ಸ್ನೇಹಿತರೆ, ಶುಭಾಶಯಗಳು,

ಭಾರತದ ಪ್ರಗತಿ ಮತ್ತು ಅಭಿವೃದ್ಧಿಯಲ್ಲಿ ದೇಶದ ಇಂಧನ ವಲಯ ನಿರ್ವಹಿಸಬಹುದಾದ ಬಹುದೊಡ್ಡ ಪಾತ್ರವೇ ಇದೆ. ದೇಶದ ಜನತೆ ಆರಾಮದಾಯಕವಾಗಿ ಜೀವನ ನಡೆಸುವ ಮತ್ತು ಸುಲಭವಾಗಿ ಉದ್ಯಮ ವ್ಯಾಪಾರ ವಹಿವಾಟು ನಡೆಸುವ ವಿಷಯಗಳ ಮೇಲೆ ಈ ವಲಯವು ನೇರ ಪರಿಣಾಮಗಳನ್ನು ಬೀರಲಿದೆ. ಇದೀಗ ದೇಶವು ಸ್ವಾವಲಂಬಿ ಭಾರತದ ಗುರಿ ಸಾಧನೆಗಾಗಿ ಆತ್ಮನಿರ್ಭರ್ ಭಾರತದೆಡೆಗೆ ಸಾಗುತ್ತಿರುವಾಗ, ಇಂಧನ ವಲಯ ಅದರಲ್ಲೂ ವಿಶೇಷವಾಗಿ ವಿದ್ಯುತ್ ವಲಯದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಒತ್ತು ನೀಡುವುದರಿಂದ ಅದು, ನಿರ್ಣಾಯಕ ಪಾತ್ರ ವಹಿಸಲಿದೆ. ಈ ಕ್ಷೇತ್ರದ ಪ್ರಗತಿಯ ವೇಗವನ್ನು ಹೆಚ್ಚಿಸುವ ಸಲುವಾಗಿ, ಬಜೆಟ್ ಮಂಡನೆಗೆ ಮುನ್ನ ಹಲವಾರು ತಜ್ಞರ ದೃಷ್ಟಿಕೋನ, ಅಭಿಪ್ರಾಯ ಮತ್ತು ಸಲಹೆ ಸೂಚನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ನಿಮ್ಮೆಲ್ಲ ಅತ್ಯಮೂಲ್ಯ ಸಲಹೆಗಳನ್ನು ಬಜೆಟ್’ನಲ್ಲಿ ಸೇರಿಸಲು ನಮ್ಮ ತಂಡವು ಆದ್ಯತೆಯ ಗಮನ ನೀಡಿದೆ.

ಇದೀಗ ನಮ್ಮ ಬಜೆಟ್ ಮಂಡನೆಯಾಗಿ 15 ದಿನಕ್ಕಿಂತ ಹೆಚ್ಚಿನ ಕಾಲವಾಗಿದೆ. ನಿಮ್ಮ ವಲಯದ ಮೇಲೆ ಈ ಬಜೆಟ್’ನಿಂದ ಆಗಿರುವ ಪರಿಣಾಮಗಳನ್ನು ನೀವೆಲ್ಲಾ ಸೂಕ್ಷ್ಮವಾಗಿ ಪರಿಶೀಲಿಸಿದ್ದೀರಿ. ಈ ಬಜೆಟ್’ನಿಂದ ನಮಗೆ ಎಷ್ಟು ಲಾಭವಾಗಲಿದೆ, ಅದೆಷ್ಟು ನಷ್ಟವಾಗಲಿದೆ… ಇತ್ಯಾದಿ ಅಂಶಗಳ ಲೆಕ್ಕಾಚಾರದಲ್ಲಿ ನೀವೆಲ್ಲರೂ ಮುಳುಗಿದ್ದೀರಿ ಮತ್ತು ನಿಮ್ಮ ವಲಯಕ್ಕೆ ಈ ಬಜೆಟ್ ಹೇಗೆ ಲಾಭ ತಂದುಕೊಡಲಿದೆ ಎಂಬ ವಿಚಾರಗಳನ್ನು ನೀವೆಲ್ಲಾ ಮನನ ಮಾಡುತ್ತಿದ್ದೀರಿ ಎಂಬುದು ನನಗೆ ಖಚಿತವಾಗಿದೆ. ನಿಮ್ಮ ಸಲಹೆಗಾರರು ಎಲ್ಲಾ ಕಠಿಣ ಪರಿಶ್ರಮ ಹಾಕಿರುವುದರಿಂದ, ನೀಲನಕ್ಷೆ ಈಗ ಸಿದ್ಧವಾಗಿದೆ ಎಂದು ನಾನು ನಂಬಿದ್ದೇನೆ. ಆದರೆ, ಇದೀಗ ಸರಕಾರ ಮತ್ತು ನಿಮ್ಮ ವಲಯ ಜತೆಗೂಡಿ ಕೆಲಸ ಮಾಡಲು ಮುಂದಡಿ ಇಡಬೇಕು, ಬಜೆಟ್ ಘೋಷಣೆಗಳ ಅನುಷ್ಠಾನವನ್ನು ತ್ವರಿತಗೊಳಿಸುವ ಮಾರ್ಗದಲ್ಲಿ ಸಾಗಬೇಕು. ಸರಕಾರ ಮತ್ತು ಖಾಸಗಿ ವಲಯ ಬಜೆಟ್ ಪ್ರಸ್ತಾವನೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ಕ್ರಿಯಾಶೀಲ ಮಾತುಕತೆಯಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ಹೆಚ್ಚಿನ ವಿಶ್ವಾಸ ಬೆಳೆಸಲು ಮತ್ತಷ್ಟು ಮುಂದೆ ಸಾಗಬೇಕು.

