ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿದೇಶಾಂಗ ವ್ಯವಹಾರಗಳ ಖಾತೆಯ ಮಾಜಿ ಸಚಿವರಾದ ಶ್ರೀಮತಿ ಸುಷ್ಮಾ ಸ್ವರಾಜ್ ಅವರ ಹೊಸದಿಲ್ಲಿಯ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದರು.
ಸುಷ್ಮಾ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಪ್ರಧಾನ ಮಂತ್ರಿ ಅವರು “ ಭಾರತೀಯ ರಾಜಕಾರಣದ ಮಹತ್ವದ ಅಧ್ಯಾಯವೊಂದು ಮುಕ್ತಾಯಗೊಂಡಿದೆ. ಸಾರ್ವಜನಿಕರ ಸೇವೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟ ಮತ್ತು ಬಡವರ ಬದುಕನ್ನು ಉತ್ತಮಗೊಳಿಸುವುದಕ್ಕೆ ಕಾರ್ಯತತ್ಪರರಾದ ಪ್ರಮುಖ ನಾಯಕರ ನಿಧನಕ್ಕೆ ಇಡೀ ದೇಶವೇ ದುಖತಪ್ತವಾಗಿದೆ. ಸುಷ್ಮಾ ಸ್ವರಾಜ್ ಜೀ ಅವರು ಕೋಟ್ಯಾಂತರ ಜನರಿಗೆ ಸ್ಪೂರ್ತಿಯ ಸೆಲೆಯಾಗಿದ್ದಂತಹ ನಾಯಕರು” ಎಂದು ಹೇಳಿದ್ದಾರೆ.
ಸುಷ್ಮಾ ಜೀ ಅವರು ಅಸ್ಖಲಿತ ಭಾಷಣಕಾರರಾಗಿದ್ದರು. ಮತ್ತು ವಿಶೇಷ ಸಾಧನೆಯ ಸಂಸದೀಯ ಪಟುವಾಗಿದ್ದರು. ಅವರನ್ನು ಪಕ್ಷಗಳ ಗಡಿ ಮೀರಿ ಗೌರವಿಸುತ್ತಿದ್ದರು ಮತ್ತು ಪೂಜ್ಯ ಭಾವದಿಂದ ಕಾಣುತ್ತಿದ್ದರು. ತತ್ವದ ವಿಷಯ ಬಂದಾಗ ಮತ್ತು ಬಿ.ಜೆ.ಪಿ.ಯ ಹಿತಾಸಕ್ತಿಯ ವಿಷಯ ಬಂದಾಗ ಅವರು ಯಾವುದೇ ರಾಜಿ ಇಲ್ಲದ ನಿಲುವನ್ನು ತೋರ್ಪಡಿಸುತ್ತಿದ್ದರು. ಬಿ.ಜೆ.ಪಿ.ಯ ಬೆಳವಣಿಗೆಗೆ ಅವರ ಕಾಣಿಕೆ ಬಹಳಷ್ಟಿದೆ.
ಅತ್ಯುತ್ತಮ ಆಡಳಿತಗಾರರಾಗಿದ್ದ ಸುಷ್ಮಾ ಜೀ ಅವರು ತಾವು ಕಾರ್ಯ ನಿರ್ವಹಿಸಿದ ಪ್ರತೀ ಸಚಿವಾಲಯಗಳಲ್ಲು ಉತ್ತಮ ಗುಣಮಟ್ಟದ ಮಾನದಂಡಗಳನ್ನು ನಿರ್ಮಾಣ ಮಾಡಿದ್ದರು. ವಿವಿಧ ರಾಷ್ಟ್ರಗಳ ಜೊತೆ ಭಾರತದ ಬಾಂಧವ್ಯವನ್ನು ಉತ್ತಮ ಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಸಚಿವರಾಗಿ ಅವರ ಅನುಭೂತಿಪರತೆಯನ್ನು ನಾವು ಕಂಡಿದ್ದೇವೆ.ವಿಶ್ವದ ಯಾವುದೇ ಭಾಗದಲ್ಲಿ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರಿಗೆ ತಕ್ಷಣವೇ ಸಹಾಯ ಮಾಡುತ್ತಿದ್ದರು.
ಕಳೆದ ಐದು ವರ್ಷಗಳಲ್ಲಿ ಸುಷ್ಮಾ ಜೀ ಅವರು ವಿದೇಶೀ ವ್ಯವಹಾರ ಸಚಿವರಾಗಿ ವಿಶ್ರಾಂತಿ ಇಲ್ಲದೆ ದುಡಿದ ರೀತಿಯನ್ನು ನಾನು ಮರೆಯಲಾರೆ. ಅವರ ಆರೊಗ್ಯ ಅಷ್ಟೊಂದು ಉತ್ತಮವಾಗಿಲ್ಲದೇ ಇದ್ದಾಗಲೂ, ಅವರು ತಮ್ಮ ಕಾರ್ಯಕ್ಕೆ ನ್ಯಾಯ ಒದಗಿಸಲು ಸಾಧ್ಯ ಇರುವ ಎಲ್ಲವನ್ನೂ ಮಾಡುತ್ತಿದ್ದರು ಮತ್ತು ತಮ್ಮ ಸಚಿವಾಲಯಕ್ಕೆ ಸಂಬಂಧಿಸಿದ ತಕ್ಷಣದ ಮಾಹಿತಿಯ ಬಗ್ಗೆ ಅರಿವನ್ನು ಹೊಂದಿರುತ್ತಿದ್ದರು. ಅವರ ಚೈತನ್ಯ ಮತ್ತು ಬದ್ದತೆಗೆ ಎಣೆ ಇಲ್ಲ.
ಸುಷ್ಮಾ ಜೀ ಅವರ ನಿಧನ ನನಗೆ ವೈಯಕ್ತಿಕ ನಷ್ಟ. ಭಾರತಕ್ಕಾಗಿ ಮಾಡಿದ ಎಲ್ಲಾ ಕೆಲಸಗಳಿಗಾಗಿ ಅವರು ಸದಾ ಸ್ಮರಿಸಲ್ಪಡುತ್ತಾರೆ. ಈ ದುರದೃಷ್ಟಕರ ಸಮಯದಲ್ಲಿ ಅವರ ಕುಟುಂಬ, ಬೆಂಬಲಿಗರು ಮತ್ತು ಅಭಿಮಾನಿಗಳ ನೋವಿನಲ್ಲಿ ನಾನೂ ಸಹಭಾಗಿ . ಓಂ ಶಾಂತಿ”
ವಿದೇಶೀ ವ್ಯವಹಾರಗಳ ಮಾಜಿ ಸಚಿವರಾದ ಶ್ರೀಮತಿ ಸುಷ್ಮಾ ಸ್ವರಾಜ್ ನಿನ್ನೆ ರಾತ್ರಿ ಹೊಸದಿಲ್ಲಿಯಲ್ಲಿ ನಿಧನರಾದರು