ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ನೀತಿ ಆಯೋಗದ ಆಡಳಿತ ಮಂಡಳಿಯ ನಾಲ್ಕನೇ ಸಭೆಯಲ್ಲಿ ಸಮಾರೋಪ ಭಾಷಣ ಮಾಡಿದರು.
ರಚನಾತ್ಮಕವಾದ ಚರ್ಚೆ ಮತ್ತು ವಿವಿಧ ಮುಖ್ಯಮಂತ್ರಿಗಳು ನೀಡಿದ ಸಲಹೆಗಳನ್ನು ಸ್ವಾಗತಿಸಿದ ಪ್ರಧಾನಮಂತ್ರಿ, ಈ ಸಲಹೆಗಳನ್ನು ನಿರ್ಣಯ ಮಾಡುವ ಸಂದರ್ಭದಲ್ಲಿ ಗಂಭೀರವಾಗಿ ಪರಿಗಣಿಸಲಾಗುವುದು ಎಂಬ ಭರವಸೆ ನೀಡಿದರು. ರಾಜ್ಯಗಳು ಸೂಚಿಸಿರುವ ಕ್ರಿಯಾತ್ಮಕ ಅಂಶಗಳ ಕುರಿತು ಅವುಗಳೊಂದಿಗೆ ಮೂರು ತಿಂಗಳುಗಳ ಒಳಗಾಗಿ ಮುಂದುವರಿಸುವಂತೆ ನೀತಿ ಆಯೋಗಕ್ಕೆ ಅವರು ಸೂಚಿಸಿದರು.
ನೀತಿ ಆಯೋಗ ಗುರುತಿಸಿರುವ 115 ಆಕಾಂಕ್ಷೆಯ ಜಿಲ್ಲೆಗಳ ರೀತಿಯಲ್ಲೇ, ರಾಜ್ಯಗಳು ಕೂಡ ಶೇಕಡ 20ರಷ್ಟು ಬ್ಲಾಕ್ ಗಳನ್ನು ತಮ್ಮದೇ ಮಾನದಂಡಗಳನ್ನು ಅನುಸರಿಸಿ ಆಕಾಂಕ್ಷೆಯ ಬ್ಲಾಕ್ ಗಳಾಗಿ ಗುರುತಿಸುವಂತೆ ಅವರು ಹೇಳಿದರು.
ಮುಖ್ಯಮಂತ್ರಿಗಳು ಪ್ರಸ್ತಾಪಿಸಿದ ಪರಿಸರ ವಿಚಾರಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಗಳು, ಬೀದಿ ದೀಪಗಳಿಗೆ, ಅಧಿಕೃತ ನಿವಾಸಗಳಲ್ಲಿ ಮತ್ತು ಸರ್ಕಾರಿ ಕಟ್ಟಡಗಳಲ್ಲಿ ಎಲ್.ಇ.ಡಿ. ಬಲ್ಬ್ ಬಳಸುವಂತೆ ಎಲ್ಲ ರಾಜ್ಯಗಳಿಗೆ ಮನವಿ ಮಾಡಿದರು. ಇದು ನಿರ್ದಿಷ್ಟ ಕಾಲಮಿತಿಯೊಳಗೆ ಅನುಷ್ಠಾನಗೊಳ್ಳಬೇಕು ಎಂದೂ ಅವರು ಸಲಹೆ ಮಾಡಿದರು.
ವಿವಿಧ ಮುಖ್ಯಮಂತ್ರಿಗಳು ಜಲ ಸಂರಕ್ಷಣೆ, ಕೃಷಿ, ಮನ್ರೇಗಾ ಇತ್ಯಾದಿ ವಿಚಾರಗಳಲ್ಲಿ ನೀಡಿದ ಸಲಹೆಗಳನ್ನೂ ಅವರು ಪ್ರಶಂಸಿಸಿದರು.
ಬಿತ್ತನೆಗೂ ಮುನ್ನ ಮತ್ತು ಸುಗ್ಗಿಯ ನಂತರದ ಹಂತಗಳೂ ಸೇರಿದಂತೆ “ಕೃಷಿ ಮತ್ತು ಮನ್ರೇಗಾ’ ಎರಡು ವಿಷಯಗಳ ಕುರಿತಂತೆ ಸಹಯೋಗದ ನೀತಿ ವಿಧಾನಗಳಿಗಾಗಿ ಒಗ್ಗೂಡಿ ಶ್ರಮಿಸಿ ಶಿಫಾರಸು ಮಾಡುವಂತೆ ಮಧ್ಯಪ್ರದೇಶ, ಬಿಹಾರ, ಸಿಕ್ಕಿಂ, ಗುಜರಾತ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿಗಳಿಗೆ ಪ್ರಧಾನಿ ಕರೆ ನೀಡಿದರು.
