ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋಸೆಫ್ ಆರ್ ಬೈಡೆನ್ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದರು.
ಅಮೆರಿಕ ನೂತನ ಅಧ್ಯಕ್ಷ ಬೈಡೆನ್ ಅವರನ್ನು ಮನಪೂರ್ವಕ ಅಭಿನಂದಿಸಿದ ಪ್ರಧಾನ ಮಂತ್ರಿ, ಬೈಡೆನ್ ಆಡಳಿತಾವಧಿಗೆ ಶುಭ ಕೋರಿದರು. ಭಾರತ-ಅಮೆರಿಕ ನಡುವಿನ ಕಾರ್ಯತಂತ್ರ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸಲು ನಿಕಟವಾಗಿ ಕಾರ್ಯ ನಿರ್ವಹಿಸಲು ಎದುರು ನೋಡುತ್ತಿರುವುದಾಗಿ ನರೇಂದ್ರ ಮೋದಿ ತಿಳಿಸಿದರು.
ಉಭಯ ನಾಯಕರು ಪ್ರಾದೇಶಿಕ ಅಭಿವೃದ್ಧಿ ವಿಷಯಗಳು ಮತ್ತು ಅಂತಾರಾಷ್ಟ್ರೀಯ ರಾಜಕೀಯ ಬೆಳವಣಿಗೆಗಳ ಕುರಿತು ಸಮಾಲೋಚನೆ ನಡೆಸಿದರು. ಭಾರತ-ಅಮೆರಿಕ ಪಾಲುದಾರಿಕೆಯು ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಸಾಮಾನ್ಯ ಕಾರ್ಯತಂತ್ರ ಹಿತಾಸಕ್ತಿಗಳ ಮೇಲೆ ದೃಢವಾಗಿ ನಿಂತಿದೆ ಎಂಬುದನ್ನು ಇಬ್ಬರೂ ನಾಯಕರು ಮೆಲುಕು ಹಾಕಿದರು. ಸಮಾನ ಮನಸ್ಥಿತಿಯ ದೇಶಗಳು ಅಂತಾರಾಷ್ಟ್ರೀಯ ನಿಯಮಗಳಿಗೆ ಅನುಸಾರವಾಗಿ ಒಗ್ಗೂಡಿ, ಮುಕ್ತ ಮತ್ತು ಪಾರದರ್ಶಕವಾಗಿ ಕಾರ್ಯ ನಿರ್ವಹಿಸುವ ಅಗತ್ಯವಿದೆ. ಇಂಡೋ-ಪೆಸಿಫಿಕ್ ವಲಯದ ಅಭಿವೃದ್ಧಿಗೆ ಕೈಜೋಡಿಸುವ ಅಗತ್ಯವನ್ನು ಉಭಯ ನಾಯಕರು ಪ್ರತಿಪಾದಿಸಿದರು.
ಜಾಗತಿಕ ಹವಾಮಾನ ಬದಲಾವಣೆಯಿಂದ ಎದುರಾಗಿರುವ ಸವಾಲುಗಳನ್ನು ಪರಿಹರಿಸಲು ಇರುವ ಮಹತ್ವಗಳ ಕುರಿತು ನಾಯಕರು ಚರ್ಚಿಸಿದರು. ಹವಾಮಾನ ಬದಲಾವಣೆ ಕುರಿತ ಪ್ಯಾರಿಸ್ ಒಪ್ಪಂದವನ್ನು ಅನುಮೋದಿಸುವುದಾಗಿ (ಮರುಬದ್ಧತೆ ತೋರಲು) ಅಧ್ಯಕ್ಷ ಬೈಡೆನ್ ಕೈಗೊಂಡಿರುವ ನಿರ್ಧಾರವನ್ನು ನರೇಂದ್ರ ಮೋದಿ ಸ್ವಾಗತಿಸಿದರು. ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಭಾಋತ ಹಾಕಿರುವ ಮಹತ್ವಾಕಾಂಕ್ಷಿ ಗುರಿಯ ಕುರಿತು ಮೋದಿ ಪ್ರಸ್ತಾಪಿಸಿದರು. ಅಧ್ಯಕ್ಷ ಬೈಡೆನ್ ಅವರು ಈ ವರ್ಷದ ಏಪ್ರಿಲ್’ನಲ್ಲಿ ಹವಾಮಾನ ಬದಲಾವಣೆ ನಾಯಕರ ಸಮಾವೇಶ ಆಯೋಜಿಸಿರುವುದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವಾಗತಿಸಿದರು. ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ಎದುರು ನೋಡುತ್ತಿರುವುದಾಗಿ ಪ್ರಧಾನ ಮಂತ್ರಿ ತಿಳಿಸಿದರು.
ಆದಷ್ಟು ಬೇಗ ಭಾರತಕ್ಕೆ ಆಗಮಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಧ್ಯಕ್ಷ ಬೈಡೆನ್ ಮತ್ತು ಡಾ. ಜಿಲ್ ಬೈಡೆನ್ ಅವರಿಗೆ ಆಹ್ವಾನ ನೀಡಿದರು.
President @JoeBiden and I are committed to a rules-based international order. We look forward to consolidating our strategic partnership to further peace and security in the Indo-Pacific region and beyond. @POTUS
— Narendra Modi (@narendramodi) February 8, 2021