ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು, ಆಯುಷ್ಮಾನ್ ಭಾರತ್ ಯೋಜನೆಯಡಿ ಆರಂಭಿಸಲಿರುವ ಆರೋಗ್ಯ ಭರವಸೆ ಕಾರ್ಯಕ್ರಮದ ಸಿದ್ಧತೆಗಳ ಪ್ರಗತಿ ಕುರಿತು ಪರಾಮರ್ಶೆ ನಡೆಸಿದರು. ಈ ಯೋಜನೆಯಡಿ ಪ್ರತಿ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳ ವರೆಗೆ ಆರೋಗ್ಯ ವಿಮೆ ಒದಗಿಸಲಾಗುವುದು.
ಈ ಯೋಜನೆಯಡಿ ಸುಮಾರು 10 ಕೋಟಿ ಬಡ ಹಾಗೂ ದುರ್ಬಲ ವರ್ಗದ ಕುಟಂಬಗಳಿಗೆ ಪ್ರಯೋಜನ ಕಲ್ಪಿಸುವ ಗುರಿ ಹೊಂದಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ನೀತಿ ಆಯೋಗ ಮತ್ತು ಪ್ರಧಾನಮಂತ್ರಿಗಳ ಕಾರ್ಯಾಲಯದ ಹಿರಿಯ ಅಧಿಕಾರಿಗಳು ಯೋಜನೆಯ ನಾನಾ ಅಂಶಗಳು ಮತ್ತು ರಾಜ್ಯ ಸರ್ಕಾರಗಳು ಮಾಡಿಕೊಂಡಿರುವ ಸಿದ್ಧತೆಗಳು ಹಾಗೂ ಯೋಜನೆಗಾಗಿ ಮಾಡಿಕೊಂಡಿರುವ ತಾಂತ್ರಿಕ ಮೂಲಸೌಕರ್ಯ ಅಭಿವೃದ್ಧಿ ಕುರಿತು ಪ್ರಧಾನಮಂತ್ರಿಗಳಿಗೆ ಮಾಹಿತಿ ನೀಡಿದರು.
ಕಳೆದ ಏಪ್ರಿಲ್ ನಲ್ಲಿ ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು, ಚತ್ತೀಸ್ ಗಢದ ಆಶೋತ್ತರ ಜಿಲ್ಲೆಯಾಗಿ ಆಯ್ಕೆಯಾಗಿರುವ ಬಿಜಾಪುರದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ ದೇಶದ ಮೊದಲ ಆರೋಗ್ಯ ಮತ್ತು ಸೌಖ್ಯ ಕೇಂದ್ರವನ್ನು ಉದ್ಘಾಟಿಸಿದ್ದರು.