ಪ್ರತಿಕಾ ಹೇಳಿಕೆ
ಘನತೆವೆತ್ತ ಅಧ್ಯಕ್ಷರಾದ ರಮಾಫೋಸಾ ಅವರೇ, ದಕ್ಷಿಣ ಆಫ್ರಿಕಾದಿಂದ ಆಗಮಿಸಿರುವ ಗೌರವಾನ್ವಿತ ಅತಿಥಿಗಳೇ, ಸ್ನೇಹಿತರೇ,
ಭಾರತದ ಅವಿಭಾಜ್ಯ ಸ್ನೇಹಿತರಾದ ಅಧ್ಯಕ್ಷ ರಮಾಫೋಸಾ ಅವರು ಇಂದು ನಮ್ಮೊಂದಿಗಿರುವುದು ಸಂತಸದ ವಿಷಯವಾಗಿದೆ. ಭಾರತ ಅವರಿಗೆ ಹೊಸದಲ್ಲ, ಆದರೆ ಅಧ್ಯಕ್ಷರಾಗಿ ಇದು ಅವರ ಮೊದಲ ಭಾರತ ಭೇಟಿ. ನಮ್ಮ ಸಂಬಂಧಗಳ ವಿಶೇಷ ಸಂದರ್ಭದಲ್ಲಿ ಅವರ ಭಾರತ ಭೇಟಿ ನಡೆದಿದೆ. ಇದು ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ಜಯಂತಿ. ಕಳೆದ ವರ್ಷ ನೆಲ್ಸನ್ ಮಂಡೇಲಾ ಅವರ ಜನ್ಮ ಶತಮಾನೋತ್ಸವ. ಹಾಗೆಯೇ ಕಳೆದ ವರ್ಷ ನಮ್ಮ ರಾಜತಾಂತ್ರಿಕ ಸಂಬಂಧಗಳ ಅಮೃತ ಮಹೋತ್ಸವ ವರ್ಷ. ಅಧ್ಯಕ್ಷ ರಮಾಫೋಸಾ ಅವರು ಇಂತಹ ವಿಶೇಷ ಸಂದರ್ಭದಲ್ಲಿ ಭಾರತಕ್ಕೆ ಬಂದಿರುವುದು ನನಗೆ ಸಂತೋಷವಾಗಿದೆ. ನಾಳೆ ನಡೆಯುವ ಗಣರಾಜ್ಯೋತ್ಸವ ಆಚರಣೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿರುವುದರಿಂದ ಅವರ ಭಾರತ ಭೇಟಿ ನಮಗೆ ವಿಶೇಷ ಮಹತ್ವದ್ದಾಗಿದೆ. ಅವರು ನಮಗೆ ನೀಡಿರುವ ಈ ಎಲ್ಲ ಗೌರವಾದರಗಳಿಗೆ ಭಾರತ ಕೃತಜ್ಞವಾಗಿದೆ. ಈ ಗೌರವವನ್ನು ನೀಡಲು ನಮಗೆ ಅವಕಾಶ ನೀಡಿದ್ದಕ್ಕಾಗಿ ಇಡೀ ಭಾರತವು ಅವರಿಗೆ ಕೃತಜ್ಞವಾಗಿದೆ.