ಸ್ನೇಹಿತರೆ,

ಕೇಂದ್ರ ಸರಕಾರವು ಇಂಧನ ವಲಯದ ಅಭಿವೃದ್ಧಿಗೆ ಸಮಗ್ರ ಕಾರ್ಯ ವಿಧಾನವನ್ನು ಅಳವಡಿಸಿಕೊಂಡಿದೆ. 2014ರಲ್ಲಿ ನಮ್ಮ ಸರಕಾರ ಅಧಿಕಾರ ವಹಿಸಿಕೊಂಡಾಗ, ವಿದ್ಯುತ್ ರಂಗದ ಸುಧಾರಣೆಗೆ ಕೈಗೊಂಡ ಕ್ರಮಗಳು ನಿಮಗೆಲ್ಲಾ ತಿಳಿದಿವೆ. ವಿದ್ಯುತ್ ವಲಯಕ್ಕೆ ಸೇರಿರುವ ವಿತರಣಾ ಕಂಪನಿಗಳು ಎದುರಿಸುತ್ತಿದ್ದ ನಾನಾ ಶೋಚನೀಯ ಸ್ಥಿತಿಗತಿಗಳನ್ನು ಪುನರುಚ್ಚರಿಸಬೇಕಿಲ್ಲ ಎಂದು ನಾನು ಭಾವಿಸಿದ್ದೇನೆ. ಈ ನಿಟ್ಟಿನಲ್ಲಿ ನೀತಿಗಳಿಗೆ ಸುಧಾರಣೆ ತಂದು, ಅವುಗಳನ್ನು ಹೊಸದಾಗಿ ವಿನ್ಯಾಸಗೊಳಿಸಲು ನಾವು ನಿರಂತರ ಪ್ರಯತ್ನಗಳನ್ನು ಹಾಕಿದೆವು. ಗ್ರಾಹಕರು ಮತ್ತು ವ್ಯಾಪಾರಸ್ಥರ ಹಿತಾಸಕ್ತಿಗಳನ್ನು ಗಮನದಲ್ಲಿ ಇಟ್ಟುಕೊಂಡು ನಮ್ಮೆಲ್ಲಾ ಪ್ರಯತ್ನಗಳು ಸಾಗಿದವು. ನವೀಕರಿಸಬಹುದಾದ ಇಂಧನವನ್ನು ತಲುಪಿಸುವ, ಸುಧಾರಣೆ ತರುವ, ಬಲವರ್ಧನೆಗೊಳಿಸುವ ಮಂತ್ರವನ್ನು ನಾವು ಎಲ್ಲೆಡೆ ಪ್ರಚಾರ ಮಾಡುತ್ತಿದ್ದೇವೆ.

ಸ್ನೇಹಿತರೆ,

ನವೀಕರಿಸಬಹುದಾದ ಇಂಧನ ತಲುಪಿಸುವ ವಿಷಯಕ್ಕೆ ಬಂದರೆ, ದೇಶದ ಪ್ರತಿ ಮೂಲೆಯಲ್ಲೂ ಪ್ರತಿ ಕುಟುಂಬಕ್ಕೆ ವಿದ್ಯುಚ್ಛಕ್ತಿ ಒದಗಿಸಲು ಅಗತ್ಯವಾದ ಮೂಲಸೌಕರ್ಯ ಸೃಷ್ಟಿಗೆ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದೇವೆ. ಕೊನೆಗೂ ವಿದ್ಯುಚ್ಛಕ್ತಿ ಪಡೆದ ಫಲಾನುಭವಿಗಳಿಗೆ ಬಹುತೇಕ ಹೊಸ ಜಗತ್ತು ಸೃಷ್ಟಿಯಾದಂತಾಗಿದೆ. 21ನೇ ಶತಮಾನದಲ್ಲೂ ಈ ಜನರು ವಿದ್ಯುಚ್ಛಕ್ತಿ ಆನಂದಿಸಿರಲಿಲ್ಲ, ಅನುಭವಿಸಿರಲಿಲ್ಲ.