‘ಸಾಲಿನಲ್ಲಿರುವ ಕೊನೆಯ ವ್ಯಕ್ತಿ’ಯನ್ನು ಗುರುತಿಸುವುದು ಅತ್ಯಂತ ಪ್ರಮುಖವಾದ್ದು ಎಂದು ಹೇಳಿದ ಪ್ರಧಾನಮಂತ್ರಿಯವರು, ಹೀಗೆ ಮಾಡಿದಾಗ, ಸರ್ಕಾರದ ಪ್ರಯೋಜನ ಅವರನ್ನು ತಲುಪುತ್ತದೆ ಎಂದರು. ಅದೇ ರೀತಿ, ಸಾಮಾಜಿಕ ನ್ಯಾಯ ಸರ್ಕಾರದ ಆಡಳಿತದ ಮಹತ್ವದ ಉದ್ದೇಶವಾಗಿದೆ ಎಂದರು. ಈ ಪವಿತ್ರ ಉದ್ದೇಶಕ್ಕೆ ಆಪ್ತವಾದ ಸಹಯೋಗ ಮತ್ತು ಸತತ ನಿಗಾದ ಅಗತ್ಯವಿದೆ ಎಂದರು.
115 ಆಕಾಂಕ್ಷೆಯ ಜಿಲ್ಲೆಗಳ 45 ಸಾವಿರ ಹೆಚ್ಚುವರಿ ಗ್ರಾಮಗಳಿಗೆ 2018ರ ಆಗಸ್ಟ್ 15ರೊಳಗಾಗಿ ಏಳು ಪ್ರಮುಖ ಯೋಜನೆಗಳ ಸಾರ್ವತ್ರಿಕ ವ್ಯಾಪ್ತಿಯನ್ನು ಒದಗಿಸುವ ಕೇಂದ್ರ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.
ಕೇಂದ್ರ ಸರ್ಕಾರದ ನಿರ್ದೇಶಕ ತತ್ವವಾದ ಸಬ್ ಕ ಸಾತ್ ಸಬ್ ಕ ವಿಕಾಸ್ ಕುರಿತು ವಿವರ ನೀಡಿದ ಪ್ರಧಾನಿ, ಕೇಂದ್ರ ಸರ್ಕಾರದ ಯೋಜನೆಗಳು ಕೆಲವೇ ಜನರಿಗೆ ಅಥವಾ ಕೆಲವೇ ಧರ್ಮಕ್ಕೆ ಸೀಮಿತವಾಗಿಲ್ಲ, ಬದಲಾಗಿ ಸಮತೋಲಿತ ಮಾರ್ಗದಲ್ಲಿ ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ತಲುಪುತ್ತಿದೆ ಎಂದರು.
ದೇಶದ ಎಲ್ಲ ಹಳ್ಳಿಗಳಿಗೂ ಈಗ ವಿದ್ಯುದ್ದೀಕರಣಗೊಂಡಿವೆ ಮತ್ತು ಸೌಭಾಗ್ಯ ಯೋಜನೆಯ ಅಡಿಯಲ್ಲಿ 4 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಶೇ.40ಕ್ಕಿಂತ ಕಡಿಮೆ ಇದದ ಗ್ರಾಮೀಣ ನೈರ್ಮಲ್ಯ ವ್ಯಾಪ್ತಿ ಕಳೆದ ನಾಲ್ಕು ವರ್ಷಗಳಲ್ಲಿ ಶೇ.85ಕ್ಕೆ ಏರಿಕೆಯಾಗಿದೆ ಎಂದು ಅವರು ಹೇಳಿದರು. ಜನ್ ಧನ್ ಯೋಜನೆ ಜಾರಿಯ ಬಳಿಕ ದೇಶದ ಎಲ್ಲ ಜನರಿಗೂ ಬ್ಯಾಂಕಿಂಗ್ ವ್ಯವಸ್ಥೆಯ ಸಂಪರ್ಕ ದೊರೆತಿದೆ. ಅದೇ ರೀತಿ ಉಜ್ವಲ ಯೋಜನೆ ಅಡುಗೆ ಅನಿಲ ಒದಗಿಸುತ್ತಿದೆ ಮತ್ತು ಇಂದ್ರಧನುಷ್ ಅಬಿಯಾನ ಸಾರ್ವತ್ರಿಕ ರೋಗನಿರೋಧಕತೆಯತ್ತ ಶ್ರಮಿಸುತ್ತಿದೆ ಎಂದರು. 2022ರ ಹೊತ್ತಿಗೆ ಸರ್ವರಿಗೂ ಸೂರು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶ್ರಮಿಸುತ್ತಿದೆ ಎಂದರು.
