ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಜಪಾನ್ ಪ್ರಧಾನಮಂತ್ರಿ ಶ್ರೀ. ಶಿಂಜೋ ಅಬೆ ಅವರು 2017ರ ಸೆಪ್ಟೆಂಬರ್ 13 ಮತ್ತು 14ರಂದು ಅಧಿಕೃತ ಭಾರತ ಭೇಟಿ ಕೈಗೊಳ್ಳಲಿದ್ದಾರೆ.
ಪ್ರಧಾನಮಂತ್ರಿ ಮೋದಿ ಮತ್ತು ಪ್ರಧಾನಿ ಅಬೆ ಅವರು ಗುಜರಾತ್ ನ ಗಾಂಧಿನಗರದ ಮಹಾತ್ಮಾ ಮಂದಿರದಲ್ಲಿ ಸೆಪ್ಟೆಂಬರ್ 14ರಂದು 12ನೇ ಭಾರತ – ಜಪಾನ್ ವಾರ್ಷಿಕ ಶೃಂಗಸಭೆ ನಡೆಸಲಿದ್ದಾರೆ. ಇಬ್ಬರೂ ನಾಯಕರು ಬಲಿಕ ಮಾಧ್ಯಮಗಳಿಗೆ ಹೇಳಿಕೆ ನೀಡಲಿದ್ದಾರೆ. ಭಾರತ ಜಪಾನ್ ವಾಣಿಜ್ಯ ಸಭೆಯೂ ಆ ದಿನವೇ ಆಯೋಜನೆಯಾಗಿದೆ.
ಇದು ಪ್ರಧಾನಮಂತ್ರಿ ಮೋದಿ ಮತ್ತು ಪ್ರಧಾನಿ ಅಬೆ ಅವರ ನಡುವೆ ನಾಲ್ಕನೇ ವಾರ್ಷಿಕ ಶೃಂಗಸಭೆಯಾಗಿದೆ. ಇಬ್ಬರೂ ನಾಯಕರು ತಮ್ಮ ವಿಶೇಷ ವ್ಯೂಹಾತ್ಮಕ ಮತ್ತು ಜಾಗತಿಕ ಪಾಲುದಾರಿಕೆಯ ಚೌಕಟ್ಟಿನ ಅಡಿಯಲ್ಲಿ ಭಾರತ ಮತ್ತು ಜಪಾನ್ ನಡುವಿನ ಬಹುಮುಖಿ ಸಹಕಾರದ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ ಮತ್ತು ಅದರ ಭವಿಷ್ಯದ ದಿಶೆಯನ್ನು ನಿರ್ಧರಿಸಲಿದ್ದಾರೆ.
ಅಹಮದಾಬಾದ್ ಮತ್ತು ಮುಂಬೈ ನಡುವಿನ ಭಾರತದ ಪ್ರಥಮ ಅತಿ ವೇಗದ ರೈಲು ಯೋಜನೆಯ ಕಾಮಗಾರಿಯ ಆರಂಭದ ಅಂಗವಾಗಿ ಸೆಪ್ಟೆಂಬರ್ 14ರಂದು ಆಯೋಜಿಸಿರುವ ಸಾರ್ವಜನಿಕ ಸಮಾರಂಭದಲ್ಲಿ ಇಬ್ಬರೂ ನಾಯಕರು ಪಾಲ್ಗೊಳ್ಳಲಿದ್ದಾರೆ. ಈ ರೈಲು ಎರಡು ನಗರಗಳ ನಡುವಿನ ಪ್ರಯಾಣದ ಅವಧಿಯನ್ನು ಗಣನೀಯವಾಗಿ ತಗ್ಗಿಸುವ ನಿರೀಕ್ಷೆ ಇದೆ. ಜಪಾನ್ ಅತಿ ವೇಗದ ರೈಲು ಜಾಲದಲ್ಲಿ ಮುಂಚೂಣಿಯಲ್ಲಿದೆ ಮತ್ತು ಅದರ ಶಿಂಕನ್ಸೆನ್ ಬುಲೆಟ್ ರೈಲು ಜಗತ್ತಿನ ಅತಿ ವೇಗದ ರೈಲಾಗಿದೆ.
ಅಹಮದಾಬಾದ್ ನಗರದಲ್ಲಿ ಸೆಪ್ಟೆಂಬರ್ 13ರಂದು ಅಬೆ ಅವರಿಗೆ ಭಾರತೀಯ ಕಲಾ ವೈವಿಧ್ಯತೆಯ ಸರಣಿ ಕಾರ್ಯಕ್ರಮಗಳ ಪ್ರದರ್ಶನದ ಮೂಲಕ ಅದ್ಧೂರಿ ನಾಗರಿಕ ಸ್ವಾಗತ ಗೌರವವನ್ನು ನೀಡಲಾಗುತ್ತದೆ.
ಇಬ್ಬರೂ ಪ್ರಧಾನಮಂತ್ರಿಗಳು ಮಹಾತ್ಮಾಗಾಂಧಿ ಅವರು ಸಬರಮತಿ ನದಿಯ ದಂಡೆಯಲ್ಲಿ ಸ್ಥಾಪಿಸಿರುವ ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ನಂತರ ಅವರು - ಅಹ್ಮದಾಬಾದಿನ ಪ್ರಸಿದ್ಧ 16 ನೇ ಶತಮಾನದ ಮಸೀದಿ "ಸಿದಿ ಸಾಯಿದ್ ನಿ ಜಾಲಿ" ಗೆ ಭೇಟಿ ನೀಡಲಿದ್ದಾರೆ. ಇಬ್ಬರೂ ನಾಯಕರು, ಮಹಾತ್ಮಾ ಮಂದಿರದಲ್ಲಿ ಮಹಾತ್ಮಾ ಗಾಂಧಿಯವರಿಗೆ ಸಮರ್ಪಿತವಾಗಿರುವ ದಂಡಿ ಕುಟೀರ್ ವಸ್ತುಸಂಗ್ರಹಾಲಯಕ್ಕೆ ಸಹ ಭೇಟಿ ನೀಡಲಿದ್ದಾರೆ.