ವಿದ್ಯುಚ್ಛಕ್ತಿ ಉತ್ಪಾದನೆ ಸಾಮರ್ಥ್ಯ ಬಲವರ್ಧನೆಯಲ್ಲಿ ಭಾರತ ಮೈಲಿಗಲ್ಲು ಸ್ಥಾಪಿಸಿದ್ದು, ವಿದ್ಯುತ್ ಕೊರತೆಯ ದೇಶವಾಗಿದ್ದ ಭಾರತವೀಗ ಹೆಚ್ಚುವರಿ ವಿದ್ಯುತ್ ಉತ್ಪಾದಿಸುತ್ತಿರುವ ದೇಶವಾಗಿ ಪರಿವರ್ತನೆಯಾಗಿದೆ. ಕಳೆದ ಕೆಲವೇ ವರ್ಷಗಳಲ್ಲಿ ನಾವು ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು 139 ಗಿಗಾ ವ್ಯಾಟ್ಸ್’ಗೆ ಹೆಚ್ಚಿಸಿಕೊಂಡಿದ್ದೇವೆ. ಎಲ್ಲಕ್ಕಿಂತ ವಿಶೇಷವಾಗಿ, ಭಾರತವು “ಒಂದು ರಾಷ್ಟ್ರ, ಒಂದು ಗ್ರಿಡ್, ಒಂದು ಫ್ರೀಕ್ವೆನ್ಸಿ(ಆವರ್ತನ) ಗುರಿಯನ್ನು ಸಹ ಸಾಧಿಸಿದೆ. ಹಲವು ಸುಧಾರಣೆಗಳನ್ನು ಜಾರಿಗೆ ತರದಿದ್ದರೆ, ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ. ಉದಯ್ ಯೋಜನೆ ಒಂದರಲ್ಲೇ, ನಾವು 2 ಲಕ್ಷ 32 ಸಾವಿರ ಕೋಟಿ ರೂಪಾಯಿ ಮೊತ್ತದ ಬಾಂಡ್’ಗಳನ್ನು ಬಿಡುಗಡೆ ಮಾಡಿದ್ದೇವೆ. ಇದು ವಿದ್ಯುತ್ ವಲಯದ ಹಣಕಾಸು ಮತ್ತು ಕಾರ್ಯಾಚರಣೆ ದಕ್ಷತೆಗಳನ್ನು ಪ್ರೋತ್ಸಾಹಿಸುತ್ತಿದೆ. ವಿದ್ಯುತ್ ಗ್ರಿಡ್’ಗಳ ಸ್ವತ್ತುಗಳನ್ನು ಮೌಲ್ಯಯುತಗೊಳಿಸುವ (ಸಂಪದ್ಭರಿತಗೊಳಿಸಲು) ಸಲುವಾಗಿ ಇನ್’ಫ್ರಾಸ್ಟ್ರಕ್ಚರ್ ಇನ್’ವೆಸ್ಟ್’ಮೆಂಟ್ ಟ್ರಸ್ಟ್-ಇನ್ವಿಟ್ ಅನ್ನು ಈಗಾಗಲೇ ಸ್ಥಾಪಿಸಲಾಗಿದೆ. ಈ ಟ್ರಸ್ಟ್ ಅನ್ನು ಅತಿ ಶೀಘ್ರವೇ ಹೂಡಿಕೆದಾರರಿಗೆ ಮುಕ್ತಗೊಳಿಸಲಾಗುವುದು.

ಸ್ನೇಹಿತರೆ,

ವಿದ್ಯುಚ್ಛಕ್ತಿಯ ಅಗತ್ಯಗಳನ್ನು ಪೂರೈಸಲು ನವೀಕರಿಸಬಹುದಾದ ಇಂಧನ ಮೂಲಗಳ ವ್ಯಾಪಕ ಬಳಕೆಗೆ ವಿಶೇಷ ಒತ್ತು ನೀಡಿದ್ದೇವೆ. ಕಳೆದ 6 ವರ್ಷಗಳಲ್ಲಿ ನಾವು ನವೀಕರಿಸಬಹುದಾದ ಇಂಧನ ಉತ್ಪಾದನೆ ಸಾಮರ್ಥ್ಯವನ್ನು ಎರಡೂವರೆ ಪಟ್ಟು ಹೆಚ್ಚಿಸಿದ್ದೇವೆ. ಅದೇ ಸಮಯದಲ್ಲಿ, ಭಾರತವು ಸೌರಶಕ್ತಿ ಉತ್ಪಾದನೆ ಸಾಮರ್ಥ್ಯವನ್ನು 15 ಪಟ್ಟು ಹೆಚ್ಚಳ ಮಾಡಿಕೊಂಡಿದೆ. ಇದೀಗ ಅಂತಾರಾಷ್ಟ್ರೀಯ ಸೌರಶಕ್ತಿ ಮೈತ್ರಿಕೂಟದ ಮೂಲಕ, ಭಾರತ ಈ ವಲಯದಲ್ಲಿ ಜಾಗತಿಕ ನಾಯಕನಾಗಿ ವಿಜೃಂಭಿಸುತ್ತಿದೆ.

ಸ್ನೇಹಿತರೆ,

21ನೇ ಶತಮಾನದ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ಭಾರತ, ಈ ವರ್ಷದ ಬಜೆಟ್’ನಲ್ಲಿ ಮೂಲಸೌಕರ್ಯ ವಲಯಕ್ಕೆ ಊಹೆಗೆ ನಿಲುಕದಷ್ಟು ಬೃಹತ್ ಹೂಡಿಕೆಯ ಪ್ರಸ್ತಾವನೆಗಳನ್ನು ಪ್ರಕಟಿಸಿ, ಬದ್ಧತೆ ಪ್ರದರ್ಶಿಸಿದೆ. ಮಿಷನ್ ಹೈಡ್ರೋಜನ್ ಪ್ರಸ್ತಾವನೆಯೇ ಇರಬಹುದು, ಸೌರಶಕ್ತಿ ಕೋಶಗಳ ದೇಶೀಯ ಉತ್ಪಾದನೆಯೇ ಇರಬಹುದು ಅಥವಾ ನವೀಕರಿಸಬಹುದಾದ ಇಂಧನ ವಲಯಕ್ಕೆ ಬೃಹತ್ ಬಂಡವಾಳ ಸೇರ್ಪಡೆಯೇ ಇರಬಹುದು… ಭಾರತವೀಗ ಎಲ್ಲಾ ವಲಯಗಳಿಗೂ ಒತ್ತು ನೀಡುತ್ತಿದೆ.