ಈ ಉದ್ದೇಶದ ಈಡೇರಿಕೆಗಾಗಿ ಬಡಜನರ ಕಲ್ಯಾಣಕ್ಕಾಗಿ ಇರುವ ಯೋಜನೆಗಳು ಪ್ರತಿಶತ 100ರಷ್ಟು ಜಾರಿಯಾಗಲು ಎಲ್ಲ ಮುಕ್ಯಮಂತ್ರಿಗಳೂ ಕೊಡುಗೆ ನೀಡುವಂತೆ ಪ್ರಧಾನಿ ಕರೆ ನೀಡಿದರು.
ಈ ಕಲ್ಯಾಣ ಯೋಜನೆಗಳ ಜಾರಿಯು ಜನರ ಜೀವನದಲ್ಲಿ ಸ್ವಭಾವಿಕ ಬದಲಾವಣೆ ತಂದಿದೆ ಎಂದು ಪ್ರಧಾನಿ ಹೇಳಿದರು. ಈ ನಿಟ್ಟಿನಲ್ಲಿ, ಬೇವು ಲೇಪಿತ ಯೂರಿಯಾ, ಉಜ್ವಲ ಯೋಜನೆ, ಜನ್ ಧನ್ ಖಾತೆ ಮತ್ತು ರುಪೇ ಡೆಬಿಟ್ ಕಾರ್ಡ್ ಗಳ ನ್ನು ಉಲ್ಲೇಖಿಸಿದರು. ಈ ಯೋಜನೆಗಳು ಹೇಗೆ ಜನರ ಜೀವನದಲ್ಲಿ ಸುಧಾರಣೆ ತಂದಿದೆ ಎಂಬುದನ್ನು ವಿವರಿಸಿದರು.
ಸ್ವಚ್ಛ ಭಾರತ ಅಭಿಯಾನ ಕುರಿತಂತೆ ವಿಶ್ವಾದ್ಯಂತ ಚರ್ಚೆ ನಡೆಯುತ್ತಿದೆ ಎಂದು ಪ್ರಧಾನಿ ಹೇಳಿದರು. ಕಳೆದ ನಾಲ್ಕು ವರ್ಷಗಳಲ್ಲಿ, 7.70 ಕೋಟಿ ಶೌಚಾಲಗಳನ್ನು ನಿರ್ಮಿಸಲಾಗಿದೆ ಎಂದರು. ಇಲ್ಲಿ ಹಾಜರಿರುವ ಎಲ್ಲರೂ 2019ರ ಅಕ್ಟೋಬರ್ 2ರಂದು ಮಹಾತ್ಮಾಗಾಂಧಿ ಅವರ 150ನೇ ಜಯಂತಿ ಆಚರಿಸುವ ಹೊತ್ತಿಗೆ ನೂರಕ್ಕೆ ನೂರು ನೈರ್ಮಲ್ಯ ಸಾಧಿಸುವತ್ತ ಶ್ರಮಿಸುವಂತೆ ಕರೆ ನೀಡಿದರು.
ಜಲ ಸಂರಕ್,ಣೆ ಮತ್ತು ಜಲ ನಿರ್ವಹಣೆಯ ಪ್ರಯತ್ನಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಪ್ರಧಾನಿ ಕರೆ ನೀಡಿದರು.
ಆರ್ಥಿಕತೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತವು ಶೀಘ್ರವೇ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ತಲುಪುವ ನಿರೀಕ್ಷೆ ಇದೆ ಎಂದರು.ಫಲಿತಾಂಶ-ಆಧಾರಿತ ಹಂಚಿಕೆಗಳನ್ನು ಉತ್ತೇಜಿಸುವ ಮತ್ತು ವೆಚ್ಚದ ತಿದ್ದುಪಡಿಗಾಗಿ. ಹಣಕಾಸು ಆಯೋಗಕ್ಕೆ ಹೊಸ ಕಲ್ಪನೆಗಳನ್ನು ನೀಡುವಂತೆ ರಾಜ್ಯಗಳನ್ನು ಅವರು ಉತ್ತೇಜಿಸಿದರು.
