ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೋಮವಾರ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ ಯೋಜನೆಯಡಿ ಕೈಗೆತ್ತಿಕೊಳ್ಳಲಿರುವ ಆರೋಗ್ಯ ಭರವಸೆ ಕಾರ್ಯಕ್ರಮಗಳ ಆರಂಭದ ಸಿದ್ಧತೆಗಳ ಪ್ರಗತಿ ಕುರಿತು ಪರಾಮರ್ಶೆ ನಡೆಸಿದರು.
ಆರೋಗ್ಯ ಭರವಸೆ ಕಾರ್ಯಕ್ರಮವನ್ನು ಶೀಘ್ರ ಹಾಗೂ ಸುಗಮವಾಗಿ ಅನುಷ್ಠಾನಗೊಳಿಸಲು ರಾಜ್ಯಗಳೊಡನೆ ಸಮಾಲೋಚನೆ ಸೇರಿದಂತೆ ಈವರೆಗೆ ಕೈಗೊಂಡಿರುವ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಯೋಜನೆಯಡಿ ಪ್ರತಿ ಕುಟುಂಬಕ್ಕೆ 5 ಲಕ್ಷ ರೂಪಾಯಿ ವ್ಯಾಪ್ತಿಯವರೆಗೆ ಖರ್ಚನ್ನು ಭರಿಸಲಾಗುವುದು, ಇದರಡಿ ಹತ್ತು ಕೋಟಿ ಬಡ ಮತ್ತು ದುರ್ಬಲ ವರ್ಗದ ಕುಟುಂಬಗಳಿಗೆ ನೆರವು ನೀಡುವುದನ್ನು ಗುರಿಯಾಗಿರಿಸಿಕೊಳ್ಳಲಾಗಿದೆ.
ಈ ಯೋಜನೆಯಡಿ ಸಮಾಜದ ಬಡ ಹಾಗೂ ದುರ್ಬಲ ವರ್ಗದವರಿಗೆ ಗರಿಷ್ಠ ಪ್ರಯೋಜನ ಒದಗಿಸಿಕೊಡಲು ಒತ್ತು ನೀಡಬೇಕೆಂದು ಪ್ರಧಾನಿ ಪ್ರತಿಪಾದಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ನೀತಿ ಆಯೋಗ ಮತ್ತು ಪ್ರಧಾನಮಂತ್ರಿಗಳ ಕಾರ್ಯಾಲಯದ ಹಿರಿಯ ಅಧಿಕಾರಿಗಳು ಯೋಜನೆಯ ವಿವಿಧ ಅಂಶಗಳ ಬಗ್ಗೆ ಪ್ರಧಾನಿ ಅವರಿಗೆ ಮಾಹಿತಿ ನೀಡಿದರು.
ಕಳೆದ ತಿಂಗಳು ಅಂಬೇಡ್ಕರ್ ಜಯಂತಿಯಂದು ಪ್ರಧಾನಮಂತ್ರಿಗಳು ಆಯುಷ್ಮಾನ್ ಭಾರತ ಯೋಜನೆಯಡಿ ಚತ್ತೀಸ್ ಗಢದ ವಿಜಯಪುರ ಜಿಲ್ಲೆಯಲ್ಲಿ ಆರಂಭಿಸಿದ ಮೊದಲ “ಆರೋಗ್ಯ ಮತ್ತು ಸೌಖ್ಯ ಕೇಂದ್ರ’ವನ್ನು ಉದ್ಘಾಟಿಸಿದರು.