ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಸೌದಿ ಅರೆಬಿಯಾದ ಗೌರವಾನ್ವಿತ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲಾಜೀಜ್ ಅಲ್ ಸೌದ್ ಇಂದು ದೂರವಾಣಿ ಸಮಾಲೋಚನೆ ನಡೆಸಿದರು.
ಉಭಯ ನಾಯಕರು 2019ರಲ್ಲಿ ಸ್ಥಾಪಿಸಿರುವ ದ್ವಿಪಕ್ಷೀಯ ಕಾರ್ಯತಂತ್ರ ಪಾಲುದಾರಿಕೆ ಮಂಡಳಿಯ ಕಾರ್ಯಗಳ ಪರಾಮರ್ಶೆ ನಡೆಸಿದರು ಮತ್ತು ಭಾರತ-ಸೌದಿ ಪಾಲುದಾರಿಕೆ ಸ್ಥಿರ ಬೆಳವಣಿಗೆ ಕಾಣುತ್ತಿರುವ ಬಗ್ಗೆ ತೃಪ್ತಿಯನ್ನು ವ್ಯಕ್ತಪಡಿಸಿದರು. ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆಯನ್ನು ಮತ್ತಷ್ಟು ಹೆಚ್ಚಿಸುವ ಆಶಯವನ್ನು ಪ್ರಧಾನಮಂತ್ರಿ ವ್ಯಕ್ತಪಡಿಸಿದರು ಮತ್ತು ಭಾರತೀಯ ಆರ್ಥಿಕತೆ ಸೌದಿ ಅರೆಬಿಯಾದ ಹೂಡಿಕೆದಾರರಿಗೆ ಒದಗಿಸುತ್ತಿರುವ ಅವಕಾಶಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು.
ಭಾರತ ಮತ್ತು ಸೌದಿ ಅರೆಬಿಯಾ ನಡುವಿನ ವಿಶೇಷ ಸ್ನೇಹ ಮತ್ತು ಜನರ ನಡುವಿನ ಸಂಬಂಧದ ಸಂಪರ್ಕದ ಪ್ರೇರಣೆಯಿಂದಾಗಿ ಕೋವಿಡ್-19 ಸಾಂಕ್ರಾಮಿಕದ ವಿರುದ್ಧದ ಪರಸ್ಪರರ ಪ್ರಯತ್ನಗಳನ್ನು ಬೆಂಬಲಿಸುವುದನ್ನು ಮುಂದುವರಿಸಲು ಉಭಯ ನಾಯಕರು ತೀರ್ಮಾನಿಸಿದರು. ಅಲ್ಲದೆ ಅವರು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಬೆಳವಣಿಗೆಯ ಕುರಿತು ಪರಾಮರ್ಶೆ ನಡೆಸಿದರು.
ಆದಷ್ಟು ಶೀಘ್ರ ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಮಂತ್ರಿ ಗೌರವಾನ್ವಿತ ದೊರೆಗೆ ಆಹ್ವಾನವನ್ನು ಪುನರುಚ್ಚರಿಸಿದರು.