ದ್ವೀಪಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಪ್ರಗತಿ ಪರಿಶೀಲನೆ ನಡೆಸಿದರು.
ಕೇಂದ್ರ ಸರಕಾರವು 2017 ರ ಜೂನ್ 1 ರಂದು ದ್ವೀಪಗಳ ಅಭಿವೃದ್ದಿ ಏಜೆನ್ಸಿಯನ್ನು ರಚಿಸಿದ್ದು , ಸಮಗ್ರ ಅಭಿವೃದ್ಧಿಗೆ 26 ದ್ವೀಪಗಳನ್ನು ಪಟ್ಟಿ ಮಾಡಲಾಗಿದೆ.
ನೀತಿ (ಎನ್.ಐ.ಟಿ.ಐ.) ಆಯೋಗವು ಪ್ರಮುಖ ಮೂಲಸೌಕರ್ಯ ಯೋಜನೆಗಳು, ಡಿಜಿಟಲ್ ಸಂಪರ್ಕ, ಹಸಿರು ಇಂಧನ, ಉಪ್ಪು ನೀರಿನ ಶುದ್ದೀಕರಣ ಸ್ಥಾವರ, ತ್ಯಾಜ್ಯ ನಿರ್ವಹಣೆ, ಮೀನುಗಾರಿಕೆಗೆ ಉತ್ತೇಜನ, ಮತ್ತು ಪ್ರವಾಸೋದ್ಯಮ ಆಧಾರಿತ ಯೋಜನೆಗಳು ಸೇರಿದಂತೆ ಸಮಗ್ರ ಅಭಿವೃದ್ದಿ ಕಾರ್ಯಕ್ರಮಗಳ ಪ್ರದರ್ಶಿಕೆಯನ್ನು ತೋರಿಸಿತು.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಾಡಲಾದ ಕಾಮಗಾರಿಯನ್ನು ಪುನರ್ವಿಮರ್ಶಿಸಿದ ಪ್ರಧಾನ ಮಂತ್ರಿಗಳು ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗುರುತಿಸಲ್ಪಟ್ಟ ಕ್ಷೇತ್ರಗಳ ಸಮಗ್ರ ಪ್ರವಾಸೋದ್ಯಮ ಕೇಂದ್ರಿತ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ದ್ವೀಪಗಳಲ್ಲಿ ಸೌರ ಇಂಧನ ಆಧಾರಿತ ಇಂಧನ ಸ್ವಾವಲಂಬನೆಯ ಕ್ರಮಗಳನ್ನು ತ್ವರಿತಗೊಳಿಸುವಂತೆಯೂ ಅವರು ಕರೆ ನೀಡಿದರು.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಭೇಟಿ ನೀಡುವ ವಿದೇಶೀಯರಿಗೆ ನಿರ್ಬಂಧಿತ ಪ್ರದೇಶ ಅನುಮತಿ ಅಗತ್ಯದಲ್ಲಿ ವಿನಾಯತಿ ನೀಡುವ ಬಗ್ಗೆ ಗೃಹ ವ್ಯವಹಾರಗಳ ಮಂತ್ರಾಲಯದ ನಿರ್ಧಾರದ ಬಗ್ಗೆ ಪ್ರಧಾನ ಮಂತ್ರಿಯವರು ವಿವರಿಸಿದರು. ಆಗ್ನೇಯ ಏಶ್ಯಾದ ಜೊತೆ ಈ ದ್ವೀಪಗಳಿಗೆ ಸಂಪರ್ಕ ಹೆಚ್ಚಿಸುವ ಬಗ್ಗೆಯೂ ಚರ್ಚಿಸಲಾಯಿತು.
ಲಕ್ಷದ್ವೀಪದಲ್ಲಿ ಅಭಿವೃದ್ದಿ ಕಾಮಗಾರಿಗಳನ್ನು ಪರಾಮರ್ಶಿಸಿದ ಪ್ರಧಾನ ಮಂತ್ರಿಗಳು ಟುನಾ ಮೀನುಗಾರಿಕೆಯನ್ನು ಉತ್ತೇಜಿಸಲು ಕೈಗೊಂಡ ಕ್ರಮಗಳ ಬಗ್ಗೆಯೂ ಪರಾಮರ್ಶೆ ನಡೆಸಿದರು ಮತ್ತು “ಲಕ್ಷದ್ವೀಪ ಟುನಾ”ವನ್ನು ಒಂದು ಬ್ರಾಂಡ್ ಆಗಿ ಉತ್ತೇಜಿಸುವ ಬಗ್ಗೆಯೂ ಪ್ರಸ್ತಾವಿಸಿದರು. ಸ್ವಚ್ಚತೆಯ ನಿಟ್ಟಿನಲ್ಲಿ ಲಕ್ಷದ್ವೀಪದ ಉಪಕ್ರಮಗಳಿಗೆ ಪ್ರಧಾನ ಮಂತ್ರಿಯವರು ಮೆಚ್ಚುಗೆ ವ್ಯಕ್ತಪಡಿಸಿದರು.
ಲಕ್ಷದ್ವೀಪವೂ ಸೇರಿದಂತೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪ್ರಮುಖ ಮೂಲಸೌಕರ್ಯ ಅಭಿವೃದ್ಧಿ ಬಗ್ಗೆಯೂ ಚರ್ಚಿಸಲಾಯಿತು.
ಸಮುದ್ರ ಕಳೆ ಕೃಷಿ ಸಾಧ್ಯತೆಯ ಬಗ್ಗೆ ಅನ್ವೇಷಣೆ ಮಾಡುವಂತೆ ಮತ್ತು ಕೃಷಿ ವಲಯಕ್ಕೆ ಸಹಾಯ ಮಾಡುವ ಇತರ ಉಪಕ್ರಮಗಳ ಬಗ್ಗೆಯೂ ಗಮನಹರಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಪ್ರಧಾನ ಮಂತ್ರಿಯವರು ಸೂಚಿಸಿದರು.
ಸಭೆಯಲ್ಲಿ ಗೃಹ ಸಚಿವರಾದ ಶ್ರೀ ರಾಜನಾಥ ಸಿಂಗ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಲೆಫ್ಟಿನೆಂಟ್ ಗವರ್ನರ್, ನೀತಿ ಆಯೋಗ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಕೇಂದ್ರ ಸರಕಾರದ ಇಅತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.