ಇದೀಗ ಭಾರತದಲ್ಲಿ ಉತ್ಪಾದನೆಯಾಗುತ್ತಿರುವ ಸೌರಶಕ್ತಿ ಕೋಶಗಳಿಗೆ (ಘಟಕಗಳು) ಹೋಲಿಸಿದರೆ, ಮುಂದಿನ 10 ವರ್ಷಗಳಲ್ಲಿ 12 ಪಟ್ಟು ಹೆಚ್ಚಿನ ಬೇಡಿಕೆ ಸೃಷ್ಟಿಯಾಗಲಿದೆ. ಬೃಹತ್ ಮಾರುಕಟ್ಟೆಯೇ ನಮಗಾಗಿ ಕಾದಿದೆ. ಭವಿಷ್ಯದ ಸಾಧ್ಯತೆಗಳನ್ನು ನೀವು ಚೆನ್ನಾಗಿಯೇ ಊಹಿಸಬಹುದು ಮತ್ತು ನಮ್ಮ ದೇಶದ ಅಗತ್ಯತೆ ಅಷ್ಟು ಬೃಹತ್ ಪ್ರಮಾಣದ್ದಾಗಿದೆ.

ನಮ್ಮ ಕಂಪನಿಗಳು ದೇಶೀಯ ಬಳಕೆಯ ಬೇಡಿಕೆಗಳನ್ನು ಪೂರೈಸುವುದಕ್ಕಷ್ಟೇ ಸೀಮಿತವಾಗದೆ, ಜಾಗತಿಕ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿ, ಜಾಗತಿಕ ಉತ್ಪಾದನಾ ಚಾಂಪಿಯನ್’ಗಳಾಗಿ ಹೊರಹೊಮ್ಮಬೇಕು ಎಂದು ನಾವು ಬಯಸುತ್ತೇವೆ.

ಸರಕಾರವು ‘ಅಧಿಕ ದಕ್ಷತೆಯ ಸೌರಶಕ್ತಿ ಫೋಟೊ ವೋಲ್ಟಾಯಿಕ್(ಪಿವಿ) ಮಾಡ್ಯೂಲ್’(ಸೌರಶಕ್ತಿ ಉತ್ಪಾದಿಸುವ ಘಟಕಗಳು)ಗಳನ್ನು ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕ (ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್-ಪಿಎಲ್ಐ) ಯೋಜನೆಗೆ ಸೇರಿಸಿದೆ. ಈ ಯೋಜನೆಗೆ 4,500 ಕೋಟಿ ರೂಪಾಯಿ ಬಂಡವಾಳ ತೊಡಗಿಸಲು ಬದ್ಧವಾಗಿದೆ. ಈ ಬೃಹತ್ ಬಂಡವಾಳವು ದೇಶದಲ್ಲಿ ಗಿಗಾವ್ಯಾಟ್ ಮಟ್ಟದ ಸೋಲಾರ್ ಪಿವಿ ಉತ್ಪಾದನೆ ಸೌಲಭ್ಯಗಳಿಗೆ ಅನುವು ಮಾಡಿಕೊಡಲಿದೆ. ಪಿಎಲ್ಐ ಯೋಜನೆಯಲ್ಲಿ ನಾವು ಯಶಸ್ಸನ್ನು ಕಾಣುತ್ತಿದ್ದೇವೆ. ಮೊಬೈಲ್ ತಯಾರಿಕಾ ವಲಯವನ್ನು ಪಿಎಲ್ಐ ಯೋಜನೆಗೆ ಸೇರಿಸಿದಾಗ, ತಕ್ಷಣವೇ ಹಲವು ವಲಯಗಳಿಂದ ಸಾಕಷ್ಟು ಸಕಾರಾತ್ಮಕ ಸ್ಪಂದನೆಗಳು ವ್ಯಕ್ತವಾಗುತ್ತಿರುವುದನ್ನು ನಾವು ನೋಡಲಾರಂಭಿಸಿದ್ದೇವೆ. ಅದೇ ರೀತಿಯ ಸ್ಪಂದನೆಯನ್ನು ನಾವು ಅಧಿಕ ದಕ್ಷತೆಯ ಸೌರಶಕ್ತಿ ಪಿವಿ ಮಾಡ್ಯೂಲ್ ಉತ್ಪಾದನೆ ವಲಯದಿಂದಲೂ ನಿರೀಕ್ಷಿಸುತ್ತಿದ್ದೇವೆ.

ಪಿಎಲ್ಐ ಯೋಜನೆ ಅಡಿ, 10 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಸಂಯೋಜಿತ ಸೌರಶಕ್ತಿ ಪಿವಿ ಉತ್ಪಾದನಾ ಘಟಕಗಳನ್ನು ನಿರ್ಮಿಸಲಾಗುವುದು. ಇದಕ್ಕಾಗಿ ಸುಮಾರು 14 ಸಾವಿರ ಕೋಟಿ ರೂಪಾಯಿ ಬಂಡವಾಳ ತೊಡಗಿಸಲಾಗುವುದು. ಮುಂದಿನ 5 ವರ್ಷಗಳಲ್ಲಿ ಇದಕ್ಕಾಗಿ 17,500 ಕೋಟಿ ರೂಪಾಯಿ ಬಂಡವಾಳ ಬೇಡಿಕೆ ಸೃಷ್ಟಿಯಾಗಬಹುದು ಎಂದು ಸರಕಾರ ಅಂದಾಜಿಸಿದೆ. ಈ ಬಂಡವಾಳ ಬೇಡಿಕೆಯು ಸೌರಶಕ್ತಿ ಪಿವಿ ಉತ್ಪಾದನೆ ವಲಯದ ಅಭಿವೃದ್ಧಿ ವೇಗ ಹೆಚ್ಚಿಸಲು ಬಹುದೊಡ್ಡ ಪಾತ್ರ ವಹಿಸಲಿದೆ.

