ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು, ನವದೆಹಲಿಯಲ್ಲಿ ಆಡಳಿತ ಪರವಾದ ಮತ್ತು ಸಕಾಲದಲ್ಲಿ ಅನುಷ್ಠಾನ ಕುರಿತ ಐಸಿಟಿ ಆಧಾರಿತ ಬಹು ಮಾದರಿ ವೇದಿಕೆ ಪ್ರಗತಿಯ ಮೂಲಕ ನಡೆದ ಹದಿನೈದನೇ ಸಂವಾದದ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನಮಂತ್ರಿಯವರು ಆದಾಯ ತೆರಿಗೆ ಆಡಳಿತಕ್ಕೆ ಸಂಬಂಧಿಸಿದ ಕುಂದುಕೊರತೆಗಳ ನಿರ್ವಹಣೆ ಮತ್ತು ಪರಿಹಾರದ ಪ್ರಗತಿಯ ಪರಾಮರ್ಶೆ ನಡೆಸಿದರು. ತೆರಿಗೆದಾರರು ದೊಡ್ಡ ಸಂಖ್ಯೆಯಲ್ಲಿ ತಮ್ಮ ಕುಂದುಕೊರತೆ ವ್ಯಕ್ತಪಡಿಸಿರುವ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಇವುಗಳನ್ನು ಪರಿಹರಿಸಲು ಒಂದು ವ್ಯವಸ್ಥೆಯನ್ನು ರೂಪಿಸಬೇಕು ಎಂದು ಹೇಳಿದರು. ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲಾಗುತ್ತಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ತಂತ್ರಜ್ಞಾನವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ಅವರು ಸಂಬಂಧಿತ ಅಧಿಕಾರಿಗಳಿಗೆ ಆಗ್ರಹಿಸಿದರು.
ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆಯ ಅನುಷ್ಠಾನದ ನಿಟ್ಟಿನಲ್ಲಿ ಆಗಿರುವ ಪ್ರಗತಿಯನ್ನು ಪ್ರಧಾನಮಂತ್ರಿಗಳು ಪರಿಶೀಲಿಸಿದರು. 12 ಖನಿಜ ಶ್ರೀಮಂತ ರಾಜ್ಯಗಳಿಂದ ಈವರೆಗೆ 3214 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ ಮತ್ತು ಇನ್ನೂ ಹೆಚ್ಚಿನ ಮೊತ್ತ ಕಾಲಕ್ರಮೇಣ ಸಂಗ್ರಹಿಸಲಾಗುವ ನಿರೀಕ್ಷೆ ಇದೆ ಎಂಬುದನ್ನೂ ಉಲ್ಲೇಖಿಸಲಾಯಿತು. ಖನಿಜ ಶ್ರೀಮಂತ ಜಿಲ್ಲೆಗಳಲ್ಲಿ ಗುಡ್ಡಗಾಡು ಜನರು, ಹಿಂದುಳಿದ ಸಮುದಾಯದವರಿಗೆ ಅನುಕೂಲ ಕಲ್ಪಿಸಲು ನಿಧಿಯನ್ನು ಬಳಸಿಕೊಳ್ಳುವ ಸಲುವಾಗಿ ಸಮಾನವಾದ ಕಾರ್ಯವಿಧಾನ ಮತ್ತು ಪ್ರಕ್ರಿಯೆಯತ್ತ ಕಾರ್ಯೋನ್ಮುಖವಾಗುವಂತೆ ಸಂಬಂಧಿತ ಅಧಿಕಾರಿಗಳಿಗೆ ಅವರು ಆಗ್ರಹಿಸಿದರು.
ರಾಜಾಸ್ಥಾನ, ಅಸ್ಸಾಂ, ಮೇಘಾಲಯ, ಸಿಕ್ಕಿಂ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಒಡಿಶಾ, ಜಾರ್ಖಂಡ್, ಬಿಹಾರ್, ಉತ್ತರ ಪ್ರದೇಶ, ಉತ್ತರಾಖಂಡ್ ಹಾಗೂ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳಲ್ಲಿನ ಇಂಧನ, ರಸ್ತೆ, ರೈಲ್ವೆ ವಲಯದ ಪ್ರಮುಖ ಮೂಲಸೌಕರ್ಯ ಯೋಜನೆಗಳ ಪ್ರಗತಿಯನ್ನೂ ಪ್ರಧಾನಮಂತ್ರಿಯವರು ಪರಿಶೀಲಿಸಿದರು.