ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಇಂದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ನೀರಾವರಿ ಕಾರ್ಯಕ್ರಮ- ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿ.ಎಂ.ಕೆ.ಎಸ್.ವೈ.)ಯ ಪ್ರಗತಿ ಪರಿಶೀಲನೆ ನಡೆಸಿದರು.
ಈ ಸಭೆಯಲ್ಲಿ ನೀತಿ ಆಯೋಗ, ಪ್ರಧಾನಮಂತ್ರಿಗಳ ಕಾರ್ಯಾಲಯದ ಅಧಿಕಾರಿಗಳ ಜೊತೆಗೆ ಸಂಬಂಧಿತ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಒಟ್ಟು 5.22 ಲಕ್ಷ ಹೆಕ್ಟೇರ್ ಗಳಿಗೆ ನೀರು ಒದಗಿಸುವ ಸಾಮರ್ಥ್ಯ ಇರುವ 99 ಆದ್ಯತೆಯ ನೀರಾವರಿ ಯೋಜನೆಗಳು, 21 ಇತರ ಯೋಜನೆಗಳು 2017ರ ಜೂನ್ ಒಳಗೆ ಪೂರ್ಣಗೊಳ್ಳಲಿವೆ ಎಂದು ಅಧಿಕಾರಿಗಳು ತಿಳಿಸಿದರು.
ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಒಡಿಶಾದಲ್ಲಿ ಹೆಚ್ಚುವರಿಯಾಗಿ 45 ಆದ್ಯತೆಯ ಯೋಜನೆಗಳು ಉತ್ತಮ ಪ್ರಗತಿಯಲ್ಲಿವೆ ಮತ್ತು ಅವು ನಿಗದಿತ ಸಮಯಕ್ಕೆ ಮೊದಲೇ ಪೂರ್ಣಗೊಳ್ಳಲಿವೆ.
ಮುಂಬರುವ ನೀರಾವರಿ ಯೋಜನೆಗಳಲ್ಲಿ ಹನಿ ಮತ್ತು ಸೂಕ್ಷ್ಮ ನೀರಾವರಿಗೆ ಗರಿಷ್ಠ ಗಮನ ಹರಿಸುವಂತೆ ಪ್ರಧಾನಮಂತ್ರಿಯವರು ಅಧಿಕಾರಿಗಳಿಗೆ ಆಗ್ರಹಿದರು. ಈ ಯೋಜನೆಗಳ ಅಚ್ಚುಕಟ್ಟು ಪ್ರದೇಶದಲ್ಲಿ ಸಮರ್ಥವಾದ ಬೆಳೆ ವಿಧಾನ ಮತ್ತು ನೀರಿನ ಬಳಕೆ ವ್ಯವಸ್ಥೆ ವಿವಿಧ ಸರ್ಕಾರಿ ಇಲಾಖೆಗಳು, ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ವಿಶ್ವವಿದ್ಯಾಲಯಗಳ ನಡುವೆ ಸಮನ್ವಯಕ್ಕೆ ಪ್ರಧಾನಿ ಕರೆ ನೀಡಿದರು
ಪಿ.ಎಂ.ಕೆ.ಎಸ್.ವೈ. ಸಮಗ್ರ ದೃಷ್ಟಿಕೋನಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸುವಂತೆ ಪ್ರಧಾನಮಂತ್ರಿಯವರು ಅಧಿಕಾರಿಗಳಿಗೆ ಸೂಚಿಸಿದರು. ನೀರಾವರಿ ಯೋಜನೆಗಳ ಪ್ರಗತಿಯ ನಿಗಾಕ್ಕಾಗಿ ಬಾಹ್ಯಾಕಾಶ ಆನ್ವಯಿಕಗಳೂ ಸೇರಿದಂತೆ ಲಭ್ಯವಿರುವ ಇತ್ತೀಚಿನ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವಂತೆಯೂ ಅವರು ತಿಳಿಸಿದರು.