ಸ್ನೇಹಿತರೇ,
2016ರಲ್ಲಿ ನಾನು ದಕ್ಷಿಣ ಆಫ್ರಿಕಾಗೆ ಹೋಗಿದ್ದಾಗ ಮೊದಲ ಬಾರಿ ಅಧ್ಯಕ್ಷ ರಮಾಫೋಸಾ ಅವರನ್ನು ಭೇಟಿಯಾಗಿದ್ದೆ. ಆ ಸಮಯದಲ್ಲಿ ಅವರು ಉಪಾಧ್ಯಕ್ಷರಾಗಿದ್ದರು. ಅವರಿಗೆ ಭಾರತದ ಬಗೆಗಿರುವ ಉತ್ಸಾಹ ಹಾಗೂ ಪ್ರೀತಿ ನಮ್ಮ ಮೊದಲ ಭೇಟಿಯಲ್ಲೇ ನನ್ನ ಅನುಭವಕ್ಕೆ ಬಂದಿದೆ. ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್ ಶೃಂಗದ ಸಮಯದಲ್ಲಿ ಅವರು ನೀಡಿದ ಅದ್ಭುತವಾದ ಆತಿಥ್ಯವನ್ನು ನಾನು ಅನುಭವಿಸಿದೆ. ದೆಹಲಿಯಲ್ಲಿ ಈಗ ಚಳಿಗಾಲವಿದ್ದರೂ ಅಧ್ಯಕ್ಷ ರಮಾಫೋಸಾ ಅವರು ಈ ಪ್ರವಾಸದಲ್ಲಿ ಭಾರತದ ಬೆಚ್ಚನೆಯ ಸ್ವಾಗತವನ್ನು ಅನುಭವಿಸುತ್ತಾರೆ ಎಂದು ನಾನು ನಂಬಿದ್ದೇನೆ. ಅಧ್ಯಕ್ಷರು ಮತ್ತು ಅವರ ತಂಡವನ್ನು ನಾನು ಆತ್ಮೀಯವಾಗಿ ಸ್ವಾಗತಿಸುತ್ತೇನೆ.
ಸ್ನೇಹಿತರೇ,
ಅಧ್ಯಕ್ಷರೊಂದಿಗೆ ಇಂದು ನಾವು ನಡೆಸಿದ ಮಾತುಕತೆಯಲ್ಲಿ ನಮ್ಮ ಸಂಬಂಧಗಳ ಎಲ್ಲ ಆಯಾಮಗಳನ್ನೂ ಪರಿಶೀಲಿಸಿದ್ದೇವೆ. ನಮ್ಮ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳು ಮತ್ತಷ್ಟು ತೀವ್ರವಾಗುತ್ತಿವೆ. ನಮ್ಮ ದ್ವಿಪಕ್ಷೀಯ ವ್ಯಾಪಾರ 10 ಬಿಲಿಯನ್ ಡಾಲರ್ ಗಳಿಗೂ ಅಧಿಕವಾಗಿದೆ. ಈ ವರ್ಷ ನಡೆದ ‘ವೈಬ್ರಂಟ್ ಗುಜರಾತ್’ ಶೃಂಗದಲ್ಲಿ ದಕ್ಷಿಣ ಆಫ್ರಿಕಾವು ಪಾಲುದಾರ ರಾಷ್ಟ್ರವಾಗಿ ಭಾಗವಹಿಸಿತ್ತು. ದಕ್ಷಿಣ ಆಫ್ರಿಕಾದಲ್ಲಿ ಹೂಡಿಕೆಯ ಹೆಚ್ಚಳಕ್ಕಾಗಿ ಅಧ್ಯಕ್ಷ ರಮಾಫೋಸಾ ಮಾಡಿದ ಪ್ರಯತ್ನಗಳಿಂದಾಗಿ ಭಾರತೀಯ ಕಂಪನಿಗಳು ಹೆಚ್ಚು ಕ್ರಿಯಾಶೀಲವಾಗಿ ಭಾಗವಹಿಸುತ್ತಿವೆ. ದಕ್ಷಿಣ ಆಫ್ರಿಕಾದ ಕೌಶಲ್ಯಾಭಿವೃದ್ಧಿ ಪ್ರಯತ್ನಗಳಲ್ಲಿ ನಾವೂ ಸಹ ಪಾಲುದಾರರು. ಪ್ರಿಟೋರಿಯಾದಲ್ಲಿ ಸದ್ಯದಲ್ಲೇ ಗಾಂಧಿ-ಮಂಡೇಲಾ ಕೌಶಲ್ಯ ಸಂಸ್ಥೆ ಆರಂಭವಾಗಲಿದೆ. ಈ ಸಂಬಂಧಗಳನ್ನು ಮತ್ತೊಂದು ಹೊಸ ಹಂತಕ್ಕೆ ಕೊಂಡೊಯ್ಯಲು ನಾವಿಬ್ಬರೂ ಬದ್ಧರಾಗಿದ್ದೇವೆ. ಅದಕ್ಕಾಗಿ ಎರಡೂ ದೇಶಗಳ ಪ್ರಮುಖ ಉದ್ಯಮಿಗಳನ್ನು ನಾವು ಸದ್ಯದಲ್ಲೇ ಭೇಟಿ ಮಾಡುತ್ತೇವೆ.
