ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಮೆರಿಕದ ಉಪಾಧ್ಯಕ್ಷೆ, ಗೌರವಾನ್ವಿತ ಕಮಲಾ ಹ್ಯಾರಿಸ್ ಅವರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದರು.
“ಜಾಗತಿಕ ಲಸಿಕೆ ಹಂಚಿಕೆ ಕಾರ್ಯತಂತ್ರ”ದ ಅಡಿಯಲ್ಲಿ ಭಾರತ ಸೇರಿದಂತೆ ಇತರ ರಾಷ್ಟ್ರಗಳಿಗೆ ಕೋವಿಡ್-19 ವಿರುದ್ಧ ಲಸಿಕೆ ಲಭ್ಯವಾಗುವಂತೆ ಮಾಡಲು ಅಮೆರಿಕ ಹಾಕಿಕೊಂಡಿರುವ ಯೋಜನೆಗಳ ಕುರಿತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಪ್ರಧಾನಮಂತ್ರಿ ಅವರಿಗೆ ಮಾಹಿತಿ ನೀಡಿದರು.
ಅಮೆರಿಕದ ನಿರ್ಧಾರಕ್ಕಾಗಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಪ್ರಧಾನಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಅಮೆರಿಕ ಸರ್ಕಾರ ವ್ಯಾಪಾರ ವಹಿವಾಟು ಮತ್ತು ಅಮೆರಿಕದಲ್ಲಿನ ಭಾರತೀಯ ವಲಸಿಗ ಸಮುದಾಯದ ರಕ್ಷಣೆಗೆ ಅಮೆರಿಕಾ ನೀಡುತ್ತಿರುವ ಎಲ್ಲ ರೀತಿಯ ಬೆಂಬಲ ಮತ್ತು ಒಗ್ಗಟ್ಟನ್ನು ಶ್ಲಾಘಿಸಿದರು.
ಲಸಿಕೆ ಉತ್ಪಾದನಾ ವಲಯ ಸೇರಿದಂತೆ ಭಾರತ – ಅಮೆರಿಕ ನಡುವಿನ ಆರೋಗ್ಯ ಪೂರೈಕೆ ಸರಣಿ ಬಲವರ್ಧನೆಯಲ್ಲಿ ನಡೆಯುತ್ತಿರುವ ಪ್ರಯತ್ನಗಳ ಕುರಿತು ಉಭಯ ನಾಯಕರು ಚರ್ಚೆ ನಡೆಸಿದರು. ಸಾಂಕ್ರಾಮಿಕದಿಂದ ಆಗಲಿರುವ ದೀರ್ಘಾವಧಿಯ ಆರೋಗ್ಯ ಪರಿಣಾಮಗಳನ್ನು ಪರಿಹರಿಸುವಲ್ಲಿ ಅವರು ಭಾರತ – ಅಮೆರಿಕ ಸಹಭಾಗಿತ್ವದ ಸಾಮರ್ಥ್ಯ ಮತ್ತು ಕ್ವಾಡ್ ಲಸಿಕೆ ಉಪಕ್ರಮದ ಬಗ್ಗೆ ಬಲವಾಗಿ ಪ್ರತಿಪಾದಿಸಿದರು.
ಜಾಗತಿಕ ಆರೋಗ್ಯ ಸ್ಥಿತಿಗತಿ ಸುಧಾರಿಸಿ ಸಹಜಸ್ಥಿತಿಗೆ ಬಂದ ನಂತರ ಶೀಘ್ರವೇ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಭಾರತದಲ್ಲಿ ಸ್ವಾಗತಿಸುವ ವಿಶ್ವಾಸವನ್ನು ಪ್ರಧಾನಮಂತ್ರಿ ವ್ಯಕ್ತಪಡಿಸಿದರು.