ಸ್ನೇಹಿತರೆ,

ನವೀಕರಿಸಬಹುದಾದ ಇಂಧನ ವಲಯದ ಹೂಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ, ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾಕ್ಕೆ 1 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಬಂಡವಾಳ ಸೇರ್ಪಡೆಗೆ ಬದ್ಧವಾಗಿದೆ. ಅಂತೆಯೇ, ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆಯಲ್ಲಿ 1,500 ಕೋಟಿ ರೂಪಾಯಿ ಹೆಚ್ಚುವರಿ ಹೂಡಿಕೆ ಮಾಡಲು ನಿರ್ಧರಿಸಿದೆ. ಇದೊಂದು ಐತಿಹಾಸಿಕ ಕ್ರಮವಾಗಲಿದೆ.

ಸ್ನೇಹಿತರೆ,

ಇಂಧನ ವಲಯದಲ್ಲಿ ಉದ್ಯಮ ವ್ಯವಹಾರಗಳನ್ನು ಸುಲಭಗೊಳಿಸಲು, ಸರಕಾರವು ನಿಯಂತ್ರಣ ಮತ್ತು ಕಾರ್ಯವಿಧಾನ(ಪ್ರಕ್ರಿಯೆ) ಮಾರ್ಗಸೂಚಿಗಳನ್ನು ಸರಾಗಗೊಳಿಸುವ ಆಂದೋಲನ ಆರಂಭಿಸಿದೆ. ಈ ಹಿಂದೆ ಇಂಧನ ವಲಯವನ್ನು ಹೇಗೆ ಗ್ರಹಿಸಲಾಗುತ್ತಿತ್ತು ಎಂಬುದರ ಬಗ್ಗೆ ನಾವು ವಿಭಿನ್ನ ದೃಷ್ಟಿಕೋನ ಹೊಂದಿದ್ದೇವೆ. ಇದೀಗ ನಾವು ಮಾಡುತ್ತಾ ಬಂದಿರುವ ಎಲ್ಲಾ ಸುಧಾರಣೆಗಳಲ್ಲಿ ಇಂಧನ ವಲಯವನ್ನು ಇಂಧನ ಉದ್ಯಮ(ಕೈಗಾರಿಕೆ)ದ ಭಾಗವಾಗಿ ನೋಡದೆ, ಪ್ರತ್ಯೇಕ ಅಥವಾ ಸ್ವತಂತ್ರ ವಲಯವಾಗಿ ಪರಿಗಣಿಸಿದ್ದೇವೆ.

ವಿದ್ಯುತ್ ವಲಯವನ್ನು ಹೆಚ್ಚಾಗಿ ಕೈಗಾರಿಕಾ ವಲಯದ ಬೆಂಬಲ ವ್ಯವಸ್ಥೆಯಾಗಿ ನೋಡಲಾಗುತ್ತದೆ. ವಿದ್ಯುಚ್ಛಕ್ತಿಯೇ ಮೂಲತಃ ಮಹತ್ವಪೂರ್ಣದ್ದು. ಈ ಮಹತ್ವ ಕೈಗಾರಿಕೆಗಳಿಂದ ಮಾತ್ರ ಬಂದಿದ್ದಲ್ಲ. ಇದೇ ಕಾರಣದಿಂದಾಗಿ ಇಂದು ದೇಶದ ಶ್ರೀಸಾಮಾನ್ಯನಿಗೆ ವಿದ್ಯುಚ್ಛಕ್ತಿ ಲಭ್ಯವಾಗುವಂತೆ ಮಾಡಲು ಬಹಳಷ್ಟು ಗಮನ ನೀಡುತ್ತಾ ಬರಲಾಗಿದೆ.

ಸರಕಾರದ ನೀತಿಗಳ ಫಲವಾಗಿ ಇದೀಗ ಭಾರತದ ವಿದ್ಯುತ್ ಬೇಡಿಕೆ ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದೆ. ವಿದ್ಯುತ್ ಪೂರೈಕೆ ಮತ್ತು ವಿತರಣಾ ವಲಯಕ್ಕೆ ದೇಶಾದ್ಯಂತ ಎದುರಾಗಿರುವ ನಾನಾ ಸಮಸ್ಯೆಗಳನ್ನು ನಿವಾರಣೆ ಮಾಡಲು ನಾವು ತೊಡಗಿಸಿಕೊಂಡಿದ್ದೇವೆ. ಇದಕ್ಕಾಗಿ, ಡಿಸ್ಕಾಂ(ವಿತರಣಾ ಕಂಪನಿಗಳು)ಗಳಿಗೆ ಸಂಬಂಧಿಸಿದ ಅಗತ್ಯ ನೀತಿಗಳು ಮತ್ತು ನಿಯಂತ್ರಣ ಮಾರ್ಗಸೂಚಿಗಳನ್ನು ರೂಪಿಸಲಿದ್ದೇವೆ. ಗ್ರಾಹಕ ಚಿಲ್ಲರೆ ವಸ್ತುಗಳನ್ನು ಖರೀದಿಸುವಂತೆ ವಿದ್ಯುತ್ ಅನ್ನು ಖರೀದಿಸುವಂತಾಗಬೇಕು ಎಂಬುದು ನಮ್ಮ ಆಶಯವಾಗಿದೆ.