ರಾಜ್ಯಗಳು ಈಗ ಹೂಡಿಕೆದಾರರ ಮೇಳ ಆಯೋಜಿಸುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದರು. ರಾಜ್ಯಗಳು ರಫ್ತಿನ ಕಡೆ ಗಮನ ಹರಿಸಬೇಕು ಎಂದು ಸಲಹೆ ಮಾಡಿದರು. ಸುಗಮ ವಾಣಿಜ್ಯವನ್ನು ಉತ್ತೇಜಿಸುವಂತೆ ರಾಜ್ಯಗಳಿಗೆ ಪ್ರೋತ್ಸಾಹಿಸಿದರು. ನೀತಿ ಆಯೋಗ ಎಲ್ಲ ರಾಜ್ಯಗಳೊಂದಿಗೆ ಸಭೆ ಕರೆದು, ಸುಗಮ ವಾಣಿಜ್ಯಕ್ಕೆ ಮತ್ತಷ್ಟು ಇಂಬು ನೀಡಬೇಕು ಎಂದು ಹೇಳಿದರು. ಸುಗಮ ಜೀವನವೂ ಶ್ರೀಸಾಮಾನ್ಯನಿಗೆ ಈ ಹೊತ್ತಿನ ಅಗತ್ಯವಾಗಿದ್ದು, ರಾಜ್ಯಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಕೃಷಿಯ ಕುರಿತಂತೆ ಮಾತನಾಡಿದ ಪ್ರಧಾನಿಯವರು, ದೇಶದಲ್ಲಿ ಈ ವಲಯದಲ್ಲಿ ಸಾಂಸ್ಥಿಕ ಹೂಡಿಕೆ ಅತ್ಯಲ್ಪ ಎಂದು ಹೇಳಿದರು. ಈ ಕ್ಷೇತ್ರದಲ್ಲಿ ಅದರೆ ಗೋದಾಮು, ಸಾರಿಗೆ, ಮೌಲ್ಯವರ್ಧನೆ ಮತ್ತು ಆಹಾರ ಸಂಸ್ಕರಣೆ ಇತ್ಯಾದಿಯಲ್ಲಿ ಸಾಂಸ್ಥಿಕ ಹೂಡಿಕೆ ಉತ್ತೇಜಿಸಲು ನೀತಿಗಳನ್ನು ರೂಪಿಸುವಂತೆ ರಾಜ್ಯಗಳಿಗೆ ತಿಳಿಸಿದರು.
ಗಣಿ ನಿಕ್ಷೇಪಗಳನ್ನು ಯಶಸ್ವಿಯಾಗಿ ಹರಾಜು ಹಾಕಲಾಗಿದ್ದು, ಅವು ಶೀಘ್ರವೇ ಉತ್ಪಾದನೆ ಆರಂಭಿಸಬೇಕು ಎಂದು ಪ್ರಧಾನಿ ಹೇಳಿದರು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಅವರು ತಾಕೀತು ಮಾಡಿದರು. ಜಿಲ್ಲಾ ಖನಿಜ ಪ್ರತಿಷ್ಠಾನಗಳು ದೊಡ್ಡ ಮಟ್ಟದಲ್ಲಿ ಬಡವರು ಮತ್ತು ಬುಡಕಟ್ಟು ಜನರಿಗೆ ನೆರವಾಗುತ್ತಿವೆ ಎಂದರು.
ಆರ್ಥಿಕ ಉಳಿತಾಯ, ಆ ಮೂಲಕ ಸಂಪನ್ಮೂಲದ ಉತ್ತಮ ಬಳಕೆ ಇತ್ಯಾದಿ ಅಂಶಗಳ ಹಿನ್ನೆಲೆಯಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕ ಕಾಲದಲ್ಲಿ ಚುನಾವಣೆ ನಡೆಸುವ ಕುರಿತಂತೆ ವ್ಯಾಪಕ ಚರ್ಚೆ ಮತ್ತು ಸಮಾಲೋಚನೆಗೆ ಪ್ರಧಾನಮಂತ್ರಿಯವರು ಕರೆ ನೀಡಿದರು.
ಅಂತಿಮವಾಗಿ ಪ್ರಧಾನಮಂತ್ರಿಯವರು ಸಲಹೆಗಳನ್ನು ನೀಡಿದ ಮುಖ್ಯಮಂತ್ರಿಗಳಿಗೆ ಪ್ರಧಾನಿಯವರು ಧನ್ಯವಾದ ಅರ್ಪಿಸಿದರು.