಶನಗಳಲ್ಲಿ ನಾನು ಭಾಗವಹಿಸುತ್ತೇನೆ.
ಭಾರತ ಮತ್ತು ಫ್ರಾನ್ಸ್ ಅತ್ಯುತ್ತಮ ದ್ವಿಪಕ್ಷೀಯ ಸಂಬಂಧಗಳನ್ನು ಹೊಂದಿವೆ. ಇದು ಎರಡೂ ರಾಷ್ಟ್ರಗಳಿಗೆ ಮತ್ತು ಪ್ರಪಂಚಕ್ಕೆ ಹೆಚ್ಚಿನ ಶಾಂತಿ ಮತ್ತು ಸಮೃದ್ಧಿಯನ್ನು ವೃದ್ಧಿಸಲಿದೆ. ನಮ್ಮ ಬಲವಾದ ಕಾರ್ಯತಂತ್ರ ಮತ್ತು ಆರ್ಥಿಕ ಸಹಭಾಗಿತ್ವವು ಭಯೋತ್ಪಾದನೆ, ಹವಾಮಾನ ಬದಲಾವಣೆ ಮುಂತಾದ ಪ್ರಮುಖ ಜಾಗತಿಕ ಕಾಳಜಿಗಳ ಹಂಚಿಕೆಯ ದೃಷ್ಟಿಕೋನದಿಂದ ಪೂರಕವಾಗಿದೆ. ಈ ಭೇಟಿ ಪರಸ್ಪರ ಸಮೃದ್ಧಿ, ಶಾಂತಿ ಮತ್ತು ಪ್ರಗತಿಗಾಗಿ ಫ್ರಾನ್ಸ್‌ನೊಂದಿಗಿನ ನಮ್ಮ ದೀರ್ಘಕಾಲದ ಮತ್ತು ಮೌಲ್ಯಯುತ ಸ್ನೇಹವನ್ನು ಮತ್ತಷ್ಟು ಉತ್ತೇಜಿಸುತ್ತದೆ ಎಂದು ನನಗೆ ವಿಶ್ವಾಸವಿದೆ. .
ಆಗಸ್ಟ್ 23-24ರಂದು ಯುನೈಟೆಡ್ ಅರಬ್ ಎಮಿರೇಟ್ಸ್ ಭೇಟಿಯ ಸಮಯದಲ್ಲಿ, ಅಬುಧಾಬಿಯ ರಾಜ ರಾಜಕುಮಾರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ಹರವು ಮತ್ತು ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚಿಸಲು ನಾನು ಕಾತುರನಾಗಿದ್ದೇನೆ.
ಮಹಾತ್ಮ ಗಾಂಧಿಯವರ 150 ನೇ ಜನ್ಮದಿನಾಚರಣೆಯ ನಿಮಿತ್ತದ ಸ್ಟಾಂಪ್ ಅನ್ನು ಗೌರವಾನ್ವಿತ ರಾಜಕುಮಾರರೊಂದಿಗೆ ಬಿಡುಗಡೆ ಮಾಡಲು ನಾನು ಎದುರು ನೋಡುತ್ತೇನೆ. ಈ ಭೇಟಿಯ ಸಮಯದಲ್ಲಿ ಯುಎಇ ಸರ್ಕಾರವು ನೀಡುವ ಅತ್ಯುನ್ನತ ನಾಗರಿಕ ಗೌರವವಾದ ‘ಆರ್ಡರ್ ಆಫ್ ಜಾಯೆದ್’ಅನ್ನು ಸ್ವೀಕರಿಸುವುದು ನನಗೆ ಗೌರವವೆನಿಸುತ್ತಿದೆ. ವಿದೇಶದಲ್ಲಿ ನಗದು ರಹಿತ ವಹಿವಾಟಿನ ಜಾಲವನ್ನು ವಿಸ್ತರಿಸಲು ನಾನು ಔಪಚಾರಿಕವಾಗಿ ರುಪೇ ಕಾರ್ಡ್ ಗೆ ಚಾಲನೆ ನೀಡಲಿದ್ದೇನೆ.