ವಿದ್ಯುತ್ ವಿತರಣಾ ವಲಯದಲ್ಲಿ ಇರುವ ಪ್ರವೇಶ ಅಡೆತಡೆಗಳನ್ನು ತೊಡೆದುಹಾಕಲು ನಾವು ಕಾರ್ಯೋನ್ಮುಖರಾಗಿದ್ದೇವೆ. ವಿದ್ಯುತ್ ವಿತರಣೆ ಮತ್ತು ಪೂರೈಕೆಯನ್ನು ಪರವಾನಗಿ-ಮುಕ್ತಗೊಳಿಸಲಿದ್ದೇವೆ. ವಿದ್ಯುತ್ ವಿತರಣಾ ಕಂಪನಿಗಳಿಗೆ ಸಹಾಯ ಮಾಡಲು ಅವುಗಳ ಮೂಲಸೌಕರ್ಯಗಳನ್ನು (ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ಸ್ ಮತ್ತು ಫೀಡರ್ ಸಪರೇಷನ್ ಸಿಸ್ಟಮ್ಸ್) ಮೇಲ್ದರ್ಜೆಗೆ ಏರಿಸಲು ಸಹ ಸರಕಾರ ಯೋಜನೆ ರೂಪಿಸುತ್ತಿದೆ.

ಸ್ನೇಹಿತರೆ,

ಭಾರತದಲ್ಲಿ ಸೌರಶಕ್ತಿ ಇಂಧನ ವೆಚ್ಚಗಳು (ದರ) ಅತ್ಯಂತ ಕಡಿಮೆ. ಇದರಿಂದಾಗಿ ಅಧಿಕ ಸಂಖ್ಯೆಯ ಜನರು ಸೌರಶಕ್ತಿ ಘಟಕಗಳನ್ನು ಸುಲಭವಾಗಿ ಅಳವಡಿಸಿಕೊಳ್ಳುತ್ತಿದ್ದಾರೆ. ಪ್ರಧಾನ ಮಂತ್ರಿಗಳ ಕುಸುಮ್ ಯೋಜನೆಯು ದೇಶದ ಅನ್ನದಾತರನ್ನು ಉರ್ಜಾದಾತ (ವಿದ್ಯುತ್ ಪೂರೈಕೆದಾರರು) ರನ್ನಾಗಿಸಲು ಅನುವು ಮಾಡಿಕೊಟ್ಟಿದೆ. ರೈತರು ತಮ್ಮ ಜಮೀನಿನಲ್ಲಿ 30 ಗಿಗಾವ್ಯಾಟ್ ಸಾಮರ್ಥ್ಯದ ಸಣ್ಣ ಸೌರಶಕ್ತಿ ಘಟಕಗಳನ್ನು ಈ ಯೋಜನೆ ಮೂಲಕ ಸ್ಥಾಪಿಸಿಕೊಳ್ಳಬಹುದು. ಇದುವರೆಗೆ, ನಾವು 4 ಗಿಗಾವ್ಯಾಟ್ ಮೇಲ್ಛಾವಣಿ ಸೌರಶಕ್ತಿ ಉತ್ಪಾದನೆ ಸಾಮರ್ಥ್ಯ ಹೊಂದಿದ್ದು, ಸದ್ಯದಲ್ಲೇ ಈ ಸಾಮರ್ಥ್ಯವನ್ನು ಹೆಚ್ಚುವರಿ 2.5 ಗಿಗಾ ವ್ಯಾಟ್’ಗೆ ಹೆಚ್ಚಿಸಲಿದ್ದೇವೆ. ಮುಂದಿನ ಒಂದೂವರೆ ವರ್ಷಗಳಲ್ಲಿ 40 ಗಿಗಾವ್ಯಾಟ್ ಸೌರಶಕ್ತಿ ಉತ್ಪಾದನೆ ಗುರಿ ಹಾಕಿಕೊಳ್ಳಲಾಗಿದೆ. ಇದನ್ನು ಮೇಲ್ಛಾವಣಿ ಸೌರಶಕ್ತಿ ಯೋಜನೆಗಳಿಂದಲೇ ಉತ್ಪಾದಿಸುವ ಗುರಿ ಹೊಂದಲಾಗಿದೆ.

ಸ್ನೇಹಿತರೆ,

ಮುಂಬರುವ ದಿನಗಳಲ್ಲೂ ನಾವು ಇಂಧನ ವಲಯದ ಸುಧಾರಣೆ ಮತ್ತು ಬಲವರ್ಧನೆಗೊಳಿಸುವ ಪ್ರಯತ್ನಗಳಿಗೆ ಉತ್ತೇಜನ ನೀಡಲಿದ್ದೇವೆ. ನಿಮ್ಮ ಶಿಫಾರಸುಗಳು ನಮ್ಮೆಲ್ಲಾ ಪ್ರಯತ್ನಗಳಿಗೆ ಬಲ ನೀಡಲಿವೆ. ದೇಶದ ವಿದ್ಯುತ್ ವಲಯ ಇಂದು ಹೊಸ ಚೈತನ್ಯದೊಂದಿಗೆ ಹೊಸ ಪ್ರಯಾಣ ಆರಂಭಿಸುತ್ತಿದೆ. ನೀವು ಸಹ ಈ ಪ್ರಯಾಣದ ಪಾಲುದಾರರಾಗಿ. ಮುಂದೆ ನಿಂತು ನಾಯಕತ್ವ ವಹಿಸಿ.