ಸ್ನೇಹಿತರೇ,
ನಾವು ಪ್ರಪಂಚದ ಭೂಪಟವನ್ನು ನೋಡಿದರೆ, ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡೂ ಹಿಂದೂ ಮಹಾಸಾಗರದ ಪ್ರಮುಖ ಸ್ಥಳಗಳಲ್ಲಿವೆ ಎಂಬುದು ಸ್ಪಷ್ಟವಾಗುತ್ತದೆ. ನಾವಿಬ್ಬರೂ ವೈವಿಧ್ಯತೆಯಿಂದ ಕೂಡಿರುವ ಪ್ರಜಾಪ್ರಭುತ್ವ ದೇಶಗಳು. ನಾವು ಮಹಾತ್ಮ ಗಾಂಧಿ ಮತ್ತು ನೆಲ್ಸನ್ ಮಂಡೇಲಾ ಅವರ ಪರಂಪರೆಯ ಉತ್ತರಾಧಿಕಾರಿಗಳು. ಹಾಗಾಗಿಯೇ ಎರಡೂ ದೇಶಗಳ ಜಾಗತಿಕ ದೃಷ್ಟಿಕೋನ ಒಂದೇ ಆಗಿದೆ. ಬ್ರಿಕ್ಸ್, ಜಿ-20, ಇಂಡಿಯನ್ ಓಷಿಯನ್ ರಿಮ್ ಅಸೋಸಿಯೇಷನ್, ಐ ಬಿ ಎಸ್ ಎ ಯಂತಹ ಹಲವಾರು ವೇದಿಕೆಗಳಲ್ಲಿ ನಮ್ಮ ಪರಸ್ಪರ ಸಹಕಾರ ಮತ್ತು ಸಹಯೋಗ ಸದೃಢವಾಗಿದೆ. ಹಾಗೆಯೇ ನಾವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಯಲ್ಲೂ ಜೊತೆಯಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಅಧ್ಯಕ್ಷರ ಭಾರತ ಭೇಟಿಯ ವಿಶೇಷ ಕಾರ್ಯಕ್ರಮವಾಗಿ ಮೊದಲ ‘ಗಾಂಧಿ-ಮಂಡೇಲಾ ಸ್ವಾತಂತ್ರ್ಯ ಉಪನ್ಯಾಸ’ವನ್ನು ಇಂದು ಆಯೋಜಿಸಲಾಗಿದೆ. ನಾನಷ್ಟೇ ಅಲ್ಲ, ಸಮಸ್ತ ಭಾರತ ಮತ್ತು ಸಮಸ್ತ ದಕ್ಷಿಣ ಆಫ್ರಿಕಾ ಗೌರವಾನ್ವಿತ ಅಧ್ಯಕ್ಷರ ಆಲೋಚನೆಗಳನ್ನು ಕೇಳಲು ಕಾತುರವಾಗಿವೆ.
ಸ್ನೇಹಿತರೇ,
ಗಣರಾಜ್ಯೋತ್ಸವ ದಿನದಂದು ಅಧ್ಯಕ್ಷ ರಮಾಫೋಸಾ ಅವರ ಉಪಸ್ಥಿತಿ ಮತ್ತು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿರುವುದು ನಮ್ಮ ಸಂಬಂಧಗಳನ್ನು ಸದೃಢಗೊಳಿಸುವ ನಮ್ಮ ಬದ್ಧತೆಯ ಸಂಕೇತವಾಗಿದೆ. ಮತ್ತೊಮ್ಮೆ ಅಧ್ಯಕ್ಷರಿಗೆ ಆತ್ಮೀಯವಾದ ಸ್ವಾಗತ