ಭಾರತ ಮತ್ತು ಯುಎಇ ನಡುವೆ ಆಗಾಗ್ಗೆ ನಡೆಯುವ ಉನ್ನತ ಮಟ್ಟದ ಸಂವಹನಗಳು ನಮ್ಮ ಉತ್ತಮ ಸಂಬಂಧಗಳಿಗೆ ಸಾಕ್ಷಿಯಾಗಿದೆ. ಯುಎಇ ನಮ್ಮ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು ಭಾರತಕ್ಕೆ ಕಚ್ಚಾ ತೈಲ ರಫ್ತು ಮಾಡುವ ನಾಲ್ಕನೇ ಅತಿದೊಡ್ಡ ದೇಶವಾಗಿದೆ. ಈ ಸಂಬಂಧಗಳ ಗುಣಾತ್ಮಕ ವರ್ಧನೆಯು ನಮ್ಮ ಅಗ್ರಗಣ್ಯ ವಿದೇಶಾಂಗ ನೀತಿಗಳಲ್ಲಿ ಒಂದಾಗಿದೆ. ಈ ಭೇಟಿ ಯುಎಇಯೊಂದಿಗಿನ ನಮ್ಮ ಬಹುಮುಖಿ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತದೆ.
ನಾನು ಆಗಸ್ಟ್ 24-25 ರಂದು ಬಹ್ರೇನ್ ಗೆ ಭೇಟಿ ನೀಡಲಿದ್ದೇನೆ. ಇದು ಭಾರತದ ಪ್ರಧಾನಿಯೊಬ್ಬರು ಬಹ್ರೇನ್ ಗೆ ನೀಡುತ್ತಿರುವ ಮೊದಲ ಭೇಟಿಯಾಗಲಿದೆ. ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸುವ ಮತ್ತು ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಪ್ರಧಾನಿ ರಾಜಕುಮಾರ ಶೇಖ್ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ಅವರೊಂದಿಗೆ ಚರ್ಚಿಸಲು ನಾನು ಎದುರು ನೋಡುತ್ತಿದ್ದೇನೆ. ನಾನು ಬಹ್ರೇನ್ ನ ಗೌರವಾನ್ವಿತ ದೊರೆ ಶೇಖ್ ಹಮದ್ ಬಿನ್ ಇಸಾ ಅಲ್ ಖಲೀಫಾ ಮತ್ತು ಇತರ ನಾಯಕರನ್ನು ಭೇಟಿಯಾಗುತ್ತಿದ್ದೇನೆ.
ಭಾರತೀಯ ವಲಸೆಗಾರರೊಂದಿಗೆ ಸಂವಾದ ನಡೆಸುವ ಅವಕಾಶವನ್ನು ನಾನು ಪಡೆದಿದ್ದೇನೆ. ಜನ್ಮಾಷ್ಟಮಿಯ ಶುಭ ಸಂದರ್ಭದ ಹಿನ್ನೆಲೆಯಲ್ಲಿ ಗಲ್ಫ್ ಪ್ರದೇಶದಲ್ಲಿ ಅತ್ಯಂತ ಹಳೆಯದಾದ ಶ್ರೀನಾಥ ದೇವಾಲಯದ ಪುನರಾಭಿವೃದ್ಧಿಯ ಔಪಚಾರಿಕ ಆರಂಭದಲ್ಲಿ ಹಾಜರಾಗಲು ನಾನು ಪುಣ್ಯ ಮಾಡಿದ್ದೇನೆ. ಈ ಭೇಟಿಯು ಹಲವಾರು ಕ್ಷೇತ್ರಗಳಲ್ಲಿ ನಮ್ಮ ಸಂಬಂಧವನ್ನು ಇನ್ನಷ್ಟು ಗಾಢವಾಗಿಸುತ್ತದೆ ಎಂದು ನನಗೆ ವಿಶ್ವಾಸವಿದೆ.