ಗೌರವಾನ್ವಿತ ತಜ್ಞರು ನೀಡಿರುವ ಒಳನೋಟಗಳು ಮತ್ತು ಶಿಫಾರಸುಗಳೊಂದಿಗೆ ಇಂದಿನ ಈ ವೆಬಿನಾರ್ ಅರ್ಥಪೂರ್ಣವಾಗಿ ಸಮಾಪನಗೊಳ್ಳುತ್ತದೆ ಎಂದು ನಾನು ಭಾವಿಸಿದ್ದೇನೆ. ನೀವು ನೀಡಿರುವ ಮೌಲ್ಯಯುತ ಸಲಹೆಗಳು ಬಜೆಟ್’ನಲ್ಲಿ ಘೋಷಣೆಯಾಗಿರುವ ಹಲವಾರು ಪ್ರಸ್ತಾವನೆಗಳನ್ನು ಜಾರಿ ಮಾಡುವ ನಮ್ಮ ಪ್ರಯತ್ನಗಳನ್ನು ಗಟ್ಟಿಗೊಳಿಸುತ್ತವೆ ಎಂದು ನಾನು ನಂಬಿದ್ದೇನೆ. ಬಜೆಟ್ ರೂಪಿಸಲು ಸರಕಾರದ ಇಡೀ ತಂಡ ಅವಿರತ ಶ್ರಮಿಸಿದೆ, ಸಾಕಷ್ಟು ಪ್ರಯತ್ನಗಳನ್ನು ಹಾಕಿದೆ, ನಾನಾ ದೃಷ್ಟಿಕೋನಗಳನ್ನು ಗ್ರಹಿಸಿದೆ, ಸಮಾಲೋಚನೆಯಲ್ಲಿ ತೊಡಗಿಸಿಕೊಂಡಿದೆ. ನನ್ನ ವೈಯಕ್ತಿಕ ಅಭಿಪ್ರಾಯ ಹೇಳುವುದಾದರೆ, ಬಜೆಟ್ ಘೋಷಣೆಯಾದ ಕೂಡಲೇ ನಿಮ್ಮ ವಲಯದ ಮೇಲೆ ಈ ಬಜೆಟ್’ನಿಂದ ಆಗಿರುವ ಪರಿಣಾಮಗಳನ್ನು ನೀವೆಲ್ಲಾ ಸೂಕ್ಷ್ಮವಾಗಿ ಮತ್ತು ನಿಕಟವಾಗಿ ಪರಿಶೀಲಿಸುತ್ತಿರುವುದನ್ನು ಗಮನಿಸಿದರೆ, ಬಜೆಟ್ ಖಂಡಿತವಾಗಿ ಅತ್ಯಂತ ಪ್ರಯೋಜನಕಾರಿಯಾಗಲಿದೆ ಮತ್ತು ಬಜೆಟ್ ಘೋಷಣೆಗಳನ್ನು ಜಾರಿ ಮಾಡಲು ಅದು ನಮಗೆ ನಿರ್ಣಾಯಕವಾಗಲಿದೆ. ಬಜೆಟ್’ನಲ್ಲಿ ಏನಿರಬೇಕಿತ್ತು, ಯಾಕೆ ಇರಬೇಕಿತ್ತು, ಏನಾಗಿರಬೇಕಿತ್ತು, ಯಾವುದು ಸರಿ ಇತ್ಯಾದಿ ವಿಷಯಗಳನ್ನು ಚರ್ಚಿಸಲು ಈಗ ಸಮಯ ಹೋಗಿದೆ. ನಾವೀಗ ಪ್ರಸ್ತಾವಿತ ಕಾರ್ಯಕ್ರಮಗಳ ಜಾರಿಯನ್ನು ಚುರುಕುಗೊಳಿಸಬೇಕು ಮತ್ತು ನಮ್ಮ ಮುಂದಿರುವುದನ್ನು ತೆಗೆದುಕೊಳ್ಳಬೇಕಿದೆ. ನಾವು ಒಂದು ತಿಂಗಳ ಮುಂಚೆಯೇ ಬಜೆಟ್ ಘೋಷಣೆ ಆರಂಭಿಸಿದೆವು. ಅದರರ್ಥ ನಾವು ಒಂದು ತಿಂಗಳು ಮುಂಗಡವಾಗಿಯೇ ಆರ್ಥಿಕ ಪ್ರಗತಿಯನ್ನು ಹೆಚ್ಚಿಸಬೇಕು. ಏಪ್ರಿಲ್’ನಲ್ಲಿ ಬಜೆಟ್ ಪ್ರಸ್ತಾವನೆಗಳು ಜಾರಿಯಾಗುತ್ತವೆ. ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ, ಈ ಸಮಯ (ಹಂತ) ಅತ್ಯಂತ ಮೌಲ್ಯಯುತ ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಆ ನಂತರ ನಾವು ಚರ್ಚೆ ಆರಂಭಿಸಿದರೆ, ನಮ್ಮ ಯೋಜನಾ ಸಮಯದ ಒಂದು ತಿಂಗಳನ್ನು ಕಳೆದುಕೊಳ್ಳಲಿದ್ದೇವೆ.

ಮೇ ಅಂತ್ಯದ ವೇಳೆಗೆ ದೇಶದಲ್ಲಿ ಮಳೆಗಾಲ ಶುರುವಾಗುತ್ತದೆ. ಆಗ ಮೂಲಸೌಕರ್ಯ ವಲಯದ ಎಲ್ಲಾ ಯೋಜನೆಗಳು ಬಹುತೇಕ 3 ತಿಂಗಳ ಕಾಲ ಸ್ಥಗಿತವಾಗುತ್ತವೆ. ಕಾಮಗಾರಿಗಳನ್ನು ಏಪ್ರಿಲ್’ನಲ್ಲಿ ಆರಂಭಿಸಿದರೆ, ಜೂನ್’ವರೆಗೆ ಹೆಚ್ಚಿನ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳುತ್ತವೆ. ಹೀಗಾಗಿ ಜುಲೈ-ಸೆಪ್ಟೆಂಬರ್ ಮಳೆಗಾಲದ ಸವಾಲುಗಳನ್ನು ತಪ್ಪಿಸಲು ನಾವು ಸಮರ್ಥರಾಗುತ್ತೇವೆ. ಬಜೆಟ್ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಲಭ್ಯವಾಗುವ ಸಮಯವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಉದ್ದೇಶದಿಂದ ನಾವು ಬಜೆಟ್ ವೇಳಾಪಟ್ಟಿಯನ್ನು ಒಂದು ತಿಂಗಳ ಮುಂಚೆಗೆ ಪೂರ್ವನಿಗದಿ ಮಾಡಿದೆವು.

ಬಜೆಟ್ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕಾಗಿ ಸರಕಾರ, ಕ್ರಿಯಾಶೀಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಎಲ್ಲಾ ಪಾಲುದಾರರಿಗೆ ಬೆಂಬಲ ಒದಗಿಸಲು ಒಂದು ಹೆಜ್ಜೆ ಮುಂದಿಟ್ಟಿದೆ. ಹಾಗಾಗಿ, ನೀವೆಲ್ಲರೂ ಬಜೆಟ್ ಪ್ರಯೋಜನಗಳನ್ನು ಪಡೆಯಬೇಕು. ಬಜೆಟ್ ಘೋಷಣೆಗಳನ್ನು ಜಾರಿ ಮಾಡಲು ನೀವುಗಳೆಲ್ಲಾ ಸೂಕ್ತ ಸಲಹೆಗಳೊಂದಿಗೆ ಮುಂದೆ ಬರಬೇಕು ಎಂದು ನಾವು ಆಹ್ವಾನ ನೀಡುತ್ತಿದ್ದೇವೆ. ನನ್ನ ತಂಡವು ನಿಮ್ಮೆಲ್ಲರ ಜತೆ ಸಮಸ್ಯೆಗಳನ್ನು ಸುದೀರ್ಘವಾಗಿ ಚರ್ಚಿಸಲಿದೆ. ನಾವೆಲ್ಲರೂ ಕೈಹಿಡಿದು ಜತೆಯಾಗಿ ದೇಶದ ಕನಸುಗಳನ್ನು ನನಸು ಮಾಡೋಣ.

ಇದರೊಂದಿಗೆ, ಈ ವೆಬಿನಾರ್ ಯಶಸ್ಸಿಗೆ ನಾನು ಶುಭ ಕೋರುತ್ತೇನೆ. ಇದು ಬಹಳ ಯಶಸ್ವಿಯಾಗಲಿ, ಇಲ್ಲಿ ಕೇಂದ್ರೀಕರಿಸಿದ ಚರ್ಚೆಗಳು ನಡೆಯಲಿ. ಅನುಷ್ಠಾನ – ನನ್ನ ಕೇಂದ್ರೀಕೃತ ಗಮನ ‘ಅನುಷ್ಠಾನ’ವೇ ಆಗಿದೆ.

ಇದನ್ನು ಮತ್ತೊಮ್ಮೆ ಪುನರುಚ್ಚರಿಸಿ,

ಧನ್ಯವಾದಗಳನ್ನು ಅರ್ಪಿಸುತ್ತೇನೆ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s Biz Activity Surges To 3-month High In Nov: Report

Media Coverage

India’s Biz Activity Surges To 3-month High In Nov: Report
NM on the go

Nm on the go

Always be the first to hear from the PM. Get the App Now!
...
PM to participate in ‘Odisha Parba 2024’ on 24 November
November 24, 2024

Prime Minister Shri Narendra Modi will participate in the ‘Odisha Parba 2024’ programme on 24 November at around 5:30 PM at Jawaharlal Nehru Stadium, New Delhi. He will also address the gathering on the occasion.

Odisha Parba is a flagship event conducted by Odia Samaj, a trust in New Delhi. Through it, they have been engaged in providing valuable support towards preservation and promotion of Odia heritage. Continuing with the tradition, this year Odisha Parba is being organised from 22nd to 24th November. It will showcase the rich heritage of Odisha displaying colourful cultural forms and will exhibit the vibrant social, cultural and political ethos of the State. A National Seminar or Conclave led by prominent experts and distinguished professionals across various domains will also be conducted.